ಅಕ್ರಮ ಟೋಲ್ ಸಂಗ್ರಹ ಪ್ರಶ್ನಿಸಿ ಪಿಐಎಲ್; ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ನೋಟಿಸ್

ಬೆಂಗಳೂರು: ಕರ್ನಾಟಕ-ಗೋವಾ ಗಡಿಭಾಗದಲ್ಲಿ ಹಾದು ಹೋಗುವ ಬೆಳಗಾವಿ-ಗೋವಾ ರಾಷ್ಟ್ರೀಯ ಹೆದ್ದಾಾರಿ 748ರಲ್ಲಿ ಖಾನಾಪುರ ತಾಲೂಕಿನ ಗಣೇಬೈಲ್ ಟೋಲ್ ನಾಕಾದಲ್ಲಿ ಅಕ್ರಮವಾಗಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಕೃಷ್ಣಾಜಿ ಪಾಟೀಲ್ ಹಾಗೂ ಇತರ ಸ್ಥಳೀಯ ಗ್ರಾಮಸ್ಥರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ ಜೋಶಿ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಬೆಳಗಾವಿ ಜಿಲ್ಲಾಡಳಿತಕ್ಕೆ ನೋಟಿಸ್ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಸಲು ಸೂಚಿಸಿ ವಿಚಾರಣೆಯನ್ನು ನವೆಂಬರ್ 3ಕ್ಕೆ ಮುಂದೂಡಿತು.

ಮನವಿ ಏನು?
ಗೋವಾ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಖಾನಾಪುರ-ಬೆಳಗಾವಿ ನಡುವೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೈಗೊಂಡಿರುವ ಹೆದ್ದಾರಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿಲ್ಲ. ದೇಸೂರು ಗ್ರಾಮ ದಾಟಿ ಖಾನಾಪುರದ ಕಡೆಗೆ ಪ್ರಯಾಣ ಮಾಡುವಾಗ ಗಣೇಬೈಲ್ ಟೋಲ್ ನಾಕಾಗೆ 10 ಕಿ.ಮೀ. ಅಂತರ ಇದ್ದು, ಇಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲ. ಹಲಗಾ ಬಸ್ತವಾಡ ಗ್ರಾಮದ ರೈತರ ಪ್ರತಿಭಟನೆಯಿಂದಾಗಿ ಕಳೆದ ನಾಲ್ಕೈದು ವರ್ಷಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ. ಆದರೂ, ಗಣೇಬೈಲ್ ಟೋಲ್ ನಾಕಾದಲ್ಲಿ ಅಕ್ರಮವಾಗಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಈ ಬಗ್ಗೆ ಹೆದ್ದಾರಿ ಸಚಿವಾಲಯ ಮತ್ತು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ, ಯಾವುದೇ ಕ್ರಮ ಆಗಿಲ್ಲ. ಆದ್ದರಿಂದ, ಗಣೇಬೈಲ್ ಟೋಲ್ ನಾಕಾದಲ್ಲಿ ಟೋಲ್ ಸಂಗ್ರಹಿಸದಂತೆ ಹೆದ್ದಾರಿ ಸಚಿವಾಲಯ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಾಧಿಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Related Articles

Comments (0)

Leave a Comment