ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆಕ್ಷೇಪಿಸಿ ಪಿಐಎಲ್; ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು: ಅನುದಾನ ಹಂಚಿಕೆಯಲ್ಲಿ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷದ ಶಾಸಕರ ನಡುವೆ ತಾರತಮ್ಯ ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿ ಶ್ರೀನಿವಾಸಪುರ ಕ್ಷೇತ್ರದ ಜೆಡಿಎಸ್‌ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್‌ ಜಾರಿಗೊಳಿಸಿದೆ.

ವೆಂಕಟಶಿವಾರೆಡ್ಡಿ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ, ಶ್ರೀನಿವಾಸಪುರ ಪುರಸಭೆ ವ್ಯಾಪ್ತಿಯ ಗ್ರಾಮಗಳು ಹಾಗೂ ಹೊಸದಾಗಿ ಸೇರ್ಪಡೆಗೊಂಡ ವಾರ್ಡ್‌ಗಳ ಅಭಿವೃದ್ಧಿಗೆ 2019ರಲ್ಲಿ ಮಂಜೂರು ಮಾಡಲಾಗಿರುವ ಅನುದಾನವನ್ನು ಈವರೆಗೂ ಬಿಡುಗಡೆ ಮಾಡಿಲ್ಲ ಎಂಬ ವಿಚಾರಕ್ಕೆ ಸೀಮಿತವಾಗಿ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿತು.

ಇದೇ ವೇಳೆ, ಅನುದಾನ ತಾರತಮ್ಯಕ್ಕೆ ಸಂಬಂಧಿಸಿದಂತೆ‌ ಈಗಾಗಲೇ ಅರ್ಜಿಯೊಂದು ಸಲ್ಲಿಕೆಯಾಗಿದ್ದು, ಅಂಥದ್ದೇ ಮನವಿಯನ್ನು ಮತ್ತೊಂದು ಪ್ರತ್ಯೇಕ ಅರ್ಜಿಯಲ್ಲಿ ಪರಿಗಣಿಸುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟ ಪೀಠ, ಮಂಜೂರಾದ ಅನುದಾನ ಈವರೆಗೂ ಏಕೆ ಬಿಡುಗಡೆಯಾಗಿಲ್ಲ ಎಂಬ ಬಗ್ಗೆ ಮಾಹಿತಿ ಪಡೆದು ತಿಳಿಸುವಂತೆ ಸರ್ಕಾರಿ ವಕೀಲರಿಗೆ ನಿರ್ದೇಶಿಸಿ, ವಿಚಾರಣೆಯನ್ನು 2026 ಜನವರಿ 21ಕ್ಕೆ ಮುಂದೂಡಿತು.

ಬೇರೊಂದು ಅರ್ಜಿಯಲ್ಲಿ ನೋಟಿಸ್ ಜಾರಿಗೊಳಿಸಿರುವ ಹೈಕೋರ್ಟ್:
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜಾರಿಗೆ ತರಲಾಗಿರುವ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ (ಸಿಎಂಐಡಿಪಿ) ಶಾಸಕರಿಗೆ ಅನುದಾನ‌ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಆಡಳಿತ ಪಕ್ಷದ ಶಾಸಕರಿಗೆ‌ 50 ಕೋಟಿ ರೂ. ಹಾಗೂ ವಿರೋಧ ಪಕ್ಷದ ಶಾಸಕರಿಗೆ 25 ಕೋಟಿ ರೂ. ಅನುದಾ‌ನ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿ ಬಾಗಲಕೋಟೆ ‌ಜಿಲ್ಲೆಯ ಜಮಖಂಡಿ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ಜಗದೀಶ್ ಗುಡಗುಂಟಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಸಂಬಂಧ ಇತ್ತೀಚೆಗೆ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

Related Articles

Comments (0)

Leave a Comment