ತ್ರಿವಳಿ ಕೊಲೆ ಪ್ರಕರಣದಲ್ಲಿ ನಾಲ್ವರಿಗೆ ಜೀವಾವಧಿ ಶಿಕ್ಷೆ; ವಲಸೆ ಕಾರ್ಮಿಕರ ಹಿನ್ನೆಲೆ ಪರಿಶೀಲನೆಗೆ ಮಾರ್ಗಸೂಚಿ ಹೊರಡಿಸಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು: ಹದಿನೇಳು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದ ಐಐಎಸ್‌ಸಿ ನಿವೃತ್ತ ಪ್ರೊಫೆಸರ್‌ ಪುರುಷೋತ್ತಮ ಲಾಲ್‌ ಸಚ್‌ದೇವ್‌ ಮತ್ತವರ ಪತ್ನಿ ಹಾಗೂ ಪುತ್ರನ ಕೊಲೆ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದಿಂದ ಖುಲಾಸೆಗೊಂಡಿದ್ದ ಪಶ್ಚಿಮ ಬಂಗಾಳ ಮೂಲದ ನಾಲ್ವರು ವಲಸೆ ಕಾರ್ಮಿಕರಿಗೆ ಹೈಕೋರ್ಟ್‌ ಜೀವಾವಧಿ ಶಿಕ್ಷೆ ವಿಧಿಸಿದೆ.

ಇದೇ ವೇಳೆ, ಇತ್ತೀಚೆಗೆ ವಲಸೆ ಕಾರ್ಮಿಕರು ಮನೆಗೆಲಸದ ನೆಪದಲ್ಲಿ ಮನೆಗಳನ್ನು ಸೇರಿ ಅಪರಾಧ ಕೃತ್ಯಗಳಲ್ಲಿ ತೊಡಗುವ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವರ ಮೇಲೆ ನಿಗಾ ಇಡಲು ವಲಸೆ ಕಾರ್ಮಿಕ ಮತ್ತು ಕ್ರಿಮಿನಲ್‌ ನಿಯಂತ್ರಣ ಕಾರ್ಯತಂತ್ರಗಳಡಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿದೆ.

ತ್ರಿವಳಿ ಕೊಲೆ ಪ್ರಕರಣದ ಆರೋಪಿಗಳಾಗಿದ್ದ ನಾಲ್ವರು ವಲಸೆ ಕಾರ್ಮಿಕರನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಚ್‌.ಪಿ. ಸಂದೇಶ್‌ ಹಾಗೂ ನ್ಯಾಯಮೂರ್ತಿ ಟಿ. ವೆಂಕಟೇಶ್‌ ನಾಯ್ಕ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.

ಆರೋಪಿಗಳನ್ನು ಖುಲಾಸೆಗೊಳಿಸಿ 2016ರ ಫೆಬ್ರವರಿ 29ರಂದು ಬೆಂಗಳೂರಿನ 64ನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿರುವ ಹೈಕೋರ್ಟ್, ಪಶ್ಚಿಮ ಬಂಗಾಳ ಮೂಲದ ದೀಪಕ್ ಹಲ್ದಾರ್ ಹಾಗೂ ಪತ್ನಿ ಸುಚಿತ್ರಾ ಹಲ್ದಾರ್‌, ಬಿಹಾರ ಮೂಲದ ಮೊಹಮ್ಮದ್‌ ಸರ್ಬಾಲ್‌ ಮತ್ತು ಬೆಂಗಳೂರಿನಲ್ಲಿ ನೆಲೆಸಿದ್ದ ಮತ್ತೊಬ್ಬ ವಲಸೆ ಕಾರ್ಮಿಕ ಬಿದನ್‌ ಶಿಕಾರಿ ಅವರನ್ನು ಅಪರಾಧಿಗಳೆಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.

