ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಪ್ರಶ್ನಿಸಿದ ಪಿಐಎಲ್; ಮಧ್ಯಂತರ ತಡೆಯಾಜ್ಞೆ ಕುರಿತು ಮಂಗಳವಾರ ವಿಚಾರಣೆ

ಬೆಂಗಳೂರು: ರಾಜ್ಯದಲ್ಲಿ ಸೋಮವಾರದಿಂದ (ಸೆಪ್ಟೆಂಬರ್ 22) ಆರಂಭವಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಸಮೀಕ್ಷೆಗೆ ತಡೆ ನೀಡುವಂತೆ ಕೋರಲಾಗಿರುವ ಮಧ್ಯಂತರ ಮನವಿಯ ಕುರಿತು ಮಂಗಳವಾರ ವಿಚಾರಣೆ ನಡೆಸುವುದಾಗಿ ಹೈಕೋರ್ಟ್ ತಿಳಿಸಿದೆ.

ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಸಮೀಕ್ಷೆ ನಡೆಸಲು 2025ರ ಆಗಸ್ಟ್‌ 13ರಂದು ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ರಘುನಾಥ್‌, ಅಖಿಲ ಭಾರತ ವೀರಶೈವ ಮಹಾಸಭೆಯ ಬಿ.ಆರ್. ಉದಯಶಂಕರ್‌ ಸೇರಿ 9 ಮಂದಿ ಹಾಗೂ ಹಿರಿಯ ವಕೀಲ ಕೆ.ಎನ್‌. ಸುಬ್ಬಾರೆಡ್ಡಿ ಸೇರಿ ನಾಲ್ವರು ಸಲ್ಲಿಸಿರುವ ಮೂರು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ ಜೋಶಿ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿದಾರರ ಪರ ಹಿರಿಯ ವಕೀಲರಾದ ಪ್ರಭುಲಿಂಗ ಕೆ.ನಾವದಗಿ, ಅಶೋಕ ಹಾರನಹಳ್ಳಿ, ಜಯಕುಮಾರ್ ಎಸ್‌. ಪಾಟೀಲ್, ವಿವೇಕ್ ರೆಡ್ಡಿ, ಎಸ್‌. ಶ್ರೀರಂಗ ಹಾಗೂ ಎಸ್‌.ಎಂ. ಚಂದ್ರಶೇಖರ್ ಅವರ ವಾದ ಆಲಿಸಿದ ನ್ಯಾಯಪೀಠ, ಮಧ್ಯಂತರ ತಡೆಗೆ ಸಂಬಂಧಿಸಿದಂತೆ ವಾದ ಆಲಿಸಲು ಅರ್ಜಿಗಳ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು.

ಅರ್ಜಿದಾರರ ವಾದವೇನು?
ಅಖಿಲ ಭಾರತ ವೀರಶೈವ ಮಹಾಸಭಾ ಸದಸ್ಯರ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ, ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದವರನ್ನು ಪತ್ತೆ ಮಾಡಲು ಸರ್ಕಾರ ಜಾತಿ ಸಮೀಕ್ಷೆ ಮಾಡಲು ಮುಂದಾಗಿದೆ. ಆದರೆ, ಇದು ಸಂವಿಧಾನದ ಪರಿಚ್ಛೇದ 342 (ಎ)ಗೆ ವಿರುದ್ಧವಾಗಿದೆ. ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು 2023ರಲ್ಲಿ ಸರ್ಕಾರದ ಮುಂದೆ ಇಡಲಾಗಿತ್ತು. ಈ ಸಂಬಂಧ ಯಾವುದೇ ನಿರ್ಧಾರ ಕೈಗೊಳ್ಳದೇ ಮತ್ತೆ ಸಮೀಕ್ಷೆ ನಡೆಸಲಾಗುತ್ತಿದೆ. ಜಿಯೋ ಟ್ಯಾಗ್‌ ಮಾಡಿ, ಆಧಾರ್‌ ಕಾರ್ಡ್‌ ಲಿಂಕ್ ಮಾಡುವ ಮೂಲಕ ದತ್ತಾಂಶ ಸಂಗ್ರಹಿಸಲಾಗುತ್ತಿದೆ. ಇದು ಆಧಾರ್‌ ಕಾಯ್ದೆಗೆ ವಿರುದ್ಧವಾಗಿದೆ. ಈ ಸಮೀಕ್ಷೆಯು ಒಟ್ಟಾರೆ ಜಾತಿ ಕೇಂದ್ರಿತವಾಗಿದೆ ಎಂದು ಆಕ್ಷೇಪಿಸಿದರು.

