ಮಗ ನಾಪತ್ತೆ ಎಂದು ಸುಳ್ಳು ಹೇಬಿಯಸ್ ಕಾರ್ಪಸ್ ಅರ್ಜಿ; ವೃದ್ಧೆಗೆ ₹2 ಲಕ್ಷ ದಂಡ ವಿಧಿಸಿದ ಹೈಕೋರ್ಟ್

ಬೆಂಗಳೂರು: ಪೊಲೀಸರ ವಿರುದ್ಧ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಸುಳ್ಳು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ, ನ್ಯಾಯಾಂಗ ಪ್ರಕ್ರಿಯೆಯನ್ನು ದುರುಪಯೋಗಪಡಿಸಕೊಂಡ ಬೆಂಗಳೂರಿನ 72 ವರ್ಷದ ಮಹಿಳೆಯೊಬ್ಬರಿಗೆ ಹೈಕೋರ್ಟ್ 2 ಲಕ್ಷ ರೂ. ದಂಡ ವಿಧಿಸಿದೆ.

ಕಾಣೆಯಾಗಿರುವ ಮಗನನ್ನು ಪತ್ತೆ ಹಚ್ಚಿ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ಇಂದಿರಾನಗರದ ಎಂ. ಮಹೇಶ್ವರಿ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಇತ್ತೀಚೆಗೆ ವಜಾಗೊಳಿಸಿರುವ ನ್ಯಾಯಮೂರ್ತಿ ಅನು ಶಿವರಾಮನ್ ಹಾಗೂ ನ್ಯಾಯಮೂರ್ತಿ ರಾಜೇಶ್ ರೈ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.

ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಅರ್ಜಿದಾರರು ಭಾರತದ ಸಂವಿಧಾನದ ಅಡಿಯಲ್ಲಿ ನೀಡಲಾದ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡು, ದುರುದ್ದೇಶದಿಂದ ಈ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ಈ ರೀತಿಯ ಮೊಕದ್ದಮೆ ಹೂಡುವುದನ್ನು ಪ್ರೋತ್ಸಾಹಿಸಲಾಗದು. ನ್ಯಾಯಾಂಗ ಪ್ರಕ್ರಿಯೆಯನ್ನು ರಕ್ಷಿಸಲು ಹಾಗೂ ಕ್ಷುಲ್ಲಕ ಮತ್ತು ದುರುದ್ದೇಶಪೂರಿತ ಹೇಬಿಯಸ್ ಕಾರ್ಪಸ್ ಅರ್ಜಿಗಳನ್ನು ತಡೆಯಲು, ಅರ್ಜಿದಾರರಿಗೆ ದಂಡ ವಿಧಿಸುವುದು ಅಗತ್ಯವಾಗಿದೆ. ಸತ್ಯಾಂಶಗಳನ್ನು ಮುಚ್ಚಿಟ್ಟು, ಅಶುದ್ಧ ಹಸ್ತಗಳಿಂದ ನ್ಯಾಯಾಲಯದ ಕದ ತಟ್ಟಿರುವ ಅರ್ಜಿದಾರರಿಗೆ 2 ಲಕ್ಷ ರೂ. ದಂಡ ವಿಧಿಸಲಾಗುತ್ತಿದೆ ಎಂದು ತಿಳಿಸಿ, ಅರ್ಜಿ ವಜಾಗೊಳಿಸಿದೆ.

ನ್ಯಾಯಾಲಯದ ಆದೇಶದ ಪ್ರಮಾಣೀಕೃತ ಪ್ರತಿ ಲಭ್ಯವಾದ ದಿನಾಂಕದಿಂದ ಎರಡು ವಾರಗಳ ಒಳಗೆ ದಂಡ ಪಾವತಿಸಬೇಕು. ದಂಡದ ಮೊತ್ತದಲ್ಲಿ 1 ಲಕ್ಷ ರೂ. ಗಳನ್ನು ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಹಾಗೂ ಉಳಿದ 1 ಲಕ್ಷ ರೂ. ಗಳನ್ನು ಕರ್ನಾಟಕ ಪೊಲೀಸ್ ಕಲ್ಯಾಣ ನಿಧಿಗೆ ಪಾವತಿಸಬೇಕು. ಒಂದು ವೇಳೆ, ಅರ್ಜಿದಾರರು ದಂಡ ಪಾವತಿಸಲು ವಿಫಲರಾದರೆ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಪ್ರಾರಂಭಿಸಲು ರಿಜಿಸ್ಟ್ರಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.