ಹೈಕೋರ್ಟ್ ಆದೇಶವೇನು?
ಸುಪ್ರೀಂಕೋರ್ಟ್‌ ತೀರ್ಪಿನಂತೆ ಇದು ಅಪರೂಪದಲ್ಲಿ ಅಪರೂಪ ಪ್ರಕರಣವಾಗುವುದಿಲ್ಲ. ಆದರೆ, ಆರೋಪಿಗಳು ಸಮಾಜದಲ್ಲಿ ಶಾಂತಿ ಮತ್ತು ಸಹಬಾಳ್ವೆಗೆ ಕಂಟಕರಾಗಿದ್ದರು. ಹಣ ಹಾಗೂ ಚಿನ್ನಾಭರಣಗಳಿಗಾಗಿ ಮೂವರನ್ನು ಹತ್ಯೆ ಮಾಡಿರುವ ಅವರ ಕೃತ್ಯ ಸಮಾಜಕ್ಕೆ ದೊಡ್ಡ ಕಂಟಕವಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಆರೋಪಿಗಳು ಮೂವರನ್ನು ಕತ್ತು ಹಿಸುಕಿ ಕೊಂದು ನಗದು, ಒಡವೆ ವಸ್ತುಗಳನ್ನು ದೋಚಿದ್ದಾರೆ. ಮೊದಲನೇ ಆರೋಪಿ ದೀಪಕ್‌ ಹಲ್ದಾರ್‌ ಮತ್ತು ಎರಡನೇ ಆರೋಪಿ ಸುಚಿತ್ರಾ ಹಲ್ದಾರ್‌ ಕೊಲೆಯಾದ ಮನೆಯಲ್ಲಿ ಮನೆಗೆಲಸದವರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಕ್ರಿಮಿನಲ್‌ ಪಿತೂರಿ ನಡೆಸಿ ಇತರ ಆರೋಪಿಗಳ ಜತೆ ಸೇರಿ ತ್ರಿವಳಿ ಕೊಲೆ ಮಾಡಿದ್ದಾರೆ. ಪ್ರಾಸಿಕ್ಯೂಷನ್‌ ಘಟನಾವಳಿಯನ್ನು ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದೆ ಎಂದಿರುವ ಹೈಕೋರ್ಟ್, ಸದ್ಯ ಹೊರಗಿರುವ ನಾಲ್ವರೂ ಆರೋಪಿಗಳು 2 ವಾರಗಳಲ್ಲಿ ವಿಚಾರಣಾ ನ್ಯಾಯಾಲಯದ ಮುಂದೆ ಶರಣಾಗಬೇಕು. ಉಳಿದ ಅವಧಿಯ ಶಿಕ್ಷೆ ಪೂರೈಸಲು ಅವರನ್ನು ಕಾರಾಗೃಹಕ್ಕೆ ಕಳುಹಿಸಬೇಕು ಎಂದು ಆದೇಶಿಸಿದೆ.

ಮಾರ್ಗಸೂಚಿ ಹೊರಡಿಸಲು ರಾಜ್ಯ ಸರ್ಕಾರಕ್ಕೆ ‌ನಿರ್ದೇಶನ:
ಇತ್ತೀಚಿನ ವರ್ಷಗಳಲ್ಲಿ ಮನೆಕೆಲಸದ ನೆಪದಲ್ಲಿ ಮನೆಗಳನ್ನು ಸೇರುವ ವಲಸೆ ಕಾರ್ಮಿಕರು ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿದ್ದಾರೆ. ಅಂಥವರ ಮೇಲೆ ನಿಗಾ ಇಡಲು ವಲಸೆ ಕಾರ್ಮಿಕ ಮತ್ತು ಕ್ರಿಮಿನಲ್‌ ನಿಯಂತ್ರಣ ಕಾರ್ಯತಂತ್ರಗಳಡಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಬಹುತೇಕ ಪ್ರಕರಣಗಳಲ್ಲಿ ಮನೆ ಮಾಲೀಕರು ಅಥವಾ ಉದ್ಯೋಗದಾತರು ವಲಸೆ ಕಾರ್ಮಿಕರ ಹಿನ್ನೆಲೆ ಹಾಗೂ ಗುರುತು ಪರಿಶೀಲಿಸುವ ಗೋಜಿಗೇ ಹೋಗುವುದಿಲ್ಲ. ಆದ್ದರಿಂದ, ಕೆಲ ವಲಸಿಗರು ಅಪರಾಧ ಕೃತ್ಯಗಳನ್ನೆಸಗಿ ಪರಾರಿಯಾಗುತ್ತಾರೆ. ಇಂತಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕಾರ್ಮಿಕ ಮತ್ತು ಅಪರಾಧ ಕಾನೂನುಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ವಲಸೆ ಕಾರ್ಮಿಕರ ಹಿನ್ನೆಲೆಯನ್ನು ಪೊಲೀಸರು ಕಡ್ಡಾಯವಾಗಿ ಪರಿಶೀಲನೆ ಮಾಡಬೇಕು. ಅವರ ನೋಂದಣಿಗೆ ಪೋರ್ಟಲ್‌ ವ್ಯವಸ್ಥೆ ಮಾಡಬೇಕು ಹಾಗೂ ಆ ಮಾಹಿತಿ ಸುಲಭವಾಗಿ ಜನರಿಗೆ ಲಭ್ಯವಾಗುವಂತೆ ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ.

