ಐಸೆಕ್ ನಿರ್ದೇಶಕರ ನೇಮಕಾತಿ ಮಾನದಂಡ ಪ್ರಶ್ನಿಸಿದ ಅರ್ಜಿ; ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
- by Jagan Ramesh
- September 2, 2025
- 91 Views

ಬೆಂಗಳೂರು: ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆ (ಐಸೆಕ್) ನಿರ್ದೇಶಕರ ಹುದ್ದೆಯ ನೇಮಕಾತಿಗೆ ನಿಗದಿಪಡಿಸಿರುವ ಶೈಕ್ಷಣಿಕ ಅರ್ಹತೆ ಹಾಗೂ ಅನುಭವದ ಮಾನದಂಡಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಐಸೆಕ್‌ನ ಪ್ರಾಧ್ಯಾಪಕ ಡಾ. ಸಿ.ಎಂ. ಲಕ್ಷ್ಮಣ ಎಂಬುವರು ಸಲ್ಲಿಸಿರುವ ರಿಟ್ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪಸಾದ್ ಅವರಿದ್ದ ಏಕಸದಸ್ಯ ನ್ಯಾಾಯಪೀಠ, ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಐಸೆಕ್ ರಿಜಿಸ್ಟ್ರಾರ್ ಹಾಗೂ ಆಡಳಿತ ಮಂಡಳಿ ಅಧ್ಯಕ್ಷರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಸೆಪ್ಟಂಬರ್ 8ಕ್ಕೆ ಮುಂದೂಡಿತು.
ಅರ್ಜಿದಾರರ ಮನವಿ ಏನು?
ಐಸೆಕ್ ಸಂಸ್ಥೆಯ ನಿರ್ದೇಶಕರ ನೇಮಕಾತಿ ಸಂಬಂಧ 2025ರ ಮಾರ್ಚ್ 1ರಂದು ನಡೆದ ಆಡಳಿತ ಮಂಡಳಿಯ 214ನೇ ಸಭೆಯಲ್ಲಿ ಶೈಕ್ಷಣಿಕ ಅರ್ಹತೆ ಮತ್ತು ಅನುಭವದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಇದು ನಿಯಮಬಾಹಿರವಾಗಿದೆ. ನಿರ್ದೇಶಕರ ನೇಮಕಾತಿಗೆ ಮಾನದಂಡಗಳನ್ನು ನಿಗದಿಪಡಿಸಲು ಆಡಳಿತ ಮಂಡಳಿಗೆ ಅಧಿಕಾರವಿಲ್ಲ. ಇದರ ನಡುವೆ ನಿರ್ದೇಶಕರ ನೇಮಕಾತಿ ಸಂಬಂಧ ರಿಜಿಸ್ಟ್ರಾರ್ 2025ರ ಜುಲೈ 26ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ಆಡಳಿತ ಮಂಡಳಿಯ ತೀರ್ಮಾನಕ್ಕೆ ವ್ಯತಿರಿಕ್ತವಾಗಿ ಮಾನದಂಡಗಳನ್ನು ಸೂಚಿಸಲಾಗಿದೆ. ಆದ್ದರಿಂದ, ಆಡಳಿತ ಮಂಡಳಿಯ ನಿರ್ಣಯ ಹಾಗೂ ರಿಜಿಸ್ಟ್ರಾರ್ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು. ಜತೆಗೆ, ಅರ್ಜಿದಾರರಿಗೆ ನಿರ್ದೇಶಕರ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡುವಂತೆ ಐಸೆಕ್ ಸಂಸ್ಥೆಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
Related Articles
Thank you for your comment. It is awaiting moderation.
Comments (0)