ತಾಯಿಯೊಂದಿಗೆ ಫೋನ್ ಸಂಪರ್ಕದಲ್ಲಿದ್ದ ಮಗ:
ಸರ್ಕಾರಿ ಅಭಿಯೋಜಕರು ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳು ಹಾಗೂ ಕರೆಗಳ ವಿವರಗಳನ್ನು ಗಮನಿಸಿದರೆ, ನಾಪತ್ತೆಯಾಗಿದ್ದಾನೆ ಎನ್ನಲಾದ ಅರ್ಜಿದಾರರ ಮಗ ಎಂ. ಕೃಪಲಾನಿ ತನ್ನ ತಾಯಿ, ಸಹೋದರಿ ಹಾಗೂ ಸ್ನೇಹಿತನೊಂದಿಗೆ ನಿರಂತರ ಫೋನ್ ಸಂಪರ್ಕದಲ್ಲಿದ್ದರು ಎನ್ನುವುದು ತಿಳಿದುಬರುತ್ತದೆ. ಇದಲ್ಲದೆ, ಕೃಪಲಾನಿಯ ಸ್ನೇಹಿತ ಮಹೇಂದ್ರ ಎಂಬಾತ ಜುಲೈ 28ರಿಂದ ಆಗಸ್ಟ್ 4ರ ನಡುವೆ ಅರ್ಜಿದಾರರ ಪರ ವಕೀಲರಾದ ರಾಜೇಶ್ ಗೌಡ ಅವರೊಂದಿಗೆ ಸಂಪರ್ಕದಲ್ಲಿರುವುದು ಸಹ ತಿಳಿದುಬಂದಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಉಲ್ಲೇಖಿಸಿದೆ.

ಪೊಲೀಸರ ವಿರುದ್ಧ ಸೇಡಿಗಾಗಿ ಅರ್ಜಿ:
ಅರ್ಜಿದಾರ ಮಹಿಳೆಯ ಪುತ್ರ ಕೃಪಲಾನಿ ತನ್ನ ನೆರೆಮನೆಯ ವ್ಯಕ್ತಿಯೊಬ್ಬರ ವಿರುದ್ಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನೆರೆಮನೆಯ ವ್ಯಕ್ತಿ ಎರಡನೇ ಮಹಡಿಯಲ್ಲಿ ಗಾಂಜಾ ಬೆಳೆಯುತ್ತಿದ್ದಾರೆ ಹಾಗೂ ತಡರಾತ್ರಿಯವರೆಗೆ ಪಾರ್ಟಿಗಳನ್ನು ಮಾಡುವ ಮೂಲಕ ತೊಂದರೆ ಉಂಟು ಮಾಡುತ್ತಿದ್ದಾರೆಂದು ದೂರಿನಲ್ಲಿ ಆರೋಪಿಸಲಾಗಿತ್ತು. ದೂರಿನ ಸಂಬಂಧ ವಿಚಾರಣೆ ನಡೆಸಿದ್ದ ಪೊಲೀಸರು ಜುಲೈ 1ರಂದು ಹಿಂಬರಹ ನೀಡಿದ್ದರು. ಆದರೆ, ಪೊಲೀಸರು ನಡೆಸಿರುವ ವಿಚಾರಣೆಯ ಬಗ್ಗೆ ಅಸಮಾಧಾನ ಹೊಂದಿದ್ದ ಕೃಪಲಾನಿ ಪೊಲೀಸರ ವಿರುದ್ಧ ಸೇಡು ತೀರಿಸಿಕೊಳ್ಳಲು ತನ್ನ ತಾಯಿ ಹಾಗೂ ಇತರರೊಂದಿಗೆ ಶಾಮೀಲಾಗಿ ಈ ಸುಳ್ಳು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯು ವಿಶ್ವಾಸಾರ್ಹವಾಗಿಲ್ಲ ಹಾಗೂ ಇದು ನ್ಯಾಯಾಲಯದ ಪ್ರಕ್ರಿಯೆಯ ದುರುಪಯೋಗವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಪ್ರಕರಣವೇನು?
ಅರ್ಜಿದಾರ ಮಹಿಳೆ ಹೈಕೋರ್ಟ್‌ಗೆ ಮೊದಲು ಒಂದು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ, ನಂತರ ಅರ್ಜಿಯಲ್ಲಿ ಕಣ್ತಪ್ಪಿನಿಂದಾಗಿ ಕೆಲ ತಪ್ಪು ಹೇಳಿಕೆಗಳನ್ನು ನೀಡಲಾಗಿದೆ ಎಂಬ ಕಾರಣ ನೀಡಿ ಅರ್ಜಿ ಹಿಂಪಡೆದುಕೊಂಡಿದ್ದರು. ಬಳಿಕ 2025ರ ಜುಲೈ 7ರಿಂದ ಮಗ ಕಾಣೆಯಾಗಿದ್ದು, ಆತನನ್ನು ಪತ್ತೆ ಹಚ್ಚಬೇಕೆಂದು ಕೋರಿ ಜುಲೈ 29ರಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದರು. ಆದರೆ, ಮಗನನ್ನು ಪತ್ತೆ ಹಚ್ಚಲು ಪೊಲೀಸರು ವಿಫಲರಾಗಿದ್ದಾರೆಂಬ ಕಾರಣಕ್ಕೆ ಮತ್ತೆ ನ್ಯಾಯಾಲಯಕ್ಕೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದ ನಿರ್ದೇಶನದಂತೆ ಅರ್ಜಿದಾರ ಮಹಿಳೆಯ ಮಗ ಕೃಪಲಾನಿಯನ್ನು ಆಗಸ್ಟ್ 5ರಂದು ಚೆನ್ನೈನ ಹೋಟೆಲ್ ಒಂದರಲ್ಲಿ ಪತ್ತೆ ಹಚ್ಚಿದ್ದ ಪೊಲೀಸರು ಆಗಸ್ಟ್ 7ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.

