ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದವನ ಶಿಕ್ಷೆ ಎತ್ತಿ ಹಿಡಿದ ಹೈಕೋರ್ಟ್; ವಿಚಾರಣಾ ಕೋರ್ಟ್ ತೀರ್ಪು ಪ್ರಶ್ನಿಸಿದ್ದ ಮೇಲ್ಮನವಿ ವಜಾ
- by Jagan Ramesh
- July 17, 2025
- 28 Views

ಬೆಂಗಳೂರು: ಮೂರು ವರ್ಷಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದ್ದ 6 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ (ಪೋಕ್ಸೊ) ಪ್ರಕರಣದಲ್ಲಿ 27 ವರ್ಷದ ವ್ಯಕ್ತಿಯೊಬ್ಬನಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ 20 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಶಿಕ್ಷೆ ವಿಧಿಸಿ ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯ ಹೊರಡಿಸಿದ್ದ ತೀರ್ಪು ಪ್ರಶ್ನಿಸಿ ಕುಮಟಾ ತಾಲೂಕಿನ ವಾನಳ್ಳಿಯ ಅನ್ಸಾರಿ ಖಾಸಿಂ ಜಿಂಗರು ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ನ್ಯಾಯಮೂರ್ತಿ ಜೆ.ಎಂ. ಖಾಜಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಪ್ರಾಸಿಕ್ಯೂಷನ್ ದಾಖಲೆಗಳ ರೂಪದಲ್ಲಿ ಸಲ್ಲಿಸಿರುವ ಮೌಖಿಕ ಹಾಗೂ ದಾಖಲಾಗಿರುವ ಸಾಕ್ಷಿಗಳ ಹೇಳಿಕೆಯಂತೆ ಆರೋಪಿ ವಿರುದ್ಧ ಮಾಡಿರುವ ಆರೋಪಗಳು ಬಹುತೇಕ ಸಾಬೀತಾಗುತ್ತವೆ. ವಿಚಾರಣಾ ನ್ಯಾಯಾಲಯ ಪ್ರಾಸಿಕ್ಯೂಷನ್ ಸಲ್ಲಿಸಿದ ಎಲ್ಲ ಸಾಕ್ಷ್ಯಗಳನ್ನು ಪರಿಶೀಲಿಸಿದ ಬಳಿಕ ಆರೋಪಿ ಕೃತ್ಯ ಎಸಗಿರುವುದನ್ನು ದೃಢಪಡಿಸಿಕೊಂಡು ಆತನನ್ನು ಅಪರಾಧಿ ಎಂದು ಪರಿಗಣಿಸಿ ಶಿಕ್ಷೆ ವಿಧಿಸಿದೆ. ಆದ್ದರಿಂದ, ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಪ್ರಕರಣದ ಸಾಕ್ಷಿಗಳ ಹೇಳಿಕೆ ಮತ್ತು ದಾಖಲೆಗಳನ್ನು ಪರಿಶೀಲಿಸಿದರೆ, ಘಟನೆ ನಡೆದಾಗ ಬಾಲಕನಿಗೆ ಆರು ವರ್ಷವಾಗಿದ್ದು, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಅನ್ವಯವಾಗಲಿದೆ. ದೂರು ನೀಡುವುದು ತಡವಾಗಿದೆ ಎಂಬ ಆರೋಪಿಯ ವಾದವನ್ನು ಪುರಸ್ಕರಿಸಲಾಗದು. ಆರೋಪಿಯು ಬಾಲಕನ ಮೇಲೆ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯವನ್ನು ಎಸಗಿದ್ದಾನೆ. ಭಯಗೊಂಡಿದ್ದ ಬಾಲಕ ಮೊದಲಿಗೆ ಏನು ನಡೆದಿದೆ ಎಂಬುದನ್ನು ಹೇಳಿಲ್ಲ. ಆದರೆ, ವೈದ್ಯಕೀಯ ಪರೀಕ್ಷೆಯ ನಂತರ ಎಲ್ಲ ವಿಚಾರಗಳು ಬೆಳಕಿಗೆ ಬಂದಿವೆ. ಪ್ರಕರಣದ ಎಲ್ಲ ವಿವರಗಳನ್ನು ಅವಲೋಕಿಸಲಾಗಿದ್ದು, ವಿಚಾರಣಾ ನ್ಯಾಯಾಲಯದ ಆದೇಶ ಸೂಕ್ತವಾಗಿದೆ. ಅದರಲ್ಲಿ ಹೈಕೋರ್ಟ್ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ ಮೇಲ್ಮನವಿಯನ್ನು ವಜಾಗೊಳಿಸಿದೆ.
ಪ್ರಕರಣವೇನು?
2022ರ ಮಾರ್ಚ್ 15ರಂದು ಆರು ವರ್ಷದ ಬಾಲಕನೊಬ್ಬ ಕಾಗಲ್ ಹಿನಿ ಗ್ರಾಮದ ಅನ್ಸಾರಿ ಅಬ್ದುಲ್ ಕರೀಂ ಅಂಗಡಿ ಎದುರು ಆಟವಾಡಿಕೊಂಡಿದ್ದನು. ಆ ಬಾಲಕನಿಗೆ ಬೈಕ್‌ನಲ್ಲಿ ರೈಡ್ ಕರೆದೊಯ್ಯುವುದಾಗಿ ಹೇಳಿ ಆರೋಪಿ ತನ್ನ ಬೈಕ್‌ನಲ್ಲಿ ಕೂಡಿಸಿಕೊಂಡು ಅಘನಾಶಿನಿ ನದಿಯ ಸಮೀಪಕ್ಕೆ ಕರೆದೊಯ್ದು ಆತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನು. ಮೊದಲಿಗೆ ಬಾಲಕ ಹೆದರಿ ಏನನ್ನೂ ಹೇಳಿರಲಿಲ್ಲ. ಆದರೆ, ಬಾಲಕನ ಸಂಬಂಧಿ ಮೂಸಾ ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರು ಆರೋಪಿಯನ್ನು ಬಂಧಿಸಿ, ಆರೋಪಿ ಹಾಗೂ ಬಾಲಕನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ದೌರ್ಜನ್ಯ ಎಸಗಿರುವುದು ದೃಢಪಟ್ಟಿತ್ತು. ಐಪಿಸಿ ಸಕ್ಷನ್ 377 ಮತ್ತು ಪೋಕ್ಸೊ ಕಾಯ್ದೆಯ ಸೆಕ್ಷನ್ 4ರಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಉತ್ತರ ಕನ್ನಡ ಜಿಲ್ಲೆಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 2022ರ ನವೆಂಬರ್ 24ರಂದು ಆರೋಪಿ ಅನ್ಸಾರಿ ಖಾಸಿಂ ಜಿಂಗರು ಅನ್ನು ಅಪರಾಧಿ ಎಂದು ಘೋಷಿಸಿತ್ತಲ್ಲದೆ, 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿತ್ತು. ಈ ಆದೇಶ ಪ್ರಶ್ನಿಸಿ ಆರೋಪಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದ.
Related Articles
Thank you for your comment. It is awaiting moderation.
Comments (0)