ಸೆಷನ್ಸ್ ಕೋರ್ಟ್‌ನಿಂದ 13 ಮಂದಿ ಕೊಲೆ ಆರೋಪಿಗಳು ಖುಲಾಸೆ; 14ನೇ ಆರೋಪಿಗೆ ಹೈಕೋರ್ಟ್‌ನಿಂದ ರಿಲೀಫ್
- by Jagan Ramesh
- March 3, 2026
- 9 Views
ಬೆಂಗಳೂರು: ಕೊಲೆ ಪ್ರಕರಣ ಒಂದರಲ್ಲಿ 13 ಆರೋಪಿಗಳನ್ನು ಖುಲಾಸೆಗೊಳಿಸಿದ ವಿಚಾರಣಾ ನ್ಯಾಯಾಲಯದ ತೀರ್ಪಿನ ಆಧಾರದಲ್ಲಿ 14ನೇ ಆರೋಪಿಯ ವಿರುದ್ಧ ವಿಚಾರಣೆಯನ್ನೂ ರದ್ದುಪಡಿಸಿ ಹೈಕೋರ್ಟ್ ಆದೇಶಿಸಿದೆ.
ಕೊಲೆ ಪ್ರಕರಣ ಸಂಬಂಧ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ವಿಚಾರಣೆ ರದ್ದು ಕೋರಿ ಆರೋಪಿ ಡಿ. ಪ್ರವೀಣ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಕೊಲೆ ಪ್ರಕರಣದಲ್ಲಿ ಇತರ ಆರೋಪಿಗಳು ಖುಲಾಸೆಯಾಗಿದ್ದಾರೆ ಎಂಬ ಕಾರಣಕ್ಕೆ ಸಮಾನತೆ ಆಧಾರದಲ್ಲಿ ಆರೋಪಿಯ ವಿಚಾರಣೆ ರದ್ದುಪಡಿಸುವುದು ಅಪರೂಪವಾಗಿದೆ.
ಅರ್ಜಿ ವಿಚಾರಣೆ ವೇಳೆ ಆರೋಪಿಯ ಪರ ವಕೀಲ ಡಿ. ಮೋಹನ್ ಕುಮಾರ್ ಹಾಜರಾಗಿ, ಕೊಲೆ, ಅಕ್ರಮ ಕೂಟ ಮತ್ತು ಅಪರಾಧಿಕ ಒಳಸಂಚು ಆರೋಪ ಪ್ರಕರಣದ ಒಟ್ಟು 13 ಆರೋಪಿಗಳನ್ನು ಖುಲಾಸೆಗೊಳಿಸಿ, ಸೆಷನ್ಸ್ ನ್ಯಾಯಾಲಯ 2025ರ ಆಗಸ್ಟ್ 30ರಂದು ಆದೇಶಿಸಿದೆ. ಅರ್ಜಿದಾರ ಪ್ರವೀಣ್ 14ನೇ ಆರೋಪಿಯಾಗಿದ್ದಾನೆ. ವಿಚಾರಣೆ ವೇಳೆ ತಲೆಮರೆಸಿಕೊಂಡಿದ್ದ. ಇತರ 13 ಆರೋಪಿಗಳನ್ನು ಪ್ರಕರಣದಿಂದ ಖುಲಾಸೆಗೊಳಿಸಿದ್ದರೂ ಸೆಷನ್ಸ್ ನ್ಯಾಯಾಲಯ ಪ್ರವೀಣ್ ವಿರುದ್ಧ ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಿದೆ. ಇತರ ಆರೋಪಿಗಳಿಗೆ ದೊರೆತಿರುವ ಪರಿಹಾರವನ್ನು ಪಡೆಯಲು ಅರ್ಜಿದಾರ ಆರೋಪಿಯೂ ಅರ್ಹನಾಗಿದ್ದಾನೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಸರ್ಕಾರದ ಪರ ವಕೀಲರು, ಅರ್ಜಿದಾರರು ಇತರ ಆರೋಪಿಗಳಂತೆ ವಿಚಾರಣಾ ನ್ಯಾಯಾಲಯದ ವಿಚಾರಣೆ ಎದುರಿಸಿ ಖುಲಾಸೆಯಾಗಿ ಬರಲಿ. ಸದ್ಯ ಈ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಕೋರಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಇತರ 13 ಆರೋಪಿಗಳು ಖುಲಾಸೆಯಾಗಿದ್ಧಾರೆ. ಆರೋಪಿಗಳ ವಿರುದ್ಧದ ಅಪರಾಧಗಳನ್ನು ದೃಢಪಡಿಸುವಲ್ಲಿ ತನಿಖಾಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ಧಾರೆ. ಇಂತಹ ಪರಿಸ್ಥಿತಿಯಲ್ಲಿ ಸೆಷನ್ಸ್ ನ್ಯಾಯಾಲಯ ವಿಚಾರಣೆ ನಡೆಸಿದರೂ, ಅರ್ಜಿದಾರ ಖುಲಾಸೆಯಾಗಬಹುದು. ಆದ್ದರಿಂದ, ನ್ಯಾಯಾಲಯದ ಅಮೂಲ್ಯ ಸಮಯವನ್ನು ಉಳಿಸುವ ದೃಷ್ಟಿಯಿಂದ ಅರ್ಜಿದಾರನ ವಿರುದ್ಧದ ಪ್ರಕರಣ ರದ್ದುಪಡಿಸುವುದು ಸೂಕ್ತ ಎಂದು ನಿರ್ಧರಿಸಿ, ಅರ್ಜಿದಾರರನ್ನು ಪ್ರಕರಣದಿಂದ ಖುಲಾಸೆಗೊಳಿಸಿ ಆದೇಶಿಸಿತು.
ಪ್ರಕರಣವೇನು?
ಜೆ.ಪಿ.ನಗರದ ನಿವಾಸಿ ವರುಣ್ (24) ಎಂಬಾತನನ್ನು ಮಾರಾಕಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ 2019ರ ಆಗಸ್ಟ್ 25ರಂದು ನಡೆದಿತ್ತು. ಜೆ.ಪಿ.ನಗರ ಠಾಣೆ ಪೊಲೀಸರು ಅರ್ಜಿದಾರ ಪ್ರವೀಣ್ ಸೇರಿ ಒಟ್ಟು 14 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 13 ಆರೋಪಿಗಳನ್ನು ವಿಚಾರಣಾ ನ್ಯಾಯಾಲಯ ಖುಲಾಸೆಗೊಳಿಸಿತ್ತು.
Related Articles
Thank you for your comment. It is awaiting moderation.


Comments (0)