ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು; ಆದೇಶ ಅನುಷ್ಠಾನಕ್ಕೆ ನೀಡಿದ್ದ ಮಧ್ಯಂತರ ಆದೇಶ ಏ.16ರವರೆಗೆ ವಿಸ್ತರಿಸಿದ ಹೈಕೋರ್ಟ್

ಬೆಂಗಳೂರು: ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ದಕ್ಷಿಣ‌ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಿ ಹೊರಡಿಸಲಾಗಿರುವ ಆದೇಶವನ್ನು ಗುರುವಾರದವರೆಗೆ ಏಪ್ರಿಲ್ 16ರವರೆಗೆ ಅನುಷ್ಠಾನಗೊಳಿಸದಂತೆ ರಾಜ್ಯ ಸರ್ಕಾರ ಮತ್ತು ಪುತ್ತೂರು ಉಪ ವಿಭಾಗಾಧಿಕಾರಿಗೆ ಹೈಕೋರ್ಟ್‌ ಮಧ್ಯಂತರ ನಿರ್ದೇಶನ ‌ನೀಡಿದೆ.

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ 2026ರ ಮಾರ್ಚ್ 13ರಂದು ಪುತ್ತೂರು ವಿಭಾಗಾಧಿಕಾರಿ (ಮೂರನೇ ಬಾರಿ) ಹೊರಡಿಸಿರುವ ಆದೇಶ ಪ್ರಶ್ನಿಸಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಅರ್ಜಿದಾರ ಪರ ವಕೀಲರು ಹಾಜರಾಗಿ, ಅರ್ಜಿ ವಿಚಾರಣೆಯನ್ನು ಏಪ್ರಿಲ್ 24 ಅಥವಾ 27ಕ್ಕೆ ಮುಂದೂಡಬೇಕು. ಅಲ್ಲಿಯವರೆಗೆ ಗಡಿಪಾರು ಆದೇಶ ಜಾರಿಗೆ ತಾತ್ಕಾಲಿಕ ತಡೆ ನೀಡಿ ಹೊರಡಿಸಿರುವ ಮಧ್ಯಂತರ ಆದೇಶವನ್ನು ವಿಸ್ತರಿಸಬೇಕು ಎಂದು ಕೋರಿದರು.

ರಾಜ್ಯ ಸರ್ಕಾರದ ಪರ ಹಾಜರಿದ್ದ ಅಡ್ವೋಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ಅವರು, ಇದು ಮೂರನೇ ಸುತ್ತಿನ ವ್ಯಾಜ್ಯವಾಗಿದೆ. ಅರ್ಜಿದಾರರನ್ನು ಗಡಿಪಾರು ಮಾಡಿ ಮೂರನೇ ಬಾರಿಗೆ ಆದೇಶ ಹೊರಡಿಸಲಾಗಿದೆ. ಪ್ರಕರಣ ಸಂಬಂಧ ಮೇಲ್ಮನವಿ ಪ್ರಾಧಿಕಾರದಲ್ಲಿ ಪರಿಹಾರ ಕಂಡುಕೊಳ್ಳಲು ಅರ್ಜಿದಾರರಿಗೆ ಅವಕಾಶವಿದೆ. ಅರ್ಜಿದಾರರು ರೌಡಿ ಶೀಟರ್‌ ಆಗಿದ್ದು, ಅವರ ವಿರುದ್ಧ 26 ಪ್ರಕರಣಗಳು ದಾಖಲಾಗಿವೆ. ಈ ಹಿಂದೆ ಗಡಿಪಾರು ವಿಚಾರವಾಗಿ ಹೈಕೋರ್ಟ್‌ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಆದೇಶ ಮಾಡಿದೆ ಎಂದು ತಿಳಿಸಿದರು.

ಈ ವೇಳೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧ ಗಡಿಪಾರು ಆದೇಶ ಅನುಷ್ಠಾನಕ್ಕೆ ತಾತ್ಕಾಲಿಕ ತಡೆ ನೀಡಿ ಮಧ್ಯಂತರ ಆದೇಶ ಮಾಡಲಾಗಿದೆ. ಆ ಆದೇಶವನ್ನು ಸುಖಾಸುಮ್ಮನೆ ಮುಂದುವರಿಸಲಾಗದು. ಅನಗತ್ಯವಾಗಿ ವಿಚಾರಣೆ ಮುಂದೂಡಿಕೆಗೆ ಕೋರಬಾರದು. ವಿಚಾರಣೆಯನ್ನು ಏಪ್ರಿಲ್ 27ಕ್ಕೆ ಮುಂದೂಡಬೇಕಾದರೆ, ಮಧ್ಯಂತರ ಆದೇಶವನ್ನು ತೆರವುಗೊಳಿಸಲಾಗುವುದು ಎಂದು ಕಟುವಾಗಿಯೇ ನುಡಿಯಿತು.

ಆಗ ಅರ್ಜಿದಾರರ ಪರ ವಕೀಲರು, ಅರ್ಜಿ ವಿಚಾರಣೆಯನ್ನು ಏಪ್ರಿಲ್ 16ಕ್ಕೆ ನಿಗದಿಪಡಿಸಬೇಕು ಎಂದು ಕೋರಿದರು. ಅದಕ್ಕೆ ಒಪ್ಪಿದ ನ್ಯಾಯಪೀಠ, ಅರ್ಜಿ ವಿಚಾರಣೆಯ್ನು ಏಪ್ರಿಲ್ 16ಕ್ಕೆ ಮುಂದೂಡಿತಲ್ಲದೆ, ಅಲ್ಲಿಯವರೆಗೆ ಅರ್ಜಿದಾರರ ವಿರುದ್ಧದ ಗಡಿಪಾರು ಆದೇಶ ಜಾರಿಗೊಳಿಸದಂತೆ ಹೊರಡಿಸಲಾಗಿದ್ದ ಮಧ್ಯಂತರ ಆದೇಶವನ್ನು ವಿಸ್ತರಿಸಿತು. ಜತೆಗೆ, ಮುಂದಿನ ವಿಚಾರಣಾ ದಿನಾಂಕದಂದು ವಾದ ಮಂಡಿಸಲು ಸಂಪೂರ್ಣವಾಗಿ ಸಿದ್ಧವಾಗಿ ಬರುವಂತೆ ಅರ್ಜಿದಾರರ ಪರ ವಕೀಲರಿಗೆ ನ್ಯಾಯಪೀಠ ಮೌಖಿಕವಾಗಿ ಸೂಚಿಸಿತು.

Related Articles

Comments (0)

Leave a Comment