ಸಾರಕ್ಕಿ ಕೆರೆ ಬಫರ್ ವಲಯದ ಒತ್ತುವರಿ ತೆರವಿಗೆ ಸಮಿತಿ ರಚಿಸಿ; ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
- by Jagan Ramesh
- February 20, 2026
- 884 Views
ಬೆಂಗಳೂರು: ಜೆ.ಪಿ.ನಗರದ ಪುಟ್ಟೇನಹಳ್ಳಿ ಬಳಿಯ ಸಾರಕ್ಕಿ ಕೆರೆ ಬಫರ್ ವಲಯದ ಒತ್ತುವರಿ ಮತ್ತು ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ಸಮಿತಿ ರಚನೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಸಾರಕ್ಕಿ ಕೆರೆ ಬಫರ್ ವಲಯದಲ್ಲಿನ ಒತ್ತುವರಿ ತೆರವುಗೊಳಿಸಲು ಸರ್ಕಾರ ಮತ್ತು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ನಿರ್ದೇಶಿಸುವಂತೆ ಕೋರಿ ಸಾರಕ್ಕಿ ಕೆರೆ ಪ್ರದೇಶ ಅಭಿವೃದ್ಧಿ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಕೆರೆ ಪ್ರದೇಶ ಒತ್ತುವರಿ ತೆರವಿಗೆ ಅಗತ್ಯ ಕ್ರಮ ಕೈಗೊಳ್ಳಲು ಬೆಂಗಳೂರು ನಗರ ಜಿಲ್ಲಾಧಿಕಾರಿ, ಬಿಬಿಎಂಪಿ/ಜಿಬಿಎ ಮತ್ತು ಕೆರೆ ಅಭಿವೃದ್ಧಿ ಪ್ರಾಧಿಕಾರದ ಪ್ರತಿನಿಧಿಗಳು ಸೇರಿದಂತೆ ಸಂಬಂಧಪಟ್ಟ ಅಗತ್ಯವಿರುವ ಉಳಿದ ಪಾಲುದಾರರನ್ನು ಒಳಗೊಂಡ ಸಮಿತಿ ರಚಿಸಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಿತು.
ಜತೆಗೆ, ಮೂರು ವಾರದೊಳಗೆ ಈ ಸಮಿತಿ ರಚಿಸಿ ಆದೇಶ ಹೊರಡಿಸಬೇಕು. ಸಮಿತಿ ಸದಸ್ಯರು ಕೆರೆ ಪ್ರದೇಶಕ್ಕೆ ಸ್ಥಳಕ್ಕೆ ಭೇಟಿ ನೀಡಿ ಕೆರೆ ಬಫರ್ ವಲಯದಲ್ಲಿ ನಿರ್ಮಾಣ ಮಾಡಿರುವ ಕಟ್ಟಡ ಮತ್ತು ಒತ್ತುವರಿದಾರರನ್ನು ಗುರುತಿಸಿ ನೋಟಿಫೈ ಮಾಡಬೇಕು. ಕೆರೆ ಸಂರಕ್ಷಣೆ ನಿಟ್ಟಿನಲ್ಲಿ ಒತ್ತುವರಿ ತೆರವು ಸೇರಿದಂತೆ ಇನ್ನುಳಿದ ಕ್ರಮ ನಡೆಸಬೇಕು. ಸಮಿತಿಯು ನೋಡಲ್ ಅಧಿಕಾರಿಯ ಮೂಲಕ 3 ತಿಂಗಳಲ್ಲಿ ಈ ಆದೇಶದ ಅನುಪಾಲನಾ ವರದಿ ಸಲ್ಲಿಸಬೇಕು. ಸಮಿತಿ ಪ್ರಕಟಿಸುವ ಪಟ್ಟಿಯಲ್ಲಿ ಹೆಸರಿಸಲಾದ ಒತ್ತುವರಿದಾರರ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ ಎಂದು ತಿಳಿಸಿದ ನ್ಯಾಯಪೀಠ ಅರ್ಜಿ ಇತ್ಯರ್ಥಪಡಿಸಿತು.
ಇದೇ ವೇಳೆ, ನ್ಯಾಯಾಲಯದ ಈ ಆದೇಶದ ಅನುಪಾಲನಾ ವರದಿ ಸಲ್ಲಿಕೆಗಾಗಿ ಜೂನ್ 30ಕ್ಕೆ ಅರ್ಜಿಯನ್ನು ನ್ಯಾಯಾಲಯದ ಮುಂದೆ ಪಟ್ಟಿಮಾಡಬೇಕು ಎಂದು ರಿಜಿಸ್ಟ್ರಿಗೆ ನ್ಯಾಯಪೀಠ ನಿರ್ದೇಶಿಸಿದೆ.
Related Articles
Thank you for your comment. It is awaiting moderation.



Comments (0)