ತೃತೀಯ ಭಾಷಾ ವಿಷಯಕ್ಕೆ ಅಂಕಗಳ ಬದಲಿಗೆ ಗ್ರೇಡ್‌; ₹1 ಲಕ್ಷ ದಂಡ ವಿಧಿಸಿ ಪಿಐಎಲ್ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು: ಕರ್ನಾಟಕ ರಾಜ್ಯ ಪೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಪರೀಕ್ಷೆಯಲ್ಲಿ (ಎಸ್‌ಎಸ್‌ಎಲ್‌ಸಿ) ಹಿಂದಿ ಸೇರಿದಂತೆ ತೃತೀಯ ಭಾಷೆಗೆ ಅಂಕಗಳ ಬದಲಿಗೆ ಗ್ರೇಡ್‌ ನೀಡುವ ಸರ್ಕಾರದ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ಪತ್ರಿಕೆಗಳ ವರದಿ ಆಧರಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಳಿಸಿರುವ ಹೈಕೋರ್ಟ್, ಅರ್ಜಿದಾರರಿಗೆ 1 ಲಕ್ಷ ರೂ. ದಂಡ ವಿಧಿಸಿದೆ.

ಬೆಂಗಳೂರಿನ ಎಚ್‌.ಎನ್‌. ಚಂದನಾ ಹಾಗೂ ಎಸ್. ವೆಂಕಟೇಶ್ ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ, ಹಿಂದಿಯನ್ನು ಸಂಪೂರ್ಣವಾಗಿ ಕೈಬಿಡಲಾಗುತ್ತದೆ ಎಂಬ ಹೇಳಿಕೆಯೇ ಪತ್ರಿಕಾ ವರದಿಯಲ್ಲಿ ಇಲ್ಲ. ಪ್ರಚಾರಕ್ಕಾಗಿ ಅರ್ಜಿ ಸಲ್ಲಿಸಲಾಗಿದೆ ಎಂದು ಅಭಿಪ್ರಾಯಪಟ್ಟು, ಅರ್ಜಿದಾರರಿಗೆ ಬರೋಬ್ಬರಿ 1 ಲಕ್ಷ ದಂಡ ವಿಧಿಸಿ, ಅರ್ಜಿ ವಜಾಗೊಳಿಸಿತು.

50 ಸಾವಿರದಿಂದ 1 ಲಕ್ಷಕ್ಕೆ ಹೆಚ್ಚಳ:
ಶಿಕ್ಷಣ‌ ಸಚಿವರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದು, ನ್ಯಾಯಾಲಯ ವಿಶೇಷ ವ್ಯಾಪ್ತಿಯ ಅಧಿಕಾರ ಬಳಸಿ, ಹೇಳಿಕೆ ವಜಾಗೊಳಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಇದೊಂದು ಪ್ರಚಾರ ಹಿತಾಸಕ್ತಿ ಹೊಂದಿರುವ ಅರ್ಜಿಯಾಗಿದ್ದು, ಅರ್ಜಿದಾರರಿಗೆ 50 ಸಾವಿರ ದಂಡ ವಿಧಿಸಿ ವಜಾಗೊಳಿಸಲಾಗಿದೆ. ದಂಡದ ಮೊತ್ತವನ್ನು ಎರಡು ವಾರಗಳಲ್ಲಿ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸಬೇಕು ಎಂದು ಆದೇಶಿಸಿತು. ದಂಡ ಪಾವತಿಸಲು ವಿಫಲವಾದರೆ ಅದನ್ನು ಭೂಕಂದಾಯ ಬಾಕಿಯಾಗಿ ವಸೂಲಿ ಮಾಡಲು ಜಿಲ್ಲಾಧಿಕಾರಿಗೆ ಆದೇಶ ಕಳುಹಿಸಿಕೊಡಲು ಸರ್ಕಾರಕ್ಕೆ ನಿರ್ದೇಶಿಸಿತು.

ಇದಾದ ಬಳಿಕವೂ ವಾದ ಮುಂದುವರಿಸಿದ ಅರ್ಜಿದಾರರ ಪರ ವಕೀಲರು, ಹಿಂದಿಯನ್ನು ಕೈಬಿಡುವ ಆತಂಕ ವ್ಯಕ್ತಪಡಿಸಿದರು. ಆಗ ನ್ಯಾಯಪೀಠ, ಪತ್ರಿಕಾ ವರದಿಯಲ್ಲಿ ಮೂರು ಪದಗಳು ಮಾತ್ರ ಇವೆ. ಹಿಂದಿಯನ್ನು ಕೈಬಿಡುವ ಹೇಳಿಕೆಯೇ ವರದಿಯಲ್ಲಿಲ್ಲ. ಇದಕ್ಕಾಗಿ ದಂಡವನ್ನು 1 ಲಕ್ಷ ರೂ. ಗಳಿಗೆ ಏರಿಕೆ ಮಾಡಲಾಗುತ್ತಿದೆ ಎಂದು ತಿಳಿಸಿತಲ್ಲದೆ, ಆದೇಶದಲ್ಲಿ ಮಾರ್ಪಾಡು ಮಾಡಿ, ದಂಡದ ಮೊತ್ತವನ್ನು 1 ಲಕ್ಷ ರೂ.ಗಳಿಗೆ ಹೆಚ್ಚಿಸಿತು.

