ಯುವಕನ ಆತ್ಮಹತ್ಯೆ ಪ್ರಕರಣದಲ್ಲಿ ಹೆಚ್ಚಿನ ತನಿಖೆಗೆ ಕೋರಿ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ವಜಾ; ದುಬಾರಿ ದಂಡದ ಎಚ್ಚರಿಕೆ ನೀಡಿದ ಹೈಕೋರ್ಟ್

ಬೆಂಗಳೂರು: ಯುವಕನೊಬ್ಬನ ಆತ್ಮಹತ್ಯೆ ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಸಲು ಪೊಲೀಸ್‌ ಮಹಾ ನಿರ್ದೇಶಕರಿಗೆ ನಿರ್ದೇಶಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ಹೈಕೋರ್ಟ್, ದುಬಾರಿ ದಂಡ ವಿಧಿಸುವುದರಿಂದ ವಿನಾಯಿತಿ ನೀಡಿ ಅರ್ಜಿದಾರರಿಗೆ ಎಚ್ಚರಿಕೆ ನೀಡಿದೆ.

ಮೈಸೂರು ಜಿಲ್ಲೆಯ ಕೆ.ಆರ್‌. ನಗರದಲ್ಲಿ ವೈಯಕ್ತಿಕ ಕಲಹದಿಂದ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾದ ರಕ್ಷಿತ್‌ ಪ್ರಕರಣದಲ್ಲಿ ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯು ದೋಷಪೂರಿತವಾಗಿದ್ದು, ಅಮಾಯಕರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಆದ್ದರಿಂದ, ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸಿ, ಸಕ್ಷಮ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಬೇಕು. ಹಾಗೂ ಅಮಾಯಕರಿಗೆ ಪರಿಹಾರ ನೀಡಲು ನಿರ್ದೇಶಿಸಬೇಕು ಎಂದು ಕೋರಿ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.

ಹಾಲಿ ಪ್ರಕರಣದಲ್ಲಿ ಯಾವುದೇ ಹಕ್ಕು ಕಸಿಯಲಾಗಿಲ್ಲ. ವ್ಯಕ್ತಿಗತ ಅಥವಾ ವೈಯಕ್ತಿಕ ಅಹವಾಲನ್ನು ಪ್ರಕರಣದಲ್ಲಿ ಮುಂದು ಮಾಡಿಲ್ಲ. ಬದಲಿಗೆ ಸಾರ್ವಜನಿಕವಾದ ತನಿಖೆ ಮತ್ತು ಆರೋಪ ಪಟ್ಟಿಯ ಸಿಂಧುತ್ವವನ್ನು ಪ್ರಶ್ನಿಸಲಾಗಿದೆ. ಮೂಲಭೂತ ಅಥವಾ ಶಾಸನಬದ್ಧ ಹಕ್ಕಿನ ಉಲ್ಲಂಘನೆಯಾಗದ ಹೊರತು ಈ ನ್ಯಾಯಾಲಯದ ವ್ಯಾಪ್ತಿ ಚಲಾಯಿಸಲು ಕೋರಲಾಗದು ಎಂದು ನ್ಯಾಯಪೀಠ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಮೂರನೇ ವ್ಯಕ್ತಿ ಮಧ್ಯಪ್ರವೇಶಕ್ಕೆ ಅನುಮತಿಸಲಾಗದು:
ಪ್ರಕರಣದಲ್ಲಿ ಮೂರನೇ ವ್ಯಕ್ತಿಯ ಕೋರಿಕೆಯಂತೆ ನ್ಯಾಯಾಲಯದ ವಿಶೇಷ ವ್ಯಾಪ್ತಿಯನ್ನು ಸಾಮಾನ್ಯ ಅಹವಾಲು ಅಥವಾ ಕ್ರಿಮಿನಲ್‌ ತನಿಖೆಯ ಮೇಲ್ವಿಚಾರಣೆಗೆ ಅನ್ವಯಿಸಲಾಗದು. ಮೂರನೇ ವ್ಯಕ್ತಿಯು ಆಕ್ಷೇಪಿತ ಕ್ರಿಮಿನಲ್‌ ಪ್ರಕರಣದಲ್ಲಿ ಯಾವುದೇ ಸಂಬಂಧ ಹೊಂದಿಲ್ಲ. ಇಂಥ ಅರ್ಜಿಗಳನ್ನು ಪುರಸ್ಕರಿಸಿದರೆ ಕ್ರಿಮಿನಲ್‌ ಪ್ರಕ್ರಿಯೆಯಲ್ಲಿ ಸಂಬಂಧಪಡದವರ ಮಧ್ಯಪ್ರವೇಶಕ್ಕೆ ಬಾಗಿಲು ತೆರೆದಂತಾಗಲಿದೆ. ಇದರಿಂದ, ಕ್ರಿಮಿನಲ್‌ ವಿಚಾರಣೆಯ ಶಾಸನಬದ್ಧ ಚೌಕಟ್ಟಿಗೆ ಚ್ಯುತಿ ಮಾಡಿದಂತಾಗಲಿದೆ ಎಂದು ನ್ಯಾಯಾಲಯ ಹೇಳಿದೆ.

