ಕಟ್ಟಡ ನಿರ್ಮಾಣ ಅನುಮತಿಗೆ ₹ 2 ಲಕ್ಷ ಲಂಚ ಪಡೆದ ಆರೋಪ; ಮಾಜಿ ಕಾರ್ಪೊರೇಟರ್ ಗೋವಿಂದರಾಜು ಶಿಕ್ಷೆ ರದ್ದು
- by Jagan Ramesh
- July 15, 2025
- 25 Views

ಬೆಂಗಳೂರು: ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲು 2 ಲಕ್ಷ ರೂ. ಲಂಚ ಪಡೆದ ಆರೋಪದಲ್ಲಿ ಗಣೇಶ ಮಂದಿರ ವಾರ್ಡ್‌ನ ಪಾಲಿಕೆ ಸದಸ್ಯರಾಗಿದ್ದ ಎಲ್. ಗೋವಿಂದರಾಜು ಅವರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ವಿಧಿಸಿದ್ದ 4 ವರ್ಷ ಶಿಕ್ಷೆಯನ್ನು ಹೈಕೋರ್ಟ್ ರದ್ದುಪಡಿಸಿದೆ.
ಲೋಕಾಯುಕ್ತ ನ್ಯಾಯಾಲಯ ವಿಧಿಸಿದ್ದ ಶಿಕ್ಷೆ ರದ್ದು ಕೋರಿ ಗೋವಿಂದರಾಜು ಸಲ್ಲಿಸಿದ್ದ ಮೇಲ್ಮನವಿ ಹಾಗೂ ಶಿಕ್ಷೆಯ ಪ್ರಮಾಣ ಹೆಚ್ಚಳಕ್ಕೆ ಕೋರಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಮೇಲ್ಮನವಿಗಳನ್ನು ಒಟ್ಟಾಗಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ. ಉಮಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಪ್ರಕರಣದ ತನಿಖಾ ಪ್ರಕ್ರಿಯೆಯಲ್ಲಿ ದೋಷಗಳಿದ್ದು, ಆರೋಪಿ ವಿರುದ್ಧದ ಆರೋಪ ಸಾಬೀತಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸುವಲ್ಲಿ ಲೋಕಾಯುಕ್ತ ಪೊಲೀಸರು ವಿಫಲರಾಗಿದ್ದಾರೆ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.
ಹೈಕೋರ್ಟ್ ಆದೇಶದಲ್ಲೇನಿದೆ?
ಘಟನೆ ಸಂಬಂಧ ಪಂಚನಾಮೆಯನ್ನು ಬೆಳಗ್ಗೆ 10.30ಕ್ಕೆ ಮಾಡಿರುವುದಾಗಿ ಹೇಳಲಾಗಿದೆ. ಆದರೆ, ದೂರುದಾರರಿಂದ ಸ್ವೀಕರಿಸಿದ್ದ 2 ಲಕ್ಷ ರೂ. ಗಳ ಪ್ಯಾಕೆಟ್‌ನಲ್ಲಿದ್ದ ಕರೆನ್ಸಿ ನೋಟುಗಳ ಸರಣಿ ಸಂಖ್ಯೆಗಳನ್ನು ತನಿಖಾಧಿಕಾರಿಗಳು ಗುರುತಿಸಿಲ್ಲ. ಹಣ ವಶಕ್ಕೆ ಪಡೆದ ಬಳಿಕ ಲೋಕಾಯುಕ್ತ ಕಚೇರಿಯಲ್ಲಿ ಮಧ್ಯಾಹ್ನಾ 12.45ರಿಂದ 1 ಗಂಟೆ ಸಂದರ್ಭದಲ್ಲಿ ಮಹಜರ್ ಬರೆಯಲು ಪಾರಂಭಿಸಲಾಗಿದೆ ಎಂಬ ಅಂಶ ಗೊತ್ತಾಗಲಿದ್ದು, ಲೊಕಾಯುಕ್ತ ಪೊಲೀಸರ ತನಿಖಾ ಪ್ರಕ್ರಿಯೆ ಅತ್ಯಂತ ದೋಷಪೂರಿತವಾಗಿದ್ದು, ಪರಿಗಣಿಸಲು ಸಾಧ್ಯವಾಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಆರೋಪಿ ವಿರುದ್ಧ ಆತನ ಮನೆಯಲ್ಲಿ ಬಲೆ ಬೀಸಿದ್ದ ಲೋಕಾಯುಕ್ತ ಪೊಲೀಸರು, ಮನೆಗೆ ಹಲವಾರು ಮಂದಿ ಭೇಟಿ ನೀಡುತ್ತಿದ್ದರಿಂದ ಸ್ಥಳದಲ್ಲಿ ವಿಚಾರಣೆ ಮುಂದುವರಿಸಲು ಸಾಧ್ಯವಾಗಿರಲಿಲ್ಲ ಎಂದು ತಿಳಿಸಿದ್ದಾರೆ. ಆದರೆ, ಬಲೆ ಬೀಸಿದ್ದ ಮನೆ ಸಾರ್ವಜನಿಕ ಸ್ಥಳವಾಗಿರಲಿಲ್ಲ, ಬದಲಿಗೆ ಆರೋಪಿಯ ಮನೆಯಾಗಿದೆ. ಆದ್ದರಿಂದ, ಲೋಕಾಯುಕ್ತ ಪರ ವಕೀಲರ ಈ ವಾದ ಒಪ್ಪಲಾಗುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಅಷ್ಟಾಗಿಯೂ, ಗೋವಿಂದರಾಜು ಅವರಿಗೆ ಶಿಕ್ಷೆ ವಿಧಿಸಿರುವ ವಿಚಾರಣಾ ನ್ಯಾಯಾಲಯ, ಈ ಎಲ್ಲ ಅಸ್ಪಷ್ಟ ಸಂಗತಿಗಳ ಕುರಿತಂತೆ ಯಾವುದೇ ವಿವರಣೆ ನೀಡಿಲ್ಲ. ಆದರೂ, ಆರೋಪಿಯನ್ನು ದೋಷಿ ಎಂದು ಘೋಷಿಸುವುದಕ್ಕೆ ಮುಂದಾಗಿದ್ದು, ಅದಕ್ಕೆ ಯಾವುದೇ ಸೂಕ್ತ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ. ಆದ್ದರಿಂದ, ಆರೋಪಿ ಸಲ್ಲಿಸಿರುವ ಮೇಲ್ಮನವಿ ಪುರಸ್ಕರಿಸುತ್ತಿದ್ದು, ಶಿಕ್ಷೆ ರದ್ದುಪಡಿಸಲಾಗುತ್ತಿದೆ ಎಂದು ನ್ಯಾಯಾಲಯ ಆದೇಶದಲ್ಲಿ ವಿವರಿಸಿದೆ.
ಲೋಕಾಯುಕ್ತ ಪೊಲೀಸರ ಮೇಲ್ಮನವಿ ವಜಾ:
ಶಿಕ್ಷೆ ಪ್ರಮಾಣ ಹೆಚ್ಚಳಕ್ಕೆ ಕೋರಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ನ್ಯಾಯಪೀಠ, ಆರೋಪಿಯ ವಿರುದ್ಧದ ಅಪರಾಧವನ್ನು ಸಂಶಯಾತೀತವಾಗಿ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ (ಲೋಕಾಯುಕ್ತ ಪೊಲೀಸರು) ಯಶಸ್ವಿಯಾಗಿಲ್ಲ. ಹೀಗಾಗಿರುವಾಗ, ಆರೋಪಿ ಪ್ರಕರಣದಿಂದ ಖುಲಾಸೆಗೆ ಅರ್ಹವಾಗಿದ್ದು, ಶಿಕ್ಷೆ ಹೆಚ್ಚಳ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದೆ.
ಪ್ರಕರಣವೇನು?
ದೂರುದಾರ ಉದಯ್ ಕುಮಾರ್ ಕತ್ರಿಗುಪ್ಪೆಯಲ್ಲಿ ಬಹುಮಹಡಿ ಕಟ್ಟಡ ನಿರ್ಮಿಸುತ್ತಿದ್ದರು. ಗೋವಿಂದರಾಜು ಸದಸ್ಯರಾದ ಬಳಿಕ ಕಟ್ಟಡದ ನಕ್ಷೆ ಮತ್ತು ಬೈಲಾ ಉಲ್ಲಂಘಿಸಲಾಗಿದೆ ಎಂದು ಹೇಳಿ ನಿರ್ಮಾಣ ಸ್ಥಗಿತಕ್ಕೆ ಆದೇಶಿಸಲಾಗಿತ್ತು. ಕಾಮಗಾರಿ ಮುಂದುವರಿಯಬೇಕಾದರೆ ಲಂಚ ನೀಡಬೇಕು ಎಂದು ಅವರ ಆಪ್ತರಿಂದ ಬೇಡಿಕೆ ಇಟ್ಟಿದ್ದರು. ಗೋವಿಂದರಾಜು ಅವರಿಗೆ 2 ಲಕ್ಷ ರೂ. ನೀಡಲು ಮುಂದಾಗಿದ್ದ ದೂರುದಾರರು ಈ ಸಂಬಂಧ ಲೋಕಾಯುಕ್ತರಿಗೆ ದೂರು ನೀಡಿದ್ದರು.
ದೂರು ಆಧರಿಸಿ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು ಆರೋಪಿಯನ್ನು ಬಂಧಿಸಿ, ಹಣ ವಶಕ್ಕೆ ಪಡೆದಿದ್ದರು. ಪ್ರಕರಣ ಸಂಬಂಧ ತನಿಖೆ ನಡೆಸಿ, ಬಳಿಕ ಆರೋಪಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಲೋಕಾಯುಕ್ತ ವಿಶೇಷ ನ್ಯಾಯಾಲಯ ಆರೋಪಿಗೆ 4 ವರ್ಷ ಶಿಕ್ಷೆ ಹಾಗೂ 90 ಸಾವಿರ ರೂ. ದಂಡ ವಿಧಿಸಿ 2012ರ ನವೆಂಬರ್ 28ರಂದು ಆದೇಶ ಹೊರಡಿಸಿತ್ತು. ಬಳಿಕ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು.
Related Articles
Thank you for your comment. It is awaiting moderation.
Comments (0)