ಎಚ್.ಡಿ. ಕುಮಾರಸ್ವಾಮಿ-ಎಂ. ಚಂದ್ರಶೇಖರ್‌ ಪ್ರಕರಣ; ಮಧ್ಯಸ್ಥಿಕೆದಾರರ ನೇಮಕಾತಿಗೆ ಹೈಕೋರ್ಟ್ ಇಂಗಿತ

ಬೆಂಗಳೂರು: ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಹಿರಿಯ ಐಪಿಎಸ್‌ ಅಧಿಕಾರಿ ಎಂ. ಚಂದ್ರಶೇಖರ್‌ ಅವರಿಗೆ ಬೆದರಿಕೆಯೊಡ್ಡಿದ ಆರೋಪದಲ್ಲಿ ದಾಖಲಾಗಿರುವ ಪ್ರಕರಣವನ್ನು ಇತ್ಯರ್ಥಪಡಿಸಲು ವೃತ್ತಿಪರ ಮಧ್ಯಸ್ಥಿಕೆದಾರರನ್ನು ನೇಮಿಸುವ ಕುರಿತು ಹೈಕೋರ್ಟ್‌ ಇಂಗಿತ ವ್ಯಕ್ತಪಡಿಸಿದೆ.

ಲೋಕಾಯುಕ್ತ ಎಡಿಜಿಪಿ ಮತ್ತು ಎಸ್‌ಐಟಿ ಮುಖ್ಯಸ್ಥ ಎಂ. ಚಂದ್ರಶೇಖರ್‌ ಅವರಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಹಾಗೂ ನಗರದ 42ನೇ ಎಸಿಎಂಎಂ ನ್ಯಾಯಾಲಯದ (ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ) ವಿಚಾರಣೆ ರದ್ದು ಕೋರಿ ಎಚ್.ಡಿ. ಕುಮಾರಸ್ವಾಮಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸುನೀಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ನ್ಯಾಯಪೀಠ, ಉಭಯ ಪಕ್ಷಕಾರರು ಒಪ್ಪಿದರೆ ಮಧ್ಯಸ್ಥಿಕೆದಾರರನ್ನು ನೇಮಿಸಲಾಗುವುದು. ಅರ್ಜಿದಾರರು ಹಾಗೂ ಪ್ರತಿವಾದಿಗಳು ಆನ್‌ಲೈನ್‌ ಅಥವಾ ಭೌತಿಕವಾಗಿ ತಮಗೆ ಅನುಕೂಲವಾಗುವ ರೀತಿಯಲ್ಲಿ ಮಧ್ಯಸ್ಥಿಕೆದಾರರ ಮುಂದೆ ಹಾಜರಾಗಬಹುದು. ಇಬ್ಬರಿಗೂ ಒಪ್ಪಿತವಾದ ವ್ಯಕ್ತಿ ಮಧ್ಯಸ್ಥಿಕೆದಾರರಾಗಬೇಕು. ಇಲ್ಲವಾದಲ್ಲಿ ಪ್ರತ್ಯೇಕವಾಗಿ ಇಬ್ಬರ ಅಭಿಪ್ರಾಯ ಪಡೆದು, ಈ ಪ್ರಕರಣವನ್ನು ಇತ್ಯರ್ಥಪಡಿಸುವುದಕ್ಕೆ ಮುಂದಾಗುವ ವ್ಯವಸ್ಥೆ ನೋಡಬಹುದು ಎಂದು ಸಲಹೆ ನೀಡಿತು.

ಪ್ರಕರಣದಲ್ಲಿ ಎರಡೂ ಕಡೆಯವರ ಅಹವಾಲುಗಳಿರುವುದರಿಂದ ಸಾಧ್ಯತೆಗಳನ್ನು ಹುಡುಕುವ ಮೂರನೇ ವ್ಯಕ್ತಿ ಇರಬೇಕು. ಮಧ್ಯಸ್ಥಿಕೆದಾರರು ಇಬ್ಬರ ಜತೆ ಚರ್ಚಿಸಿ, ಸಲಹೆ ನೀಡಲಿ. ಆನಂತರ ನಿರ್ಧರಿಸೋಣ. ಯಾರು ಮಧ್ಯಸ್ಥಿಕೆದಾರರಾಗಬೇಕು ಎಂಬ ಬಗ್ಗೆ ಸಲಹೆಗಳಿದ್ದರೆ ತಿಳಿಸಬಹುದು, ನ್ಯಾಯಾಲಯ ಈ ನಿಟ್ಟಿನಲ್ಲಿ ಯೋಚಿಸಲಿದೆ. ತರಬೇತಿ ಹೊಂದಿದ ಮಧ್ಯಸ್ಥಿಕೆದಾರರನ್ನು ನೇಮಿಸಿ, ಸಮಸ್ಯೆಯನ್ನು ಬಗೆಹರಿಸೋಣ. ಏನೂ ಆಗಲಿಲ್ಲ ಎಂದರೆ ಆಮೇಲೆ ನ್ಯಾಯಾಲಯ ನಿರ್ಧಾರ ಮಾಡಲಿದೆ ಎಂದು ಹೇಳಿತು.

