ಶಾಸಕ ವೀರೇಂದ್ರ ಮಧ್ಯಂತರ ಬಿಡುಗಡೆಗೆ ಪತ್ನಿ ಮನವಿ; ಮಾಹಿತಿ ಪಡೆದು ತಿಳಿಸುವಂತೆ ಇಡಿ ವಕೀಲರಿಗೆ ಹೈಕೋರ್ಟ್ ಸೂಚನೆ
- by Ramya B T
- September 24, 2025
- 66 Views

ಬೆಂಗಳೂರು: ಆನ್ಲೈನ್ ಮತ್ತು ಆಫ್‌ಲೈನ್ ಅಕ್ರಮ ಬೆಟ್ಟಿಂಗ್ ಆರೋಪ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಚಿತ್ರದುರ್ಗದ ಶಾಸಕ ಕೆ.ಸಿ.ವೀರೇಂದ್ರ ಅವರನ್ನು ದಸರಾ ಹಬ್ಬದ ಹಿನ್ನೆಲೆಯಲ್ಲಿ 2 ಅಥವಾ 3 ದಿನಗಳ ಅವಧಿಗೆ ಮಧ್ಯಂತರ ಬಿಡುಗಡೆ ಮಾಡಬೇಕೆಂಬ ವೀರೇಂದ್ರ ಅವರ ಪತ್ನಿಯ ಮನವಿ ಕುರಿತು ಸಂಬಂಧಪಟ್ಟ ತನಿಖಾಧಿಕಾರಿಗಳಿಂದ ಮಾಹಿತಿ ಪಡೆದು ತಿಳಿಸುವಂತೆ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಹೈಕೋರ್ಟ್ ಸೂಚಿಸಿದೆ.
ವೀರೇಂದ್ರ ಅವರ ಬಂಧನವನ್ನು ಕಾನೂನುಬಾಹಿರವೆಂದು ಘೋಷಿಸಿ, ತಕ್ಷಣವೇ ಬಿಡುಗಡೆಗೊಳಿಸಲು ಆದೇಶಿಸುವಂತೆ ಕೋರಿ ವೀರೇಂದ್ರ ಪತ್ನಿ ಆರ್.ಡಿ. ಚೈತ್ರಾ ಸಲ್ಲಿಸಿರುವ ರಿಟ್ ಅರ್ಜಿ ಕುರಿತು ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ದಸರಾ ಹಬ್ಬದ ಹಿನ್ನೆಲೆಯಲ್ಲಿ ವೀರೇಂದ್ರ ಅವರನ್ನು ಎರಡು ದಿನಗಳ ಅವಧಿಗೆ ಬಿಡುಗಡೆ ಮಾಡಬೇಕು ಎಂದು ಕೋರಿದರು. ಇಡಿ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್ ಅವರು, ಅರ್ಜಿದಾರರ ಪತಿಯ ಮಧ್ಯಂತರ ಬಿಡುಗಡೆ ಅಗತ್ಯವಿದ್ದಲ್ಲಿ ವಿಚಾರಣಾ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ತಿಳಿಸಿದರು.
ಆಗ ನ್ಯಾಯಪೀಠ, ಅರ್ಜಿದಾರರ ಪತಿಯನ್ನು ಮಧ್ಯಂತರ ಬಿಡುಗಡೆ ಮಾಡುವ ಸಂಬಂಧ ನಿಮ್ಮ ಅಧಿಕಾರಿಗಳಲ್ಲಿ ಮಾಹಿತಿ ಪಡೆಯಬಹುದು. ಕೇವಲ 2 ದಿನಗಳ ಅವಧಿಗೆ ಬಿಡುಗಡೆಗೆ ಕೋರುತ್ತಿದ್ದಾರೆ. ಅಗತ್ಯ ಷರತ್ತುಗಳನ್ನು ವಿಧಿಸಿ ಬಿಡುಗಡೆ ಮಾಡಬಹುದು, ಅದಾದ ಬಳಿಕ ಮತ್ತೆ ವಶಕ್ಕೆ ಪಡೆಯುವುದಕ್ಕೆ ಅವಕಾಶವಿರಲಿದೆ. ಶುಕ್ರವಾರಕ್ಕೆ (ಸೆಪ್ಟೆಂಬರ್ 26) ಅರ್ಜಿ ನಿಗದಿಪಡಿಸಲಾಗುವುದು. ನೀವು ಮಾಹಿತಿ ಪಡೆದು ತಿಳಿಸಿ ಎಂದು ಇಡಿ ಪರ ವಕೀಲರಿಗೆ ಸೂಚಿಸಿತು. ಇದಕ್ಕೆ ಎಎಸ್‌ಜಿ ಕಾಮತ್ ಅವರು ಮಾಹಿತಿ ಪಡೆದು ತಿಳಿಸುವುದಾಗಿ ಹೇಳಿದರು.
