ಭೂ ಒತ್ತುವರಿ ಆರೋಪ; ಸಚಿವ ಚಲುವರಾಯಸ್ವಾಮಿ ವಿರುದ್ಧದ ಪ್ರಕರಣಕ್ಕೆ ಮಧ್ಯಂತರ ತಡೆ

ಬೆಂಗಳೂರು: ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ವಿರುದ್ದದ ಭೂಕಬಳಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣಾ ಪ್ರಕ್ರಿಯೆಗೆ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಜಾರಿಗೊಳಿಸಿದ್ದ ಸಮನ್ಸ್‌ ಹಾಗೂ ಪ್ರಕರಣ ರದ್ದು ಕೋರಿ ಸಚಿವ ಚಲುವರಾಯಸ್ವಾಮಿ ಸಲ್ಲಿಸಿದ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಹಾಗೂ ನ್ಯಾಯಮೂರ್ತಿ ಸಿ.ಎಂ.ಜೋಶಿ ಅವರಿದ್ದ ವಿಭಾಗೀಯ‌ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿತು.

ಅರ್ಜಿ ಕುರಿತು ವಾದ ಆಲಿಸಿದ ನ್ಯಾಯಾಲಯ, 2024ರ ಮಾರ್ಚ್ 28ರಂದು ಭೂ ಕಬಳಿಕೆ ನಿಷೇಧ ವಿಶೇಷ ಕೋರ್ಟ್ ಹೊರಡಿಸಿದ್ದ ಸಮನ್ಸ್‌ ಹಾಗೂ ಪ್ರಕರಣದ ಮುಂದಿನ ವಿಚಾರಣಾ ಪ್ರಕ್ರಿಯೆಗಳಿಗೆ ತಡೆ ನೀಡಿ ವಿಚಾರಣೆಯನ್ನು 2025ರ ಜನವರಿಗೆ ಮುಂದೂಡಿತು.

ಅರ್ಜಿದಾರರ ವಾದವೇನು?
ಚಲುವರಾಯಸ್ವಾಮಿ ಪರ ವಾದ ಮಂಡಿಸಿದ ವಕೀಲ ಸಿದ್ದಾರ್ಥ್‌ ಮುಚ್ಚಂಡಿ, ವಿವದಿತ ಭೂಮಿ 1923ರಿಂದಲೂ ಅಸ್ವಿತ್ವದಲ್ಲಿದ್ದು, ಅದನ್ನು ಮೂಲ ಮಾಲೀಕರು ದೇವಾಲಯಕ್ಕೆ ಗಿಫ್ಟ್‌ ಡೀಡ್‌ ಮಾಡಿದ್ದರು. ಆನಂತರ, ಆ ಜಮೀನನ್ನು ಸರ್ಕಾರ 1982ರಲ್ಲಿ ತಿಮ್ಮರಾಯಪ್ಪ ಅವರಿಗೆ ಮಂಜೂರು ಮಾಡಿದೆ. ಅವರ ಕಡೆಯಿಂದ ಅರ್ಜಿದಾರರು ಖರೀದಿ ಮಾಡಿದ್ದಾರೆ. ಆದ್ದರಿಂದ, ಇದರಲ್ಲಿ ಒತ್ತುವರಿ ಪ್ರಶ್ನೆಯೇ ಬರುವುದಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಕಳೆದ ನೂರು ವರ್ಷಗಳ ದಾಖಲೆಗಳಲ್ಲಿ ಎಲ್ಲಿಯೂ ಸಹ ಆ ಭೂಮಿ ಕರಾಬು ಅಥವಾ ಕೆರೆ ಪ್ರದೇಶ ಎಂದು ಉಲ್ಲೇಖವಾಗಿಲ್ಲ. ಇದೀಗ ಏಕಾಏಕಿ ಸರ್ವೇ ಮಾಡಿ ಅದು ಕೆರೆ ಜಾಗ ಎಂದು ಹೇಳಲಾಗುತ್ತಿದೆ. ಆದರೆ ಅದಕ್ಕೆ ಯಾವುದೇ ದಾಖಲೆಗಳಿಲ್ಲ. ಜತೆಗೆ, ಮಂಜೂರಾದ ಭೂಮಿಯನ್ನು ಸರ್ಕಾರ ರದ್ದುಗೊಳಿಸಿಲ್ಲ, ಮಂಜೂರಾತಿ ಹಾಗೆಯೇ ಇದೆ. ಈ ಪ್ರಕರಣದಲ್ಲಿ ‘ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ’ ಅನ್ವಯಿಸಿರುವುದೇ ಕಾನೂನು ಬಾಹಿರ ಕ್ರಮವಾಗಿದೆ. ಆದ್ದರಿಂದ, ವಿಚಾರಣೆ ಮತ್ತು ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಜಾರಿಗೊಳಿಸಿದ್ದ ಸಮನ್ಸ್‌ ರದ್ದುಗೊಳಿಸಬೇಕು ಎಂದು ಕೋರಿದರು.

ಪ್ರಕರಣವೇನು?
1923ರಲ್ಲಿ ದಾಸನಪುರ ಹೋಬಳಿಯ ಮಾಕಳಿ ಗ್ರಾಮದ ಸರ್ವೇ ನಂಬರ್‌ 13ರಲ್ಲಿದ್ದ 3 ಎಕರೆ 13 ಗುಂಟೆ ಭೂಮಿಯನ್ನು ಮೂಲ ಮಾಲೀಕರಾದ ಗೌಡಯ್ಯ ಆಂಜನೇಯ ದೇವಾಲಯಕ್ಕೆ ಕೊಡುಗಡೆಯಾಗಿ ಕೊಟ್ಟಿದ್ದರು. 1982ರಲ್ಲಿ ದೇವಾಲಯದ ಹೆಸರಿನಲ್ಲಿ ಆ ಜಾಗ ನೋಂದಣಿ ಮಾಡಿಕೊಡುವಂತೆ ಭೂ ನ್ಯಾಯಮಂಡಳಿ ಆದೇಶ ನೀಡಿತ್ತು. ನಂತರ 2023ರ ಸೆ.23ರಂದು ಕರ್ನಾಟಕ ಭೂ ಕಬಳಿಕೆ ವಿಶೇಷ ನ್ಯಾಯಾಲಯ ಸ್ವಯಂಪ್ರೇರಿತವಾಗಿ ಈ ಬಗ್ಗೆ ದೂರು ದಾಖಲಿಸಿಕೊಂಡು ಪರಿಶೀಲಿಸಿ ವರದಿ ನೀಡುವಂತೆ ತಹಸೀಲ್ದಾರ್‌ಗೆ ನಿರ್ದೇಶನ ನೀಡಿತ್ತು. ಆನಂತರ, ಸರ್ವೇ ನಡೆಸಿ ಸುಮಾರು 9 ಗುಂಟೆ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ವರದಿ ಸಲ್ಲಿಸಲಾಗಿತ್ತು. ಅದನ್ನು ಆಧರಿಸಿ ವಿಶೇಷ ನ್ಯಾಯಾಲಯ ಅರ್ಜಿದಾರರಿಗೆ ಸಮನ್ಸ್‌ ಜಾರಿಗೊಳಿಸಿತ್ತು.

Related Articles

Comments (0)

Leave a Comment