ಕುಮಾರಸ್ವಾಮಿ ಪರ ಹಿರಿಯ ವಕೀಲ ಹಷ್ಮತ್‌ ಪಾಷಾ ಅವರು, ಅರ್ಜಿದಾರರು ಚಂದ್ರಶೇಖರ್‌ಗೆ ಬೆದರಿಕೆ ಹಾಕಿಲ್ಲ ಅಥವಾ ಅವರ ವಿರುದ್ಧ ಯಾವುದೇ ಪದ ಬಳಕೆ ಮಾಡಿಲ್ಲ. ಆದರೆ, ಕುಮಾರಸ್ವಾಮಿ ಅವರ ವಿರುದ್ಧ ಹಲವು ಮಾನಹಾನಿ ಪದಗಳನ್ನು ಚಂದ್ರಶೇಖರ್‌ ಬಳಕೆ ಮಾಡಿದ್ದಾರೆ. ಕುಮಾರಸ್ವಾಮಿ ಅವರು ಯಾವ ರೀತಿಯಲ್ಲೂ ಚಂದ್ರಶೇಖರ್‌ ಜತೆ ಮಾತನಾಡಿಲ್ಲ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಯಾವುದೇ ಕುಟುಂಬ ಅಥವಾ ವ್ಯಕ್ತಿಗೆ ಬೆದರಿಕೆ ಹಾಕಿಲ್ಲ. ಪ್ರಮಾಣಪತ್ರ ಸಲ್ಲಿಸುವಂತೆ ಅರ್ಜಿದಾರರಿಗೆ ಹೇಳಿರುವುದು ಅನಗತ್ಯ. ನ್ಯಾಯಾಲಯದ ಮುಂದೆ ಪ್ರಮಾಣಪತ್ರ ಸಲ್ಲಿಸಬೇಕು ಎಂದು ದೂರುದಾರರು ಹೇಳಲಾಗದು. ಕುಮಾರಸ್ವಾಮಿ ಕ್ಷಮೆ ಕೋರುವುದಿಲ್ಲ ಅಥವಾ ಪ್ರಮಾಣಪತ್ರ ಸಲ್ಲಿಸುವುದಿಲ್ಲ ಎಂದರು.

ಪ್ರತಿವಾದಿ ಚಂದ್ರಶೇಖರ್‌ ಪರ ವಕೀಲರು ವಾದ ಮಂಡಿಸಿ, ಪ್ರಕರಣದಲ್ಲಿ ಚಂದ್ರಶೇಖರ್‌ ಸಂತ್ರಸ್ತರಾಗಿದ್ದಾರೆ. ನ್ಯಾಯಾಲಯದ ಮುಂದೆ ಪ್ರಮಾಣಪತ್ರ ಸಲ್ಲಿಸಿ ಎಂದು ಹೇಳುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರಲ್ಲದೆ, ಮಧ್ಯಸ್ಥಿಕೆದಾರರ ನೇಮಕಾತಿ ಕುರಿತು ತಮ್ಮ ಕಕ್ಷಿದಾರರ ಸಲಹೆ ಪಡೆಯಲಾಗುವುದು ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಅಂತಿಮವಾಗಿ ನ್ಯಾಯಪೀಠ, ಪ್ರಕರಣದಲ್ಲಿ ವೃತ್ತಿಪರ ಮಧ್ಯಸ್ಥಿಕೆದಾರರನ್ನು ನೇಮಿಸುವ ಸಲಹೆಯನ್ನು ಉಭಯ ಪಕ್ಷಕಾರರು ಪರಿಗಣಿಸಬೇಕು. ಮಧ್ಯಸ್ಥಿಕೆದಾರರನ್ನು ನೇಮಿಸಲು ಎರಡೂ ಕಡೆಯವರು ಒಪ್ಪಿದರೆ ಯಾರು ಮಧ್ಯಸ್ಥಿಕೆದಾರರಾಗಬೇಕು ಎಂಬ ಸಲಹೆಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬಹುದು. ಉಭಯ ಪಕ್ಷಕಾರರು ನಿರ್ಧರಿಸಿದ ಬಳಿಕ ಮುಂದಿನ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿ, ವಿಚಾರಣೆಯನ್ನು ಮಾರ್ಚ್‌ 26ಕ್ಕೆ ಮುಂದೂಡಿತು.

Related Articles

Comments (0)

Leave a Comment