ಮಾನಹಾನಿ ಸುದ್ದಿ ಲಿಂಕ್‌ಗಳ ತೆರವಿಗೆ ಕೋರಿ ಶ್ರೀಲಂಕಾ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಿಂದ ಅರ್ಜಿ; ಗೂಗಲ್‌ಗೆ ಹೈಕೋರ್ಟ್ ನೋಟಿಸ್

ಬೆಂಗಳೂರು: ಶ್ರೀಲಂಕಾ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಎ.ಎಚ್‌.ಎಂ.ಡಿ. ನವಾಜ್‌ ತಮ್ಮ ವಿರುದ್ಧದ ವಿರುದ್ಧದ ಎಲ್ಲ ಮಾನಹಾನಿ ಸುದ್ದಿ/ಲೇಖನ ಹಾಗೂ ಯುಆರ್‌ಎಲ್‌ಗಳನ್ನು ತೆಗೆದುಹಾಕುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಗೂಗಲ್‌ ಸಂಸ್ಥೆಗೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

ನ್ಯಾಯಮೂರ್ತಿ ನವಾಜ್‌ ಸಲ್ಲಿಸಿರುವ ಅರ್ಜಿಯನ್ನು ಗುರುವಾರ (ಮಾರ್ಚ್ 6) ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರತಿವಾದಿಗಳಾದ ಗೂಗಲ್‌ ಇಂಡಿಯಾ ಹಾಗೂ ಗೂಗಲ್‌ ಇಂಕ್‌ಗೆ ನೋಟಿಸ್‌ ಜಾರಿಗೊಳಿಸಿತು.

ಜತೆಗೆ, ಅರ್ಜಿಯಲ್ಲಿನ 4ನೇ ಪ್ರತಿವಾದಿ ಕೊಲಂಬೊ ಟೆಲಿಗ್ರಾಫ್‌ ಹಾಗೂ 5ನೇ ಪ್ರತಿವಾದಿ ಲಂಕಾಇನ್ಯೂಸ್‌ಗೆ ಇ-ಮೇಲ್‌ ಮೂಲಕ ನೋಟಿಸ್‌ ಕಳುಹಿಸಿಕೊಡಬೇಕು ಎಂದು ಅರ್ಜಿದಾರರ ಪರ ವಕೀಲರಿಗೆ ನಿರ್ದೇಶಿಸಿ ವಿಚಾರಣೆಯನ್ನು ಮಾರ್ಚ್‌ 16ಕ್ಕೆ ಮುಂದೂಡಿತು.

ಶ್ರೀಲಂಕಾದ ಕೊಲಂಬೊ ಟೆಲಿಗ್ರಾಫ್‌ ಮತ್ತು ಲಂಕಾಇನ್ಯೂಸ್‌ ಸುದ್ದಿ ತಾಣಗಳು 2015 ಮತ್ತು 2020ರಲ್ಲಿ ಮಾನಹಾನಿ ಸುದ್ದಿ ಪ್ರಕಟಿಸಿವೆ ಎಂದು ನ್ಯಾಯಮೂರ್ತಿ ನವಾಜ್ ಆಕ್ಷೇಪಿಸಿದ್ದಾರೆ. ಕೊಲಂಬೊ ಟೆಲಿಗ್ರಾಫ್‌ ಅನ್ನು ಗಡಿಪಾರುಗೊಂಡಿರುವ ಶ್ರೀಲಂಕಾದ ಇಬ್ಬರು ಪತ್ರಕರ್ತರು ಮುನ್ನಡೆಸುತ್ತಿದ್ದಾರೆ ಎನ್ನಲಾಗಿದೆ. ಅರ್ಜಿಯಲ್ಲಿ ಭಾರತ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ, ಗೂಗಲ್‌ ಇಂಡಿಯಾ, ಗೂಗಲ್‌ ಇಂಕ್‌, ಕೊಲಂಬೊ ಟೆಲಿಗ್ರಾಫ್‌, ಲಂಕಾಇನ್ಯೂಸ್‌ ಅನ್ನು ಪ್ರತಿವಾದಿಗಳನ್ನಾಗಿಸಲಾಗಿದೆ.