ಈ ಪ್ರಕರಣದಲ್ಲಿ ವಲಸೆ ಕಾರ್ಮಿಕರು ಉದ್ಯೋಗ ಅರಸಿ ಬೆಂಗಳೂರಿಗೆ ಬಂದು ಮನೆಕೆಲಸದವರಾಗಿ ಸೇರಿ ಆನಂತರ ಪಿತೂರಿ ನಡೆಸಿ ಅಪರಾಧವೆಸಗಿದ್ದಾರೆ. ಘಟನೆ ನಡೆದ 20 ತಿಂಗಳ ನಂತರ ಅವರ ಬಂಧನವಾಗಿದೆ. ಆದ್ದರಿಂದ, ವಲಸೆ ಕಾರ್ಮಿಕರ ನಿಯಮಗಳನ್ನು ಬಿಗಿಗೊಳಿಸಲು ಇದು ಸಕಾಲವಾಗಿದ್ದು, ಸರ್ಕಾರ ಆ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂದು ಆದೇಶಿಸಿರುವ ಹೈಕೋರ್ಟ್, ನ್ಯಾಯಾಲಯದ ಈ ನಿರ್ದೇಶನಗಳನ್ನು ಜಾರಿಗೆ ತರಲು ಕ್ರಮ ಕೈಗೊಳ್ಳುವ ಸಲುವಾಗಿ ಆದೇಶದ ಪ್ರತಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ರವಾನಿಸುವಂತೆ ರಿಜಿಸ್ಟ್ರಿಗೆ ಸೂಚನೆ ನೀಡಿದೆ.

ಪ್ರಕರಣವೇನು?
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ನಿವೃತ್ತ ಪ್ರೊಫೆಸರ್‌ ಹಾಗೂ ಖ್ಯಾತ ಗಣಿತಶಾಸ್ತ್ರಜ್ಞರಾದ ಪುರುಷೋತ್ತಮ ಲಾಲ್‌ ಸಚ್‌ದೇವ್‌ ಅವರು ಪತ್ನಿ ರೀಟಾ ಹಾಗೂ ಪುತ್ರ ಮುನ್ನಾ ಜತೆ ಆರ್‌.ಟಿ. ನಗರದ 80 ಅಡಿ ರಸ್ತೆಯಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದರು. ಅವರ ಮನೆ ಕೆಲಸಕ್ಕೆ ಮೊದಲು ಸೇರಿದ ಸುಚಿತ್ರಾ, ನಂತರ ತನ್ನ ಪತಿಯನ್ನೂ ಕರೆ ತಂದಿದ್ದಳು. ಇಬ್ಬರೂ ಔಟ್‌ಹೌಸ್‌ನಲ್ಲಿಯೇ ನೆಲೆಸಿದ್ದರು. ಬಳಿಕ ಇತರರೊಂದಿಗೆ ಸಂಚು ರೂಪಿಸಿ 2009ರ ಫೆಬ್ರವರಿ 16ರಂದು ಮನೆಯಲ್ಲಿದ್ದ ಮೂವರನ್ನೂ ಕತ್ತು ಹಿಸುಕಿ ಕೊಂದು ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದರು. ಆನಂತರ, ತ್ರಿವಳಿ ಕೊಲೆಯ ಸಂಗತಿ ಬಯಲಾಗಿತ್ತು.

Related Articles

Comments (0)

Leave a Comment