ಆಕ್ಷೇಪಿತ ಕ್ರಿಮಿನಲ್‌ ಪ್ರಕರಣದಲ್ಲಿ ಆರೋಪಿಗಳು ಆರೋಪ ಪಟ್ಟಿಯನ್ನು ಪ್ರಶ್ನಿಸಿಲ್ಲ. ಕ್ರಿಮಿನಲ್‌ ಪ್ರಕ್ರಿಯಾ ಸಂಹಿತೆಯಡಿ ಆರೋಪಿಗಳು ಆರೋಪ ಮುಕ್ತಿ, ಪ್ರಕರಣ ರದ್ದು ಸೇರಿ ಹಲವು ಪರಿಹಾರ ಪಡೆಯಬಹುದು. ಬಾದಿತರು ಯಾವುದೇ ಪ್ರಶ್ನೆ ಮಾಡದಿರುವಾಗ ಮೂರನೇ ವ್ಯಕ್ತಿಯು ಹೆಚ್ಚಿನ ತನಿಖೆ ಮತ್ತು ಪರಿಹಾರ ಕೋರಿ ಅರ್ಜಿ ಸಲ್ಲಿಸಲು ಅನುಮತಿಸಲಾಗದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ದುಬಾರಿ ದಂಡದ ಎಚ್ಚರಿಕೆ:
ಅರ್ಜಿದಾರರಿಗೆ ಹಕ್ಕು ಇಲ್ಲದ ಪ್ರಕರಣದಲ್ಲಿ ಸಂವಿಧಾನದ ಪರಿಚ್ಛೇದ 226ರ ಅಡಿ ಅರ್ಜಿ ಸಲ್ಲಿಸುತ್ತಿರುವುದಕ್ಕೆ ನ್ಯಾಯಾಲಯ ಹಲವು ಬಾರಿ ಎಚ್ಚರಿಸಿದೆ. ಇಂಥ ಅರ್ಜಿಗಳನ್ನು ಪುರಸ್ಕರಿಸುವುದರಿಂದ ಸಾಂವಿಧಾನಿಕ ನ್ಯಾಯಾಲಯಗಳ ಹೊರೆ ಹೆಚ್ಚಾಗುವುದಲ್ಲದೇ ಬಾಕಿ ಇರುವ ಕ್ರಿಮಿನಲ್‌ ಪ್ರಕ್ರಿಯೆಯಲ್ಲಿ ಅನಗತ್ಯವಾಗಿ ಮೂಗು ತೂರಿಸಿದಂತಾಗಲಿದೆ. ಆದ್ದರಿಂದ, ಹಾಲಿ ಅರ್ಜಿಯು ಸ್ಪಷ್ಟವಾಗಿ ನ್ಯಾಯಾಲಯದ ವಿಶೇಷ ವ್ಯಾಪ್ತಿಯ ದುರ್ಬಳಕೆಯಾಗಿದೆ. ಇಂಥ ಕ್ಷುಲ್ಲಕ ಅರ್ಜಿಗಳನ್ನು ಸಲ್ಲಿಕೆ ಮಾಡುವುದನ್ನು ತಡೆಯಲು ಈ ನ್ಯಾಯಾಲಯವು ದುಬಾರಿ ದಂಡ ವಿಧಿಸಿ, ಸಮರ್ಥಿಸಬಹುದಿತ್ತು. ಅದನ್ನು ಮಾಡದೇ ಅರ್ಜಿದಾರ ಸ್ನೇಹಮಯಿ ಕೃಷ್ಣ ಅವರನ್ನು ಮುಂದೆ ಇಂಥ ಕೃತ್ಯದಲ್ಲಿ ತೊಡಗದಂತೆ ಎಚ್ಚರಿಸಲು ಬಯಸುತ್ತದೆ ಎಂದಿರುವ ನ್ಯಾಯಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ:
ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ದಾಯಾದಿಗಳ ನಡುವಿನ ಕಲಹದಲ್ಲಿ ರಕ್ಷಿತ್‌ ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದನು. ಈ ಸಂಬಂಧ ಐವರು ಆರೋಪಿಗಳ ವಿರುದ್ಧ ಮೈಸೂರು ಗ್ರಾಮಾಂತರದ ಸಾಲಿಗ್ರಾಮ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 504, 306, 34ರ ಅಡಿ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ಸಕ್ಷಮ ನ್ಯಾಯಾಲಯಕ್ಕೆ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಸಿ, ಹೊಸದಾಗಿ ಆರೋಪ ಪಟ್ಟಿ ಸಲ್ಲಿಸಬೇಕು. ಅಮಾಯಕ ಆರೋಪಿಗಳಿಗೆ ಪರಿಹಾರ ನೀಡಲು ಪೊಲೀಸ್‌ ಮಹಾನಿರ್ದೇಶಕರಿಗೆ ನಿರ್ದೇಶಿಸಬೇಕು ಎಂದು ಸ್ನೇಹಮಯಿ ಕೃಷ್ಣ ಅರ್ಜಿಯಲ್ಲಿ ಮನವಿ ಮಾಡಿದ್ದರು.

Related Articles

Comments (0)

Leave a Comment