ಭಾರತದಲ್ಲಿ ಅರ್ಜಿ ಸಲ್ಲಿಸಿದ್ದೇಕೆ?
ಶ್ರೀಲಂಕಾ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸಿದರೆ ನೈತಿಕ ಸಂಘರ್ಷ ಉಂಟಾಗುವ ಸಾಧ್ಯತೆ ಇದೆ.‌ ತಾವು ಶ್ರೀಲಂಕಾ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಆಗಿರುವುದರಿಂದ ಮಾನಹಾನಿ ಸುದ್ದಿಯ ವಿಚಾರವಾಗಿ ಅಲ್ಲಿನ ನ್ಯಾಯಾಲಯದಲ್ಲಿ ದಾವೆ ಹೂಡುವುದು ನೈತಿಕವಾಗಿ ನಿಷೇಧಿಸಲ್ಪಟ್ಟಿದೆ. ಆದ್ದರಿಂದ, ಭಾರತದ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾಗಿ ನ್ಯಾಯಮೂರ್ತಿ ನಜಾಜ್‌ ಅರ್ಜಿಯಲ್ಲಿ ವಿವರಿಸಿದ್ದಾರೆ.

ಭಾರತವು ಪ್ರಾಮಾಣಿಕ ನ್ಯಾಯಾಂಗ ಹೊಂದಿದ್ದು, ರಾಷ್ಟ್ರೀಯತೆಯನ್ನು ಲೆಕ್ಕಿಸದೆ ಎಲ್ಲರಿಗೂ ನ್ಯಾಯ ಒದಗಿಸುವ ಈ ನ್ಯಾಯಾಂಗ ಪ್ರಕ್ರಿಯೆಗಳಲ್ಲಿ ಸಂಪೂರ್ಣ ವಿಶ್ವಾಸವಿದೆ. ಭಾರತದ ಸಂವಿಧಾನದ ಪರಿಚ್ಛೇದ 21ರ ಅಡಿ ಕಲ್ಪಿಸಲಾಗಿರುವ ಜೀವಿಸುವ ಮತ್ತು ಸ್ವಾತಂತ್ರ್ಯದ ಹಕ್ಕು ಭಾರತೀಯರಿಗಲ್ಲದೇ ವಿದೇಶಿಯರಿಗೂ ವಿಸ್ತರಿಸಿರುವುದರಿಂದ ಭಾರತದ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಬಹುದು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಪ್ರಕರಣದ ಸಂಬಂಧ 2023ರಲ್ಲಿ ಗೂಗಲ್‌ ಸಂಸ್ಥೆಗೆ ಲೀಗಲ್‌ ನೋಟಿಸ್‌ ಕಳುಹಿಸಿದ್ದು, ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಹಾಗೂ ಗೂಗಲ್‌ನ ಭಾರತದ ಪ್ರಧಾನ ಕಚೇರಿ ಬೆಂಗಳೂರಿನಲ್ಲಿರುವುದರಿಂದ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವುದಾಗಿ ನವಾಜ್‌ ಅರ್ಜಿಯಲ್ಲಿ ತಿಳಿಸಿದ್ದಾರೆ.

ಮನವಿ ಏನು?
ಆನ್‌ಲೈನ್‌ನಲ್ಲಿರುವ ಮಾನಹಾನಿ ವಿಚಾರಗಳನ್ನು ತೆಗೆದು ಹಾಕುವುದರ ಜತೆಗೆ ಅದಕ್ಕೆ ಸಂಬಂಧಿಸಿದ ಯುಆರ್‌ಎಲ್‌ಗಳ ಮೇಲೆ ಸಂಪೂರ್ಣ ನಿಷೇಧ ಹೇರಬೇಕು. ಮರೆತು ಹೋಗುವ ಹಕ್ಕನ್ನು (RIGHT TO BE FORGOTTEN) ರಕ್ಷಿಸಬೇಕು. 2015ರಲ್ಲಿ ಒಂದು ಮತ್ತು 2020ರಲ್ಲಿ ಕೊಲೊಂಬೊ ಟೆಲಿಗ್ರಾಫ್‌ನಲ್ಲಿ ಪ್ರಕಟಿಸಲಾಗಿರುವ ಎರಡು ಸುದ್ದಿ ಹಾಗೂ 2020ರಲ್ಲಿ ಲಂಕಾಇನ್ಯೂಸ್‌ ಪ್ರಕಟಿಸಿರುವ ಒಂದು ಸುದ್ದಿ ಸೇರಿ ಒಟ್ಟು ನಾಲ್ಕು ಸುದ್ದಿಗಳನ್ನು ಆನ್‌ಲೈನ್‌ನಿಂದ ತೆಗೆಯಲು ನಿರ್ದೇಶಿಸಬೇಕು ಎಂದು ನವಾಜ್ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

Related Articles

Comments (0)

Leave a Comment