ಮಕ್ಕಳನ್ನು ಕಳೆದುಕೊಂಡಿದ್ದ ದಂಪತಿಗೆ ಹೈಕೋರ್ಟ್ ನೆರವಿನ ಹಸ್ತ; ದತ್ತು ಮನವಿ ಪರಿಗಣಿಸಲು ಸಿಎಆರ್ಎಗೆ ನಿರ್ದೇಶನ
- by Jagan Ramesh
- February 21, 2026
- 4 Views
ಬೆಂಗಳೂರು: ಎರಡು ಮಕ್ಕಳನ್ನು ಕಳೆದುಕೊಂಡು ದುಖಃದಲ್ಲಿದ್ದ ಶಿವಮೊಗ್ಗದ ದಂಪತಿ ತಮಗೆ ಮಠದಲ್ಲಿ ಸಿಕ್ಕ ಹಸುಗೂಸನ್ನು ಹತ್ತು ವರ್ಷ ಸಾಕಿ ಸಲಹಿದ ಬಳಿಕ ಆ ಮಗುವನ್ನು ‘ದತ್ತು’ ಪಡೆಯಲು ಕಾನೂನು ಹೋರಾಟ ನಡೆಸುವಂತಾಗಿತ್ತು. ಇದೀಗ ಆ ದಂಪತಿಯ ನೆರವಿಗೆ ಧಾವಿಸಿರುವ ಹೈಕೋರ್ಟ್, ಮಗುವನ್ನು ದತ್ತು ನೀಡಲು ದಂಪತಿ ಮಾಡಿರುವ ಮನವಿಯನ್ನು ಮಾನವೀಯ ನೆಲೆಯಲ್ಲಿ ಪರಿಗಣಿಸುವಂತೆ ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರಕ್ಕೆ (ಸಿಎಆರ್ಎ) ಆದೇಶಿಸಿದೆ.
ಶಿವಮೊಗ್ಗದ ದಂಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಆಲಿಸಿದ ನ್ಯಾಯಮೂರ್ತಿ ಡಿ.ಕೆ. ಸಿಂಗ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಮಗುವಿಗೆ ವಿಶೇಷ ಆರೈಕೆ ಮತ್ತು ರಕ್ಷಣೆ ನೀಡಬೇಕಾಗಿದೆ. ಆದ್ದರಿಂದ, ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯುಸಿ) ಬಾಲ ನ್ಯಾಯ ಕಾಯ್ದೆ (ಮಕ್ಕಳ ಆರೈಕೆ ಮತ್ತು ರಕ್ಷಣೆ) ನಿಯಮ 18 ಮತ್ತು 19ರಂತೆ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿ ಮಗುವನ್ನು ಆ ದಂಪತಿ ದತ್ತು ಪಡೆಯಲು ಅರ್ಹರೋ ಇಲ್ಲವೋ ಎಂಬುದನ್ನು ಪತ್ತೆ ಹಚ್ಚಬೇಕು. ಅನಂತರ ಸಿಎಆರ್ಎ ಮಗುವಿನ ದತ್ತು ಪಡೆಯಲು ದಂಪತಿ ಸಲ್ಲಿಸಿರುವ ಅರ್ಜಿಯ ಪ್ರಕ್ರಿಯೆ ನಡೆಸಬೇಕು ಎಂದು ಆದೇಶಿಸಿದೆ.
ಅರ್ಜಿದಾರರು ತಮ್ಮ ಸ್ವಂತ ಮಗುವಿನಂತೆ ಮಗುವನ್ನು ಸಾಕಿದ್ದು, ಅವರ ಕೈಯಲ್ಲಿ ಮಗು ಸುರಕ್ಷಿತವಾಗಿರುತ್ತದೆಂದು ಕೋರ್ಟ್ ಅಭಿಪ್ರಾಯಪಡುತ್ತಿದೆ. ಆದ್ದರಿಂದ, ಬೆಂಗಳೂರಿನಲ್ಲಿರುವ ಮಕ್ಕಳ ಸಿಡಬ್ಲ್ಯುಸಿ ಮುಂದೆ ಮಗುವನ್ನು ಮಾರ್ಚ್ 10ಕ್ಕೆ ಹಾಜರುಪಡಿಸಬೇಕು. ಸಮಿತಿ ತನ್ನ ವಿಚಾರಣೆಯನ್ನು ಪೂರ್ಣಗೊಳಿಸಿದ ನಂತರ ಮಗುವನ್ನು ದತ್ತು ಪಡೆಯಲು ಅರ್ಜಿದಾರರ ಅರ್ಹತೆಯನ್ನು ಗುರುತಿಸಬೇಕು. ಅರ್ಜಿದಾರರು ಮಗುವನ್ನು ದತ್ತು ಪಡೆಯಲು ಅರ್ಹರೆಂದು ಕಂಡುಬಂದರೆ, ಸಮಿತಿ ವಿಚಾರಣೆ ಪೂರ್ಣಗೊಳಿಸಿದ ನಂತರ ಬೆಂಗಳೂರಿನ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರಕ್ಕೆ ಅರ್ಜಿದಾರರ ಅರ್ಜಿಯನ್ನು ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಸೂಚಿಸಬೇಕು ಎಂದು ಆದೇಶಿಸಿದೆ.