ಹಿರಿಯ ವಕೀಲ ಜಯಕುಮಾರ್‌ ಪಾಟೀಲ್‌ ವಾದ ಮಂಡಿಸಿ, ಸಮೀಕ್ಷೆಯ ಆಧಾರದಲ್ಲಿ ಜಾತಿಯ ಪಟ್ಟಿ ಮಾಡುತ್ತಿರುವುದು ಗಣತಿಯಲ್ಲದೆ ಬೇರೇನೂ ಅಲ್ಲ. ಜನಸಂಖ್ಯೆ ಮತ್ತು ಮಾನದಂಡಗಳನ್ನು ಸರ್ಕಾರ ಪಟ್ಟಿ ಮಾಡುತ್ತಿದೆ. ಇದು ಪ್ರದೇಶಕ್ಕೆ ಸೀಮಿತವಾಗಿಲ್ಲ. ಬದಲಿಗೆ ಇಡೀ ರಾಜ್ಯದ ಜನತೆಯನ್ನು ಒಳಗೊಳ್ಳುತ್ತಿದೆ. ಇದಕ್ಕೆ ಯಾವುದೇ ಕಾನೂನಿನ ಮಾನ್ಯತೆ ಇಲ್ಲ. ಕೇಂದ್ರ ಸರ್ಕಾರ ಮಾತ್ರ ಗಣತಿ ನಡೆಸಬಹುದು ಎಂದರು.

ರಾಜ್ಯ ಒಕ್ಕಲಿಗರ ಸಂಘದ ಪರ ಹಾಜರಿದ್ದ ಹಿರಿಯ ವಕೀಲ ಅಶೋಕ್‌ ಹಾರನಹಳ್ಳಿ ಅವರು, ಯಾವುದೇ ಅಧ್ಯಯನ ಆಧರಿಸಿ ಜಾತಿ ಸಮೀಕ್ಷೆ ಮಾಡಲಾಗುತ್ತಿಲ್ಲ. ರಾಜ್ಯ ಸರ್ಕಾರಕ್ಕೆ ನಿರ್ದಿಷ್ಟ ಜಾತಿ ಸೇರ್ಪಡೆ ಅಥವಾ ಅದನ್ನು ತೆಗೆಯುವ ಸಂಬಂಧ ಶಿಫಾರಸು ಮಾಡಲು ಮಾತ್ರ ಸಮೀಕ್ಷೆ ನಡೆಸುವ ಅಧಿಕಾರವಿದೆ. ಎಂದರು. ಮತ್ತೋರ್ವ ಹಿರಿಯ ವಕೀಲ ವಿವೇಕ್‌ ಸುಬ್ಬಾರೆಡ್ಡಿ ಅವರು, ರಾಜ್ಯ ಸರ್ಕಾರದ ಆದೇಶವು ಅಧಿಕಾರದಲ್ಲಿರುವವರ ಬಣ್ಣದ ಪ್ರಯತ್ನವಾಗಿದೆ. ಇದರ ಹಿಂದಿನ ಉದ್ದೇಶ ಜಾತಿಗಳಲ್ಲಿನ ಸಂಖ್ಯೆ ಕಂಡು ಹಿಡಿದು, ಅದನ್ನು ರಾಜಕೀಯ ದುರುದ್ದೇಶಕ್ಕೆ ಬಳಸಿಕೊಳ್ಳುವುದಾಗಿದೆ ಎಂದು ಆರೋಪಿಸಿದರು.

ಮಧ್ಯಂತರ ತಡೆಗೆ ಮನವಿ:
ಈ ಹಂತದಲ್ಲಿ ನ್ಯಾಯಪೀಠ, ಪ್ರಕರಣದಲ್ಲಿ ಅಮೈಕಸ್‌ ಕ್ಯೂರಿ ನೇಮಕ ಮಾಡಬೇಕೆ ಎಂದು ಯೋಚಿಸುತ್ತಿದ್ದೇವೆ. ಮುಂದಿನ ಹಂತದಲ್ಲಿ ನಾವು ಇದನ್ನು ಪರಿಗಣಿಸಬಹುದು ಎಂದು ಹೇಳಿತಲ್ಲದೆ, ಅರ್ಜಿದಾರರ ವಾದದ ವಿಧಾನ ತಿಳಿಸುವಂತೆಯೂ ಹಾಗೂ ಯಾರಿಗೆಲ್ಲ ಎಷ್ಟು ಸಮಯ ಬೇಕು ಎಂಬುದನ್ನು ತಿಳಿಸುವಂತೆಯೂ ಸೂಚಿಸಿತು.

ಆಗ ನಾವದಗಿ ಅವರು, ಅರ್ಜಿಗಳನ್ನು ಅಂತಿಮವಾಗಿ ವಿಚಾರಣೆ ನಡೆಸುವವರೆಗೆ ಸರ್ಕಾರದ ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿದರು. ಸಮೀಕ್ಷೆ ಪೂರ್ಣಗೊಳಿಸಲು ಕಾಲಮಿತಿ ನಿಗದಿಪಡಿಸಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಆಗ ರಾಜ್ಯ ಸರ್ಕಾರದ ಪರ ಹಾಜರಿದ್ದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ, ಅರ್ಜಿಗಳ ವಿಚಾರಣೆ ನಡೆಸಲು ನಮ್ಮ ಆಕ್ಷೇಪಣೆ ಇಲ್ಲ. ಆದರೆ, ತಡೆ ನೀಡುವುದಕ್ಕೆ ಆಕ್ಷೇಪಣೆ ಇದೆ. ಈ ಹಿಂದೆ ಸಮೀಕ್ಷೆ ಪ್ರಶ್ನಿಸಿದ್ದ ಅರ್ಜಿಗಳಲ್ಲಿಯೂ ನ್ಯಾಯಾಲಯ ತಡೆ ನೀಡಿರಲಿಲ್ಲ ಎಂದರು.

