ಅಂಗವಿಕಲರ ಕಾಯ್ದೆಯ ಸಮರ್ಪಕ ಅನುಷ್ಠಾನಕ್ಕೆ ಕೋರಿದ ಪಿಐಎಲ್; ಸಮಗ್ರ ವರದಿ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
- by Jagan Ramesh
- November 14, 2025
- 28 Views
ಬೆಂಗಳೂರು: ಸರ್ಕಾರಿ ನೌಕರಿಗಳಲ್ಲಿ ಮೀಸಲಾತಿ ಸೇರಿ ಅಂಗವಿಕಲರಿಗೆ ವಿವಿಧ ಸೌಲಭ್ಯಗಳನ್ನು ಖಾತ್ರಿಪಡಿಸುವ ‘ಅಂಗವಿಕಲರ ಹಕ್ಕುಗಳ ಕಾಯ್ದೆ-2016’ ಅನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನಿರ್ದೇಶನ ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿರುವ ಹೈಕೋರ್ಟ್, ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದಕ್ಕೆ ಸಂಬಂಧಿಸಿದಂತೆ 6 ವಾರಗಳಲ್ಲಿ ಸಮಗ್ರ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ನಿರ್ದೇಶಿಸಿದೆ.
ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಹಾಗೂ ಅವರ ಇಬ್ಬರು ಮಕ್ಕಳಾದ ವೈ. ಕಾರ್ತಿಕ್ ಮತ್ತು ವೈ. ಕೌಶಿಕ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಅಂಗವಿಕಲರ ಸಬಲೀಕರಣ ಇಲಾಖೆ ಹಾಗೂ ಇಲಾಖೆಯ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿತಲ್ಲದೆ, ಕಾಯ್ದೆಯ ಸೆಕ್ಷನ್ 17, 24, 34, 35, 37 ಮತ್ತು 88ರ ಜಾರಿಗೆ ಸಂಬಂಧಿಸಿದಂತೆ ಸಮಗ್ರ ವಸ್ತುಸ್ಥಿತಿ ವರದಿಯನ್ನು 6 ವಾರಗಳಲ್ಲಿ ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಫೆಬ್ರವರಿ 4ಕ್ಕೆ ಮುಂದೂಡಿತು. ವಿಶೇಷವೆಂದರೆ, ಪಿಐಎಲ್ ಸಲ್ಲಿಸಿರುವ ಮೊದಲನೇ ಅರ್ಜಿದಾರ ವೈ. ಕಾರ್ತಿಕ್ ಸ್ವತಃ ದೃಷ್ಟಿದೋಷ ಸಮಸ್ಯೆ ಎದುರಿಸುತ್ತಿದ್ದಾರೆ.
ಅರ್ಜಿದಾರರ ವಾದವೇನು?
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲ ಪ್ರದೀಪ್ ನಾಯಕ್ ವಾದ ಮಂಡಿಸಿ, 2024ರ ಸಿಎಜಿ ವರದಿ ಪ್ರಕಾರ ಅಂಗವಿಕಲರ ಕಲ್ಯಾಣಕ್ಕೆ ನಿಗದಿಪಡಿಸಬೇಕಾದ ನಿಧಿಯನ್ನು ಹಂಚಿಕೆ ಮಾಡಿಲ್ಲ. ಹಣ ಹಂಚಿಕೆ ಮಾಡುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪ್ರಸ್ತಾವ ಸಲ್ಲಿಸಿಲ್ಲ. ಸರ್ಕಾರಿ ಉದ್ಯೋಗದಲ್ಲಿ ಶೇ. 5 ಮೀಸಲಾತಿ ಕಲ್ಪಿಸಬೇಕು. ಆ ಕೆಲಸವೂ ಆಗಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಖಾಸಗಿ ಕ್ಷೇತ್ರದಲ್ಲಿ ಅಂಗವಿಕಲರನ್ನು ನೇಮಕ ಮಾಡಿಕೊಳ್ಳುವ ಉದ್ಯೋಗದಾತರಿಗೆ ಪ್ರೋತ್ಸಾಹ ಧನ (ಇನ್ಸೆಂಟಿವ್) ನೀಡುತ್ತಿಲ್ಲ. ಕೃಷಿ ಭೂಮಿ, ಮನೆ ಹಂಚಿಕೆ ಮಾಡಬೇಕು. ಅದನ್ನೂ ಮಾಡಲಾಗುತ್ತಿಲ್ಲ. ಕಾಯ್ದೆಯ ಸೆಕ್ಷನ್ 34 ಮೀಸಲಾತಿಗೆ ಸಂಬಂಧಿಸಿದ್ದಾಗಿದೆ. ಸೆಕ್ಷನ್ 35ರಲ್ಲಿ ಅಂಗವಿಕಲಿಗೆ ಉದ್ಯೋಗ ಕಲ್ಪಿಸುವ ಉದ್ಯೋಗದಾತರಿಗೆ ಪ್ರೋತ್ಸಾಹ ಧನ, ಸೆಕ್ಷನ್ 37 ವಿಶೇಷ ಯೋಜನೆಗೆ ಸಂಬಂಧಿಸಿವೆ ಎಂದು ತಿಳಿಸಿದರು.