ಪ್ರಕರಣವೇನು?
ದಂಪತಿಯ ಅಂಗವಿಕಲ ಮಗು 12 ವರ್ಷ ಆಗಿದ್ದಾಗ ತೀರಿಕೊಂಡಿತ್ತು. ಆನಂತರ, ಜನಿಸಿದ್ದ ಹೆಣ್ಣು ಮಗು ಕೂಡ ನಾಲ್ಕು ತಿಂಗಳಿಗೇ ಮೃತಪಟ್ಟಿತ್ತು. ಈ ಮಧ್ಯೆ, ಯಾರೋ ಬಿಟ್ಟು ಹೋಗಿದ್ದ ನವಜಾತ ಶಿಶುವನ್ನು ಶ್ರೀ ಗವಿ ಸಿದ್ದೇಶ್ವರ ಮಠದಲ್ಲಿ ಸಾಕಲಾಗುತ್ತಿತ್ತು. ಈ ವಿಷಯ ತಿಳಿದ ದಂಪತಿ ಮಗುವನ್ನು ದತ್ತು ಪಡೆಯಲು ಬಯಸಿದ್ದರು. ಮಠದ ಸ್ವಾಮೀಜಿ ಮೂರು ದಿನಗಳ ಹಸುಗೂಸನ್ನು, ಮಕ್ಕಳನ್ನು ಕಳೆದುಕೊಂಡು ದುಖಃದಲ್ಲಿದ್ದ ದಂಪತಿಗೆ 2016ರ ಜೂನ್ 10ರಂದು ನೀಡಿದ್ದರು. ಆ ದಂಪತಿ ಅತ್ಯಂತ ಪ್ರೀತಿ ಮತ್ತು ಆರೈಕೆ ಮಾಡಿ ಮಗುವನ್ನು ಬೆಳೆಸುತ್ತಿದ್ದರು.
ಆದರೆ, ಮಕ್ಕಳ ಕಲ್ಯಾಣ ಸಮಿತಿಗೆ ವಿಷಯ ತಿಳಿದು, ಅದು ದಂಪತಿಗೆ 2017ರ ಜುಲೈ 29ರಂದು ನೋಟಿಸ್ ನೀಡಿತ್ತು. ದಂಪತಿ ಸಮಿತಿ ಮುಂದೆ ಹಾಜರಾಗಿ ನಡೆದಿದ್ದೆಲ್ಲವನ್ನೂ ವಿವರಿಸಿದ್ದರು. ಆನಂತರ ಸುಮ್ಮನಾಗಿದ್ದ ಸಮಿತಿ 2020ರ ಫೆಬ್ರವರಿ 6ರಂದು 3 ವರ್ಷದ ಅನಾಥ ಮಗುವೊಂದು ದಂಪತಿಗಳ ಬಳಿ ಅಕ್ರಮ ಕಸ್ಟಡಿಯಲ್ಲಿದೆ, ಆ ಮಗುವಿನ ತಂದೆ ತಾಯಿ ಯಾರಾದರೂ ಇದ್ದರೆ, ಸೂಕ್ತ ದಾಖಲೆಗಳೊಂದಿಗೆ ಬಂದು ಹಕ್ಕು ಮಂಡಿಸಬಹುದೆಂದು ಪತ್ರಿಕಾ ಪ್ರಕಟಣೆ ಹೊರಡಿಸಿತ್ತು.
ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಪ್ರಕರಣ ಬಾಕಿ ಇದ್ದಾಗಲೇ ಅರ್ಜಿದಾರರು 2021ರಲ್ಲಿ 2016ರ ಮಾದರಿ ಫೋಸ್ಟರ್ ಕೇರ್ ನಿಯಮದಂತೆ ಮಗುವಿನ ಆರೈಕಗೆ ಅನುಮತಿ ಕೋರಿದ್ದರು. ಆದರೆ ಮಗುವನ್ನು ಸಮಿತಿ ವಶಕ್ಕೆ ಒಪ್ಪಿಸಲಾಗಿತ್ತು. ಅರ್ಜಿದಾರರು ಎಷ್ಟೇ ಮನವಿ ಮಾಡಿದರೂ ಸಹ ಸಮಿತಿ ಅದಕ್ಕೆ ಸ್ಪಂದಿಸಿರಲಿಲ್ಲ. ಇದರಿಂದ, ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಲಯದ ಆದೇಶದ ಮೇರೆಗೆ ಮಗುವನ್ನು 2021ರ ಅಕ್ಟೋಬರ್ 8ರಂದು ಅರ್ಜಿದಾರರ ವಶಕ್ಕೆ ಒಪ್ಪಿಸಲಾಗಿತ್ತು. ಸದ್ಯ ಆ ಮಗುವಿಗ ಒಂಬತ್ತೂವರೆ ವರ್ಷವಾಗಿದ್ದು, ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದೆ. ಮಗುವಿನ ಭವಿಷ್ಯ ಇದೀಗ ಮಕ್ಕಳ ಕಲ್ಯಾಣ ಸಮಿತಿ ಕೈಗೊಳ್ಳುವ ನಿರ್ಧಾರದಲ್ಲಿ ಅಡಗಿದೆ.
Related Articles
Thank you for your comment. It is awaiting moderation.


Comments (0)