ದೂರು-ಪ್ರತಿದೂರುಗಳ ತನಿಖೆಗೆ ಒಬ್ಬರೇ ಅಧಿಕಾರಿ ‌ನೇಮಿಸಬೇಕು; ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತಾಕೀತು

ಬೆಂಗಳೂರು: ಯಾವುದೇ ಪ್ರಕರಣದ ಸಂಬಂಧ ದಾಖಲಾಗುವ ದೂರು ಮತ್ತು ಪ್ರತಿದೂರುಗಳನ್ನು ಒಬ್ಬರೇ ಅಧಿಕಾರಿ ತನಿಖೆ ನಡೆಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿರುವ ಹೈಕೋರ್ಟ್‌, ತಪ್ಪಿದರೆ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಆಸ್ತಿ ವ್ಯಾಜ್ಯವೊಂದರಲ್ಲಿ ಉಂಟಾದ ಕಲಹದ ಸಂಬಂಧ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿರುವ ಕೊಲೆ ಯತ್ನ ಪ್ರಕರಣ ರದ್ದು ಕೋರಿ ಕಲ್ಮನೆ ಗ್ರಾಮದ ಸಿದ್ದಪ್ಪ ಮತ್ತಿತರರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರು, ಪ್ರಕರಣದಲ್ಲಿ ದೂರು ಮತ್ತು ಪ್ರತಿದೂರು ದಾಖಲಾಗಿದ್ದು, ಅವುಗಳ ತನಿಖೆಗೆ ಇಬ್ಬರು ತನಿಖಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಇದನ್ನು ಆಲಿಸಿದ ನ್ಯಾಯಪೀಠ, ದೂರು ಮತ್ತು ಪ್ರತಿದೂರಿನ ತನಿಖೆಯನ್ನು ಒಬ್ಬರೇ ತನಿಖಾಧಿಕಾರಿ ನಡೆಸಬೇಕು ಎಂದು ಎಷ್ಟು ಬಾರಿ ಹೇಳಬೇಕು? ಎಂದು ಸರ್ಕಾರದ ವಿರುದ್ಧ ಅತೃಪ್ತಿ ಹೊರಹಾಕಿತು. ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್‌. ಜಗದೀಶ್‌ ಅವರು, ಪ್ರಕರಣವನ್ನು ಹೊಸದಾಗಿ ತನಿಖೆ ನಡೆಸಲು ಆದೇಶಿಸಬೇಕು ಎಂದರು.

ಆಗ ನ್ಯಾಯಪೀಠ, ಒಂದೇ ಪ್ರಕರಣಕ್ಕೆ ಸಂಬಂಧಿಸಿದ ದೂರು-ಪ್ರತಿದೂರಿನ ತನಿಖೆಗೆ ರಾಜ್ಯ ಸರ್ಕಾರ ಇಬ್ಬರು ತನಿಖಾಧಿಕಾರಿಗಳನ್ನು ನೇಮಿಸುತ್ತಿರುವುದು ಆಘಾತಕಾರಿ. ಆದರೆ, ದೂರು-ಪ್ರತಿದೂರಿಗೆ ಒಬ್ಬರೇ ತನಿಖಾಧಿಕಾರಿ ಇರಬೇಕು ಎಂಬುದರಲ್ಲಿ ಕಾನೂನು ಸ್ಪಷ್ಟವಾಗಿದೆ. ಈ ಸಂಬಂಧ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದ್ದು, ಅದು ಕಾಗದದಲ್ಲಿ ಮಾತ್ರ ಉಳಿದಿದೆ. ದೂರು-ಪ್ರತಿದೂರಿನಲ್ಲಿ ವಿಭಿನ್ನ ತನಿಖಾಧಿಕಾರಿ ನೇಮಿಸಿರುವ ಪ್ರಕರಣಗಳು ಈ ನ್ಯಾಯಾಲಯದ ಮುಂದೆ ಬರುತ್ತಿದ್ದು, ತನಿಖಾಧಿಕಾರಿಗಳು ವಿಭಿನ್ನ ಅಭಿಪ್ರಾಯ ನೀಡುತ್ತಾರೆ. ಒಬ್ಬರು ಬಿ ರಿಪೋರ್ಟ್‌ ಸಲ್ಲಿಸಿದರೆ ಮತ್ತೊಬ್ಬರು ಆರೋಪ ಪಟ್ಟಿ ಸಲ್ಲಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿತು.

ಹಾಲಿ ಪ್ರಕರಣದಲ್ಲಿ ಎರಡೂ ದೂರಿನ ಸಂಬಂಧ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಆದರೆ, ದೂರು-ಪ್ರತಿದೂರಿಗೆ ಒಬ್ಬರೇ ತನಿಖಾಧಿಕಾರಿ ನೇಮಕ ಮಾಡದೇ ಇರುವುದು ಕಾನೂನಿನ ಅಗತ್ಯತೆ ಪೂರೈಸುವುದಿಲ್ಲ. ಆದ್ದರಿಂದ, ಇಡೀ ಪ್ರಕರಣದಲ್ಲಿ ಹೊಸದಾಗಿ ತನಿಖೆ ನಡೆಯುವ ಅಗತ್ಯವಿದೆ. ಸರ್ಕಾರ ಒಂದೇ ಪ್ರಕರಣದ ದೂರು-ಪ್ರತಿದೂರಿನಲ್ಲಿ ಇಬ್ಬರು ತನಿಖಾಧಿಕಾರಿಗಳನ್ನು ನೇಮಿಸುವುದರಿಂದ ಹೀಗಾಗುತ್ತಿದೆ. ಇದು ಮರುಕಳಿಸಿದರೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸಕ್ಷಮ ಪ್ರಾಧಿಕಾರವನ್ನು ಎಚ್ಚರಿಸಲಾಗುತ್ತಿದೆ. ಸುತ್ತೋಲೆ ಹೊರಡಿಸಿದಾಗಿಯೂ ಇದು ಮರುಕಳಿಸಿದರೆ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತು.

ಅಂತಿಮವಾಗಿ ನ್ಯಾಯಪೀಠ, ಪ್ರಕರಣವನ್ನು ಒಬ್ಬರೇ ತನಿಖಾಧಿಕಾರಿ ಒಂದು ತಿಂಗಳಲ್ಲಿ ತನಿಖೆ ನಡೆಸಿ, ಸಕ್ಷಮ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಬೇಕು ಎಂದು ನಿರ್ದೇಶಿಸಿತು.

Related Articles

Comments (0)

Leave a Comment