ರಾಜ್ಯ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ಅವರು, ದಂಡದ ಮೊತ್ತವನ್ನು ವಕೀಲರ ಗುಮಾಸ್ತರ ನಿಧಿಗೆ ನೀಡುವುದನ್ನು ನ್ಯಾಯಾಲಯ ಮುಂದೆ ಪರಿಗಣಿಸಬೇಕು ಎಂದು ಕೋರಿದರು.

ಪ್ರಚಾರ ಹಿತಾಸಕ್ತಿ ಅರ್ಜಿ:
ವಿವಾದಾತ್ಮಕ ವಿಷಯವು ಸಾರ್ವಜನಿಕವಾಗಿ ಚರ್ಚೆಯಾಗುತ್ತಿದೆ ಎಂಬುದನ್ನು ಗಮನಿಸಿ, ಹೇಳಿಕೆಯಲ್ಲದ ಹೇಳಿಕೆ ಆಧರಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಕೇವಲ ಮೂರು ಪದದ ಪತ್ರಿಕಾ ಹೇಳಿಕೆ! ಎಂದು ನ್ಯಾಯಪೀಠ ಕಿಡಿಕಾರಿತು.

ಆಗ ಅರ್ಜಿದಾರರ ಪರ ವಕೀಲರು, ಹಿಂದಿ ಕೈಬಿಡುವ ವಿಚಾರ ಸರಿಯಾದ ದೃಷ್ಟಿಕೋನವಲ್ಲ ಎಂದರು. ಅದಕ್ಕೆ ನ್ಯಾಯಪೀಠ, ಹಿಂದಿ ಭಾಷೆಯನ್ನು ಕೈಬಿಡಲಾಗುತ್ತದೆ ಎಂಬ ಹೇಳಿಕೆಯೇ ಉಲ್ಲೇಖಿತ ಪತ್ರಿಕಾ ವರದಿಯಲ್ಲಿಲ್ಲ. ಇದೊಂದು ಪ್ರಚಾರ ಹಿತಾಸಕ್ತಿ ಅರ್ಜಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತು.

ಅರ್ಜಿದಾರರ ಆಕ್ಷೇಪವೇನು?
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ರಾಜ್ಯದಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆ ಕಡ್ಡಾಯವಲ್ಲ. ಈ ಭಾಷೆಗಳಿಗೆ ಅಂಕಗಳ ಬದಲಿಗೆ ಗ್ರೇಡ್ ನೀಡಲಾಗುತ್ತದೆ. ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ ದ್ವಿಭಾಷಾ ಸೂತ್ರವನ್ನು ಜಾರಿಗೆ ತರವುದಾಗಿ ತಿಳಿಸಿದ್ದಾರೆ. ಅಲ್ಲದೆ, ಸಚಿವರು ಈ ನಿರ್ಧಾರವನ್ನು ಪ್ರಕಟಿಸುವುದಕ್ಕೂ ಮುನ್ನ ಸಾರ್ವಜನಿಕವಾಗಿ ಚರ್ಚೆ ನಡೆಸಿಲ್ಲ. ಸಚಿವ ಸಂಪುಟದ ಅನುಮೋದನೆ ಪಡೆದಿಲ್ಲ ಹಾಗೂ ಭಾಷಾ ತಜ್ಞರ ಸಲಹೆ ಇಲ್ಲದೇ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.

ಎಸ್ಎಸ್ಎಲ್‌ಸಿ ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಅಂದರೆ ಮಾರ್ಚ್ 31ರಂದು ಈ ರೀತಿಯ ಹೇಳಿಕೆ ಹೊರಬಿದ್ದಿರುವುದರಿಂದ ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದಾರೆ. ಆದರೆ, ಈವರೆಗೂ ಈ ಕುರಿತಂತೆ ಯಾವುದೇ ಅಧಿಕೃತ ಸರ್ಕಾರಿ ಆದೇಶ ಅಥವಾ ಅಧಿಸೂಚನೆ ಹೊರಬಂದಿಲ್ಲ. ಸಚಿವರ ಈ ನಿರ್ಧಾರಕ್ಕಾಗಿ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು.

ರಾಜ್ಯ ಸರ್ಕಾರದ ನಿರ್ಧಾರದಿಂದ ಸಂವಿಧಾನದ ಪರಿಚ್ಛೇದ 14ರ ಅಡಿಯ ಸಮಾನತೆ ಹಕ್ಕಿನ ಉಲ್ಲಂಘನೆಯಾಗಲಿದೆ. 21ನೇ ಪರಿಚ್ಛೇದದ ಅಡಿ ಶಿಕ್ಷಣ ಹಕ್ಕಿನ ಮೇಲೆ ಪರಿಣಾಮ ಬೀರಲಿದ್ದು, ವಿದ್ಯಾರ್ಥಿಗಳ ಭವಿಷ್ಯವನ್ನು ಅಸ್ಥಿರಗೊಳಿಸುತ್ತದೆ. ಸರ್ಕಾರದ ಅಧಿಕೃತ ಆದೇಶವಿಲ್ಲದೆ ನೀತಿ ಜಾರಿಗೆ ತರಲು ಸಾಧ್ಯವಿಲ್ಲ. ಆದ್ದರಿಂದ, ಸರ್ಕಾರದ ನಿರ್ಧಾರವನ್ನು ರದ್ದುಪಡಿಸುವ ನಿಟ್ಟಿನಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಬೇಕು ಎಂದು ಪಿಐಎಲ್‌ನಲ್ಲಿ ಕೋರಲಾಗಿತ್ತು.

Related Articles

Comments (0)

Leave a Comment