ನೀಟ್ ಫಲಿತಾಂಶದ ಬಳಿಕ ಜಾತಿ ಬದಲಾವಣೆಗೆ ಮನವಿ; ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ ಪ್ರವೇಶಕ್ಕೆ ನಡೆಸುವ ನೀಟ್‌-ಪಿಜಿ 2025ರ ಫಲಿತಾಂಶ ಪ್ರಕಟಗೊಂಡ ಬಳಿಕ ಸಾಮಾನ್ಯ ವರ್ಗದಿಂದ ಇತರ ಹಿಂದುಳಿದ ವರ್ಗಕ್ಕೆ (ಒಬಿಸಿ) ಜಾತಿ ಬದಲಾವಣೆಗೆ ಅನುಮತಿ ಕೋರಿ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಜಾತಿ ಬದಲಾವಣೆಗೆ ಅನುಮತಿ ಕೋರಿ ಬಳ್ಳಾರಿಯ ಡಾ. ಸಿ. ಅನುಷಾ (24) ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ. ಸಿಂಗ್‌ ಹಾಗೂ ನ್ಯಾಯಮೂರ್ತಿ ವೆಂಕಟೇಶ್‌ ಟಿ. ನಾಯ್ಕ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.

ಅರ್ಜಿದಾರರು ನಿರ್ದಿಷ್ಟ ಪ್ರವರ್ಗದಲ್ಲಿ ನೀಟ್‌-ಪಿಜಿ ಅರ್ಜಿ ನಮೂನೆ ಭರ್ತಿ ಮಾಡಿದ್ದು, ಪ್ರವರ್ಗ ಬದಲಾವಣೆ ಮಾಡಿಕೊಳ್ಳಲು ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್‌ಬಿಇಎಂಎಸ್) ನೀಡಿದ್ದ ಗಡುವಿನೊಳಗೆ ಅದನ್ನು ಬದಲಿಸಿಕೊಳ್ಳಲು ವಿಫಲರಾಗಿದ್ದಾರೆ. ಆದರೆ, ಫಲಿತಾಂಶ ಪ್ರಕಟವಾದ ಬಳಿಕ ಸಾಮಾನ್ಯ ವರ್ಗದಿಂದ ಒಬಿಸಿಗೆ ಬದಲಾವಣೆ ಮಾಡಲು ಅನುಮತಿ ಕೋರಿದ್ದಾರೆ. ಇದಕ್ಕೆ ಕಾನೂನು ಮತ್ತು ನಿಯಮಗಳಲ್ಲಿ ಅವಕಾಶವಿಲ್ಲ ಎಂದು ತಿಳಿಸಿರುವ ಹೈಕೋರ್ಟ್ ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಪ್ರಕರಣವೇನು?
ಅರ್ಜಿದಾರರು ಸಾಮಾನ್ಯ ವರ್ಗದ ಅಭ್ಯರ್ಥಿಯಾಗಿ ನೀಟ್‌-ಪಿಜಿ 2025 ಪರೀಕ್ಷೆ ತೆಗೆದುಕೊಂಡಿದ್ದರು. ಅರ್ಜಿ ಸಲ್ಲಿಸಿದ್ದಾಗ ತಾವು ಸಾಮಾನ್ಯ ವರ್ಗ(ಜಿಎಂ) ಕೆಟಗರಿ ವಿದ್ಯಾರ್ಥಿ ಎಂದು ನಮೂನೆಯಲ್ಲಿ ಭರ್ತಿ ಮಾಡಿ, 2025ರ ಆಗಸ್ಟ್ 19ರಂದು ಪರೀಕ್ಷೆಯನ್ನೂ ಬರೆದಿದ್ದರು. ಫಲಿತಾಂಶ ಪ್ರಕಟಗೊಂಡ ಬಳಿಕ ತಮಗೆ ಜಿಎಂನಿಂದ ಒಬಿಸಿ ಪ್ರವರ್ಗಕ್ಕೆ ಜಾತಿ ಬದಲಾವಣೆಗೆ ಅನುಮತಿ ನೀಡಬೇಕು ಹಾಗೂ ತಮ್ಮನ್ನು ಹಿಂದುಳಿದ ವರ್ಗವಾದ ನೇಕಾರ ಸಮುದಾಯಕ್ಕೆ ಸೇರಿದವರೆಂದು ಪರಿಗಣಿಸುವಂತೆ ಪ್ರತಿವಾದಿಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿದ್ದರು.

ಪ್ರತಿವಾದಿಗಳಾದ ಎನ್‌ಬಿ‌ಇಎಂಎಸ್ ಹಾಗೂ ಕೆಇಎ ಪರ ವಕೀಲರು ವಾದ ಮಂಡಿಸಿ, ಎಲ್ಲ ಅಭ್ಯರ್ಥಿಗಳಿಗೆ ಅರ್ಜಿ ಭರ್ತಿ ಮಾಡಿದ ನಂತರ 2025ರ ಮಾರ್ಚ್ 9ರಿಂದ 11ರವರೆಗೆ ಕೆಟಗರಿ ಬದಲಾವಣೆಗೆ ಅವಕಾಶ ನೀಡಲಾಗಿತ್ತು. ಆ ಸಮಯದಲ್ಲಿ ಅವರು ಜಾತಿ ಕಲಂನಲ್ಲಿ ತಪ್ಪಾಗಿದ್ದರೆ ಅದನ್ನು ಸರಿಪಡಿಸಿಕೊಳ್ಳಬಹುದಿತ್ತು. ಆದರೆ, ಅರ್ಜಿದಾರರು ಪರೀಕ್ಷೆಯಲ್ಲಿ ಯಶಸ್ವಿಯಾಗದ ಕಾರಣಕ್ಕೆ ಸಾಮಾನ್ಯ ವರ್ಗದಿಂದ ಒಬಿಸಿಗೆ ಜಾತಿ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ನಿಯಮಗಳಲ್ಲಿ ಅದಕ್ಕೆ ಅವಕಾಶವಿಲ್ಲ. ಒಂದೊಮ್ಮೆ, ಈ ರೀತಿ ಒಬ್ಬರಿಗೆ ಅವಕಾಶ ಮಾಡಿಕೊಟ್ಟರೆ ಇಡೀ ನೀಟ್‌-ಪಿಜಿ ಫಲಿತಾಂಶವೇ ಏರುಪೇರಾಗಲಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.

Related Articles

Comments (0)

Leave a Comment