ದರ್ಶನ್ ಜಾಮೀನು ಭವಿಷ್ಯ ಬುಧವಾರ ನಿರ್ಧಾರ; ಆದೇಶ ಪ್ರಕಟಿಸಲಿರುವ ಹೈಕೋರ್ಟ್
- by Jagan Ramesh
- October 29, 2024
- 58 Views
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಅವರು ಬೆನ್ನುಹುರಿ ಸಮಸ್ಯೆಯ ಶಸ್ತ್ರಚಿಕಿತ್ಸೆಗಾಗಿ ವೈದ್ಯಕೀಯ ಜಾಮೀನು ಕೋರಿರುವ ಮಧ್ಯಂತರ ಅರ್ಜಿಗೆ ಸಂಬಂಧಿಸಿದ ಆದೇಶವನ್ನು ಹೈಕೋರ್ಟ್ ಬುಧವಾರಕ್ಕೆ (ಅಕ್ಟೋಬರ್ 30) ಕಾಯ್ದಿರಿಸಿದೆ.
ಪ್ರಕರಣದಲ್ಲಿ ಜಾಮೀನು ಕೋರಿ ಎರಡನೇ ಆರೋಪಿ ದರ್ಶನ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ವೈದ್ಯಕೀಯ ಕಾರಣಕ್ಕಾಗಿ ಜಾಮೀನು ನೀಡಬೇಕು ಎಂದು ಕೋರಿ ಸಲ್ಲಿಸಿರುವ ಮಧ್ಯಂತರ ಅರ್ಜಿಗೆ ಸಂಬಂಧಿಸಿದಂತೆ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಬುಧವಾರ ಆದೇಶ ಪ್ರಕಟಿಸುವುದಾಗಿ ತಿಳಿಸಿತು.
ಶಸ್ತ್ರಚಿಕಿತ್ಸೆಗೆ ಒಳಗಾಗದಿದ್ದರೆ ಗಂಭೀರ ಆರೋಗ್ಯ ಸಮಸ್ಯೆ?:
ವಿಚಾರಣೆ ವೇಳೆ ದರ್ಶನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ. ನಾಗೇಶ್, ಅರ್ಜಿದಾರರು ಕಳೆದ ಎರಡು ವರ್ಷಗಳಿಂದ ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈಗ ಅದು ಉಲ್ಬಣಗೊಂಡಿದ್ದು, ಶಸ್ತ್ರಚಿಕಿತ್ಸೆ ಅಗತ್ಯವಿದೆ. ಇಲ್ಲವಾದರೆ, ಅವರಿಗೆ ಮೂತ್ರಪಿಂಡದ ಸಮಸ್ಯೆ ಉಂಟಾಗಬಹುದು. ದೀರ್ಘವಾಧಿಯಲ್ಲಿ ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾಗಲಿದ್ದಾರೆ ಎಂದು ಬಳ್ಳಾರಿಯ ಸರ್ಕಾರಿ ಆಸ್ಪತ್ರೆಯ ನರರೋಗ ತಜ್ಞರಾದ ವಿಶ್ವನಾಥ್ ಅವರು ವರದಿ ನೀಡಿದ್ದಾರೆ. ಆದ್ದರಿಂದ, ವೈದ್ಯಕೀಯ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು.
ದರ್ಶನ್ ಈಗಾಗಲೇ ಎರಡು ಬಾರಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ತಮ್ಮದೇ ಖರ್ಚಿನಲ್ಲಿ ಈಗಲೂ ಅಲ್ಲಿಯೇ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಸುಪ್ರೀಂಕೋರ್ಟ್ ಹಾಗೂ ಕರ್ನಾಟಕ ಹೈಕೋರ್ಟ್ ಸಾಕಷ್ಟು ಪ್ರಕರಣಗಳಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಮೈಸೂರಿನಲ್ಲಿ ಚಿಕಿತ್ಸೆ ಪಡೆಯುವುದರಿಂದ ಪ್ರಾಸಿಕ್ಯೂಷನ್ ಸಾಕ್ಷಿಗೂ ಯಾವುದೇ ಸಮಸ್ಯೆಯಾಗುವುದಿಲ್ಲ. ನ್ಯಾಯಾಲಯ ಯಾವುದೇ ಷರತ್ತು ವಿಧಿಸಿ, ಮೂರು ತಿಂಗಳು ಮಧ್ಯಂತರ ಜಾಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.