ಅಕ್ಟೋಬರ್ 8ಕ್ಕೆ ಮುಖ್ಯ ಅರ್ಜಿ ಕುರಿತ ಆದೇಶ:
ಇದಕ್ಕೂ ಮುನ್ನ ಮುಖ್ಯ ಅರ್ಜಿಯ ಸಂಬಂಧ ವಾದ ಮಂಡಿಸಿದ ಚೈತ್ರಾ ಪರ ವಕೀಲರು, ವೀರೇಂದ್ರ ಅವರನ್ನು ಯಾವುದೇ ನೋಟಿಸ್ ನೀಡದೆ, ಬಂಧನಕ್ಕೆ ಕಾರಣವನ್ನೂ ನೀಡದೆ ಬಂಧಿಸಲಾಗಿದ್ದು, ಇದು ಕಾನೂನುಬಾಹಿರ ಕ್ರಮವಾಗಿದೆ ಎಂದು ಆಕ್ಷೇಪಿಸಿದರು.
ಇಡಿ ಪರ ವಕೀಲರು, ಅರ್ಜಿದಾರರ ಪತಿ ಆನ್ಲೈನ್ ಬೆಟ್ಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಆರು ಎಫ್ಐಆರ್‌ಗಳು ದಾಖಲಾಗಿದ್ದು, ಆರೋಪ ಪಟ್ಟಿ ಸಲ್ಲಿಸಲಾಗಿದೆ. ಅರ್ಜಿದಾರರ ಪತಿ ಅಪರಾಧ ಕೃತ್ಯಗಳಿಂದ ದೊಡ್ಡ ಪ್ರಮಾಣದಲ್ಲಿ ಆದಾಯಗಳಿಸಿದ್ದಾರೆ. ಗೋವಾ ಮತ್ತು ದುಬೈನಲ್ಲಿ ಮನೆ ಮಾಡಿರುವುದು ವಿಚಾರಣೆ ವೇಳೆ ತಿಳಿದುಬಂದಿದ್ದು, ಅದಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧರಗಳಿವೆ. ಸಂಬಂಧಪಟ್ಟ ನ್ಯಾಯಾಲಯದಿಂದ ರಿಮ್ಯಾಂಡ್ ಆದೇಶವನ್ನು ಪಡೆದುಕೊಳ್ಳಲಾಗಿದ್ದು, ವೀರೇಂದ್ರ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳಿವೆ. ಕಾನೂನು ಪ್ರಕಾರವೇ ವೀರೇಂದ್ರ ಅವರನ್ನು ಬಂಧಿಸಿದಲಾಗಿದ್ದು, ಅದನ್ನು ಅಕ್ರಮ ಎನ್ನಲಾಗದು ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ವಾದ- ಪ್ರತಿವಾದ ಆಲಿಸಿದ ನ್ಯಾಯಪೀಠ, ಮುಖ್ಯ ಅರ್ಜಿಗೆ ಸಂಬಂಧಿಸಿದ ಆದೇಶವನ್ನು ಅಕ್ಟೋಬರ್ 8ರಂದು ಪ್ರಕಟಿಸುವುದಾಗಿ ತಿಳಿಸಿತು.
Related Articles
Thank you for your comment. It is awaiting moderation.
Comments (0)