ವಿದ್ಯಾರ್ಥಿಗಳ ಕುಂದುಕೊರತೆ ಪರಿಹಾರ ಸಮಿತಿ ರಚನೆಗೆ ಕೋರಿ ರಿಟ್; ಕೆಎಸ್‌ಎಲ್‌ಯು, ಯುಜಿಸಿಗೆ ಹೈಕೋರ್ಟ್ ನೋಟಿಸ್
- by Jagan Ramesh
- January 14, 2026
- 8 Views
ವಿದ್ಯಾರ್ಥಿಗಳ ಕುಂದುಕೊರತೆ ಪರಿಹಾರ ಸಮಿತಿ ರಚನೆಗೆ ಕೋರಿ ರಿಟ್; ಕೆಎಸ್‌ಎಲ್‌ಯು, ಯುಜಿಸಿಗೆ ಹೈಕೋರ್ಟ್ ನೋಟಿಸ್
ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (ಕೆಎಸ್‌ಎಲ್‌ಯು) ಹಾಗೂ ಅದರ ಅಧೀನದಲ್ಲಿ ಬರುವ ಕಾಲೇಜು ಮತ್ತು ಸಂಸ್ಥೆಗಳಲ್ಲಿ ‘ವಿದ್ಯಾರ್ಥಿಗಳ ಕುಂದುಕೊರತೆ ಪರಿಹಾರ ಸಮಿತಿ’ (ಎಸ್‌ಜಿಆರ್‌ಸಿ) ರಚಿಸಲು ನಿರ್ದೇಶಿಸುವಂತೆ ಕೋರಿ ಕಾನೂನು ಪದವಿ ವಿದ್ಯಾರ್ಥಿಯೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಬೆಂಗಳೂರಿನ ಬಿಎಂಎಸ್ ಕಾನೂನು ಕಾಲೇಜಿನ ಮೂರನೇ ವರ್ಷದ ಕಾನೂನು ಪದವಿ ವಿದ್ಯಾರ್ಥಿ ಕೆ.ಎನ್. ಪ್ರಣವ (25) ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು. ಅರ್ಜಿದಾರ ಕೆ.ಎನ್. ಪ್ರಣವ ಖುದ್ದು ವಾದ ಮಂಡಿಸಿದರು.
ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ಕೆಎಸ್‌ಎಲ್‌ಯು ವಿಸಿ ಹಾಗೂ ರಿಜಿಸ್ಟ್ರಾರ್ ಹಾಗೂ ಯುಜಿಸಿ ಅಧ್ಯಕ್ಷರಿಗೆ ನೋಟಿಸ್ ಜಾರಿಗೊಳಿಸಿ, ಅರ್ಜಿ ವಿಚಾರಣೆಯನ್ನು ಫೆಬ್ರವರಿ 4ಕ್ಕೆ ಮುಂದೂಡಿತು.
ಅರ್ಜಿದಾರರ ಮನವಿ ಏನು?
ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) (ವಿದ್ಯಾರ್ಥಿಗಳ ಕುಂದುಕೊರತೆ ಪರಿಹಾರ ನಿಯಮಗಳು) 2023ರ ಪ್ರಕಾರ ಪ್ರತಿ ಕಾನೂನು ವಿವಿ ಹಾಗೂ ಕಾಲೇಜುಗಳಲ್ಲಿ ಕಡ್ಡಾಯವಾಗಿ ಎಸ್‌ಜಿಆರ್‌ಸಿ ರಚಿಸಿ, ಅದಕ್ಕೆ ಒಂಬಡ್ಸಮನ್ ನೇಮಕ ಮಾಡಬೇಕು. ಆದರೆ, ಕೆಎಸ್‌ಎಲ್‌ಯು ಹಾಗೂ ರಾಜ್ಯಾದ್ಯಂತ ಅದರ ಅಧೀನದ ಕಾಲೇಜು ಮತ್ತು ಸಂಸ್ಥೆಗಳಲ್ಲಿ ಈ ಸಮಿತಿಗಳನ್ನು ರಚಿಸಲಾಗಿಲ್ಲ. ಈ ಬಗ್ಗೆ ಕಾನೂನು ವಿಶ್ವವಿದ್ಯಾಲಯದ ಕುಲಪತಿ, ರಿಜಿಸ್ಟ್ರಾರ್ ಹಾಗೂ ಯುಜಿಸಿ ಅಧ್ಯಕ್ಷರಿಗೆ 2025ರ ನವೆಂಬರ್ 8 ಮತ್ತು ಡಿಸೆಂಬರ್ 8ರಂದು ಇ-ಮೇಲ್ ಮೂಲಕ ಮನವಿ ಸಲ್ಲಿಸಲಾಗಿದೆ. ಆದರೆ, ಯಾವುದೇ ಕ್ರಮ ಜರುಗಿಸಿಲ್ಲ. ಆದ್ದರಿಂದ, ಈ ನಿಟ್ಟಿನಲ್ಲಿ ಸೂಕ್ತ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
Related Articles
Thank you for your comment. It is awaiting moderation.


Comments (0)