ಪೊಲೀಸರ ಮೇಲೆಯೇ ಹಲ್ಲೆ:
ಸರ್ಕಾರದ ಪರ ಹಾಜರಿದ್ದ ಎಸ್‌ಪಿಪಿ-2 ವಿಜಯ ಕುಮಾರ್ ಮಜಗೆ ಅವರು, ನೆರೆಮನೆಯವರು ಹಾಗೂ ಪೊಲೀಸರ ಮೇಲಿನ ವೈಯಕ್ತಿಕ ಸೇಡಿಗಾಗಿ ನ್ಯಾಯಾಲಯದ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಂಡು ಈ ಅರ್ಜಿ ಸಲ್ಲಿಸಲಾಗಿದೆ. ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಕೆಯಾದ ಬಳಿಕ‌ ನಗರದ ಕೋರಮಂಗಲ ಪೊಲೀಸರು ಚೆನ್ನೈನ ಸೆಮ್ಮಂಚೇರಿಯ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದ ಕೃಪಲಾನಿಯನ್ನು ಪತ್ತೆಹಚ್ಚಲು ಸಾಕಷ್ಡು ಪ್ರಯತ್ನಗಳನ್ನು ಮಾಡಿದ್ದಾರೆ. ಆತನನ್ನು ಪತ್ತೆ ಹಚ್ಚಿದ ಬಳಿಕ ಈ ನ್ಯಾಯಾಲಯದ ಮುಂದೆ ಹಾಜರಾಗುವಂತೆ ತಿಳಿಸಿದಾಗ, ಆತ ಪೊಲೀಸರನ್ನೇ ನಿಂದಿಸಿದ್ದ. ಇದರಿಂದ, ಸ್ಥಳೀಯ ಪೊಲೀಸರ ನೆರವು ಪಡೆಯಲಾಗಿತ್ತು. ಆದರೆ, ಆತ ಸೆಮ್ಮಂಚೇರಿ ಪೊಲೀಸ್ ಠಾಣೆಯ ಪಿಎಸ್ಐ ವಿನೋದ್ ಕುಮಾರ್ ಅವರ ಮೇಲೆಯೇ ಹಲ್ಲೆ ನಡೆಸಿದ್ದ. ಈ ಸಂಬಂಧ ಸೆಮ್ಮಂಚೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದರಲ್ಲದೆ, ಚೆನ್ನೈನ ಹೋಟೆಲ್‌ನಲ್ಲಿ ಕೃಪಲಾನಿ ನಡೆಸಿದ್ದ ಕೃತ್ಯಕ್ಕೆ ಸಂಬಂಧಿಸಿದ ದೃಶ್ಯಾವಳಿ ಒಳಗೊಂಡ ಪೆನ್‌ಡ್ರೈವ್ ಹಾಗೂ ಆತನ ವಿರುದ್ಧದ ಎಫ್‌ಐಆರ್ ಪ್ರತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

Related Articles

Comments (0)

Leave a Comment