ಅರ್ಜಿಯಲ್ಲೇನಿದೆ?
ಅರ್ಜಿದಾರರಲ್ಲಿ ಒಬ್ಬರಾಗಿರುವ ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರು 2024 ಮತ್ತು 2025 ಜುಲೈನಲ್ಲಿ ನಡೆದ ಅಧಿವೇಶನದಲ್ಲಿ ಕೇಳಿದ ಪ್ರಶ್ನೆಗೆ ಸರ್ಕಾರ ಸಮರ್ಪಕ ಉತ್ತರ ಕೊಡದ ಕಾರಣ ಹಾಗೂ 2024ನೇ ಸಾಲಿನ ಸಿಎಜಿ ವರದಿಯ ಆಕ್ಷೇಪಣೆಗಳನ್ನು ಆಧರಿಸಿ ಈ ಅರ್ಜಿ ಸಲ್ಲಿಸಲಾಗಿದೆ. ಅರ್ಜಿದಾರರು ವೈಯುಕ್ತಿಕವಾಗಿ ಯಾವುದೇ ಪರಿಹಾರ ಕೋರುತ್ತಿಲ್ಲ. ಅಂಗವಿಕಲರ ಬಗೆಗಿನ ಕಾಳಜಿಯಿಂದಾಗಿ ಈ ಅರ್ಜಿ ಸಲ್ಲಿಸಲಾಗಿದೆ. 2016ರಲ್ಲಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ತಿದ್ದುಪಡಿ ತಂದು ದಶಕವಾಗುತ್ತಾ ಬಂದರೂ, ಸರ್ಕಾರಿ ನೌಕರಿಗಳಲ್ಲಿ ಮೀಸಲಾತಿ ಸೇರಿ ಅಂಗವಿಕಲರ ಸಾಮಾಜಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ಸೌಲಭ್ಯಗಳಿಗೆ ಸಂಬಂಧಿಸಿದ ಕಾಯ್ದೆಯ ಸೆಕ್ಷನ್ಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲಾಗಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಅಂಗವಿಕಲರಿಗೆ ಹೆಚ್ಚುವರಿಯಾಗಿ ಶಾಲೆ ಮತ್ತು ಸಂಸ್ಥೆಗಳನ್ನು ತೆರೆಯಬೇಕು. ಎಲ್ಲ ಶಾಲೆಗಳಲ್ಲಿ ಅಂಗವಿಕಲರಿಗೆ ಅಗತ್ಯವಿರುವ ಸೌಲಭ್ಯ ಕಲ್ಪಿಸಬೇಕು. ಅಂಗವಿಕಲರಿಗಾಗಿ ವಿಶೇಷ ತರಬೇತಿ ಕೇಂದ್ರ ಆರಂಭಿಸಬೇಕು. ಸರ್ಕಾರಿ ಉದ್ಯೋಗದಲ್ಲಿ ಅಂಗವಿಕಲರಿಗೆ ಶೇ.4 ಮೀಸಲಾತಿ ನೀಡಬೇಕು. ಸರ್ಕಾರದ ಪ್ರತಿ ಇಲಾಖೆಯಲ್ಲೂ ಅಂಗವಿಕಲರ ಕಲ್ಯಾಣಕ್ಕೆ ಶೇ. 5ರ ಬಜೆಟ್ ಮೀಸಲಿಡಬೇಕು. ವಿಶೇಷ ಅಂಗವಿಕಲತೆ ಗುರುತಿನ ಚೀಟಿ (ಯುಡಿಡಿ) ನೀಡಬೇಕು. ಅನರ್ಹರಿಗೆ ನೀಡಿರುವ ಯುಡಿಡಿ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
Related Articles
Thank you for your comment. It is awaiting moderation.


Comments (0)