ಪ್ರಾಸಿಕ್ಯೂಷನ್ ಆಕ್ಷೇಪ:
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಪಿ. ಪ್ರಸನ್ನಕುಮಾರ್, ನ್ಯಾಯಾಲಯವೇ ತಜ್ಞ ವೈದ್ಯರನ್ನೊಳಗೊಂಡ ವೈದ್ಯಕೀಯ ಮಂಡಳಿ ರಚಿಸಿ, ಅವರು ನೀಡುವ ವರದಿ ಆಧರಿಸಿ ದರ್ಶನ್‌ಗೆ ವೈದ್ಯಕೀಯ ಜಾಮೀನು ಮಂಜೂರು ಮಾಡಬೇಕು. ಸುಪ್ರೀಂಕೋರ್ಟ್ ಸಹ ಹಲವು ಪ್ರಕರಣಗಳಲ್ಲಿ ವೈದ್ಯಕೀಯ ಮಂಡಳಿಯ ಶಿಫಾರಸ್ಸು ಆಧರಿಸಿ, ವೈದ್ಯಕೀಯ ಜಾಮೀನು ಮಂಜೂರು ಮಾಡಿದೆ. ದರ್ಶನ್ ಬೆಂಗಳೂರಿಗೆ ಬಂದು ಇಲ್ಲಿ ವೈದ್ಯಕೀಯ ಮಂಡಳಿಯ ತಜ್ಞರ ತಪಾಸಣೆಗೆ ಒಳಗಾಗಲಿ. ವೈದ್ಯರು ಏನೆಲ್ಲ ಚಿಕಿತ್ಸೆ, ಎಷ್ಟು ದಿನ ಚಿಕಿತ್ಸೆ ಅಗತ್ಯವಿದೆ ಎಂದು ವರದಿ ನೀಡಲಿ. ಇದನ್ನು ಆಧರಿಸಿ ನ್ಯಾಯಾಲಯ ಜಾಮೀನಿನ ಬಗ್ಗೆ ನಿರ್ಧರಿಸಬೇಕು ಎಂದು ಪ್ರತಿಪಾದಿಸಿದರು.
ಇದನ್ನೊಪ್ಪದ ಸಿ.ವಿ. ನಾಗೇಶ್, ಬಳ್ಳಾರಿಯ ಸರ್ಕಾರಿ ಆಸ್ಪತ್ರೆಯ ನರರೋಗ ತಜ್ಞರು ವರದಿ ನೀಡಿದ್ದಾರೆ. ಇದಕ್ಕೆ ಪ್ರಾಸಿಕ್ಯೂಷನ್ ಆಕ್ಷೇಪ ವ್ಯಕ್ತಪಡಿಸುತ್ತಿದೆಯೇ? ಇದಕ್ಕೆ ಏಕೆ ಆಕ್ಷೇಪ ವ್ಯಕ್ತಪಡಿಸಲಾಗುತ್ತಿದೆ ಎಂಬುದನ್ನು ಹೇಳಬೇಕು ಎಂದು ಆಗ್ರಹಿಸಿದರು.
ವಿಚಾರಣೆಯ ಒಂದು ಹಂತದಲ್ಲಿ ನ್ಯಾಯಾಲಯ, ಸಂವಿಧಾನದ ಪರಿಚ್ಛೇದ 21ರ ಅಡಿಯಲ್ಲಿ ಆರೋಗ್ಯ ಹಕ್ಕು ಸೇರ್ಪಡೆಯಾಗಿದೆ” ಎಂದು ಪ್ರಾಸಿಕ್ಯೂಷನ್ ಕುರಿತು ಹೇಳಿತಲ್ಲದೆ, ವೈದ್ಯಕೀಯ ಮಂಡಳಿಯ ತಪಾಸಣೆಗೆ ಏಕೆ ಒಳಗಾಗಬಾರದು ಎಂದು ದರ್ಶನ್ ಪರ ವಕೀಲರನ್ನು ಪ್ರಶ್ನಿಸಿತು.
ಅದಕ್ಕೆ ಪ್ರತಿಕ್ರಿಯಿಸಿದ ಸಿ.ವಿ. ನಾಗೇಶ್, ಸರ್ಕಾರಿ ಆಸ್ಪತ್ರೆಯ ನರರೋಗ ತಜ್ಞರು ದರ್ಶನ್ ಬೆನ್ನು ಹುರಿ ಸಮಸ್ಯೆಗೆ ಸಾಂಪ್ರದಾಯಿಕ ವಿಧಾನದ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ಹೇಳಿದ್ದಾರೆ. ಸಾಂಪ್ರದಾಯಿಕ ಚಿಕಿತ್ಸೆ ಪಡೆದರೆ ನೋವು ಕೊಂಚ ಕಡಿಮೆಯಾಗಬಹುದೇ ಹೊರತು ಸಂಪೂರ್ಣ ಗುಣವಾಗುವುದಿಲ್ಲ. ಆದ್ದರಿಂದ, ಶಸ್ತ್ರಚಿಕಿತ್ಸೆ ಅಗತ್ಯವಿದೆ. ಅಷ್ಟಕ್ಕೂ ಎಷ್ಟು ದಿನ, ಯಾವೆಲ್ಲ ಚಿಕಿತ್ಸೆ ಬೇಕು ಎಂಬ ಬಗ್ಗೆ ಮೈಸೂರಿನ ಖಾಸಗಿ ಆಸ್ಪತ್ರೆ ವೈದ್ಯರೇ ವರದಿ ನೀಡಬಹುದು ಎಂದರು.
Related Articles
Thank you for your comment. It is awaiting moderation.
Comments (0)