ಆಗ ನ್ಯಾಯಪೀಠ, ಇಂದು ಅಥವಾ ನಾಳೆ ಅರ್ಜಿ ವಿಚಾರಣೆ ನಡೆಸಲಾಗದು. ದಸರಾ ರಜೆಯ ಬಳಿಕ ಅರ್ಜಿಗಳ ವಿಚಾರಣೆ ನಡೆಸಲಾಗುವುದು. ಆದ್ದರಿಂದ, ಅಕ್ಟೋಬರ್‌ನಲ್ಲಿ ಅರ್ಜಿ ನಡೆಸುವವರೆಗೆ ಸಮೀಕ್ಷೆಯನ್ನು ನೀವು ಮುಂದೂಡಬೇಕು ಎಂದು ಮೌಖಿಕವಾಗಿ ಹೇಳಿತು.

ಗಣತಿಯಲ್ಲ, ಸಮೀಕ್ಷೆ:
ವಾದ ಮುಂದುವರಿಸಿದ ಸಿಂಘ್ವಿ, ಸಮೀಕ್ಷೆಗೆ 420 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಸರ್ಕಾರ ಕಳೆದ ಆಯವ್ಯಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುವುದಕ್ಕೆ ಹಣ ಮೀಸಲಿರಿಸಿತ್ತು. ದಸರಾ ರಜೆಯ ಇರುವ ಹಿನ್ನೆಲೆಯಲ್ಲಿ ಸಮೀಕ್ಷೆ ನಡೆಸುವುದಕ್ಕೆ ಆಶಾ ಕಾರ್ಯಕರ್ತರು,‌ ಶಿಕ್ಷಕರು ಸೇರಿ ಸಾವಿರಾರು ಜನರನ್ನು ನಿಯೋಜಿಸಲಾಗಿದೆ. ಸಮೀಕ್ಷೆ ಸಂಬಂಧ ಆಗಸ್ಟ್ ತಿಂಗಳಲ್ಲೇ ಸರ್ಕಾರ ಅಧಿಸೂಚನೆ ಹೊರಡಿಸಿದ್ದರೂ, ಕೊನೇ ಘಳಿಗೆಯಲ್ಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಸಮೀಕ್ಷೆಯು ಕೇಂದ್ರ ಸರ್ಕಾರದ ಕೆಲಸ ಎಂಬುದು ಅರ್ಜಿದಾರರ ವಾದವಾಗಿದೆ. ಸಮೀಕ್ಷೆ ನಡೆಸಲಾಗುತ್ತಿದೆಯೇ ವಿನಾ ಗಣತಿಯಲ್ಲ. ದತ್ತಾಂಶ ಸಂಗ್ರಹಿಸಲು ರಾಜ್ಯ ಸರ್ಕಾರಕ್ಕೆ ವ್ಯಾಪ್ತಿ ಇದೆ ಎಂದು ಇಂದಿರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ತೀರ್ಪು ನೀಡಿದೆ. ಅರ್ಜಿಯ ಅಂತಿಮ ತೀರ್ಪಿಗೆ ಒಳಪಟ್ಟು ಸಮೀಕ್ಷೆಗೆ ಅವಕಾಶ ಮಾಡಿಕೊಡಬೇಕು. ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿಲು ಸಮೀಕ್ಷೆ ಮುಖ್ಯವಾಗಿದ್ದು, ಸಮೀಕ್ಷೆ ತಡೆಯುವುದೇಕೆ ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ. ಅರವಿಂದ್‌ ಕಾಮತ್‌ ಅವರು, ರಾಜ್ಯ ಸರ್ಕಾರ ಈಗ ಮಾಡುತ್ತಿರುವುದನ್ನು ಸಮೀಕ್ಷೆ ಎನ್ನಲಾಗುತ್ತಿದೆ. ಇದು ಗಣತಿಯಾಗಿದ್ದು, ಇದನ್ನು ರಾಜ್ಯ ಸರ್ಕಾರ ಮಾಡಲಾಗದು ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ, ಸಮೀಕ್ಷೆಗೆ ತಡೆ ನೀಡುವಂತೆ ಕೋರಲಾಗಿರುವ ಮಧ್ಯಂತರ ಮನವಿಯ ಕುರಿತು ಮಂಗಳವಾರ ವಿಚಾರಣೆ ನಡೆಸುವುದಾಗಿ ತಿಳಿಸಿ, ಅರ್ಜಿ ವಿಚಾರಣೆ ಮುಂದೂಡಿತು.

Related Articles

Comments (0)

Leave a Comment