ಧರ್ಮಸ್ಥಳ ಪ್ರಕರಣದ ಸುದ್ದಿ ಪ್ರಸಾರಕ್ಕೆ ನಿರ್ಬಂಧ; ಕುಡ್ಲ ರ‌್ಯಾಂಪೇಜ್ ಅರ್ಜಿ ಸಿಂಧುತ್ವದ ಆದೇಶ ಕಾಯ್ದಿರಿಸಿದ ಹೈಕೋರ್ಟ್
- by Jagan Ramesh
- July 29, 2025
- 200 Views

ಬೆಂಗಳೂರು: ಧರ್ಮಸ್ಥಳದಲ್ಲಿ ಕೊಲೆಗೈದು, ಶವಗಳನ್ನು ಹೂತಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸಹೋದರ ಹರ್ಷೇಂದ್ರ ಕುಮಾರ್ ಅವರ ವಿರುದ್ಧ ಯಾವುದೇ ಮಾನಹಾನಿ ವಿಷಯ ಪ್ರಸಾರ/ಪ್ರಕಟಿಸದಂತೆ ಮಾಧ್ಯಮಗಳನ್ನು ನಿರ್ಬಂಧಿಸಿರುವುದನ್ನು ಪ್ರಶ್ನಿಸಿ ಡಿಜಿಟಲ್ ಮಾಧ್ಯಮ ಸಂಸ್ಥೆ ಕುಡ್ಲ ರ‍್ಯಾಂಪೇಜ್ ಸಲ್ಲಿಸಿರುವ ಅರ್ಜಿಯ ಸಿಂಧುತ್ವದ (Maintainability) ಕುರಿತ ಆದೇಶವನ್ನು ಹೈಕೋರ್ಟ್ ಕಾಯ್ದಿರಿಸಿದೆ.
ವಿಚಾರಣಾ ನ್ಯಾಯಾಲಯ ಹೊರಡಿಸಿರುವ ಪ್ರತಿಬಂಧಕಾದೇಶ ಪ್ರಶ್ನಿಸಿ ದಕ್ಷಿಣ ಕನ್ನಡದ ಡಿಜಿಟಲ್ ಮಾಧ್ಯಮ ಕುಡ್ಲ ರ‍್ಯಾಂಪೇಜ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ವಾದ ಮಂಡಿಸಿದ ಹರ್ಷೇಂದ್ರ ಕುಮಾರ್ ಪರ ಹಿರಿಯ ವಕೀಲ ಉದಯ್ ಹೊಳ್ಳ, ಸಂವಿಧಾನದ ಪರಿಚ್ಛೇದ 21ರ ಇನ್ನೊಂದು ಮುಖ ಘನತೆಯ ಹಕ್ಕಾಗಿದೆ. ಸುಪ್ರೀಂಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿಯೇ ವಿಚಾರಣಾ ನ್ಯಾಯಾಲಯ ಮಾಧ್ಯಮಗಳನ್ನು ನಿರ್ಬಂಧಿಸಿ ಏಕಪಕ್ಷೀಯ ಪ್ರತಿಬಂಧಕಾದೇಶ ಮಾಡಿದೆ. ಮಾನಹಾನಿಯು ಸಾವಿಗಿಂತಲೂ ಕನಿಷ್ಠ ಎಂದು ಸುಪ್ರೀಂಕೋರ್ಟ್ ಹೇಳಿದೆ. ವಿಚಾರಣಾ ನ್ಯಾಯಾಲಯದಲ್ಲಿ ವಾದ ಮಂಡಿಸಲು ನಾವು ಸಿದ್ಧರಿದ್ದೇವೆ. ಯಾವುದೇ ರೀತಿಯಲ್ಲಿ ಸಮಯ ಕೇಳುವುದಿಲ್ಲ ಎಂದರು.
ಕುಡ್ಲ ರ‍್ಯಾಂಪೇಜ್ ಪ್ರಧಾನ ಸಂಪಾದಕ ಅಜಯ್ ಪರ ವಕೀಲ ಎ. ವೇಲನ್ ವಾದ ಮಂಡಿಸಿ, ವಿಚಾರಣಾ ನ್ಯಾಯಾಲಯದ ಪ್ರತಿಬಂಧಕಾದೇಶ ವ್ಯಾಪ್ತಿ ಮೀರಿದ್ದು, ಆ ಆದೇಶ ನಿಲ್ಲುವುದಿಲ್ಲ. ಹರ್ಷೇಂದ್ರ ಕುಮಾರ್ ಅವರು ನಿರಂತರವಾಗಿ ಎಷ್ಟು ಪ್ರತಿಬಂಧಕಾದೇಶ ಪಡೆದುಕೊಂಡಿದ್ದಾರೆ ಎಂಬುದನ್ನು ಹೇಳಬೇಕು. ಮಾನಹಾನಿಯ ಅಂಶಗಳನ್ನು ಪರಿಶೀಲಿಸದೇ ವಿಚಾರಣಾ ನ್ಯಾಯಾಲಯ ಮಾಧ್ಯಮಗಳನ್ನು ನಿರ್ಬಂಧಿಸಿದೆ. 9 ಸಾವಿರ ಲಿಂಕ್‌ಗಳನ್ನು 3 ಗಂಟೆಗಳಲ್ಲಿ ಪರಿಶೀಲಿಸಿ ಪ್ರತಿಬಂಧಕಾದೇಶ ಮಾಡಲಾಗುತ್ತದೆಯೇ? ಎಂದು ಪ್ರಶ್ನಿಸಿದರು.
ಆ ವಿಡಿಯೊಗಳಲ್ಲಿ ಮಾನಹಾನಿಯಾಗುವಂಥ ಯಾವುದೇ ಅಂಶಗಳಿಲ್ಲ. ಇಂಥ ನಿರ್ಬಂಧ ಆದೇಶಗಳನ್ನು ಮಾಡಿದರೆ ಸುಪ್ರೀಂಕೋರ್ಟ್‌ನ ಮಹತ್ವದ ತೀರ್ಪುಗಳಿಗೆ ಅಡಿಗಲ್ಲಾಗಿರುವ ತನಿಖಾ ಪತ್ರಿಕೋದ್ಯಮದ ಪ್ರಶ್ನೆ ಏನಾಗಬೇಕು? ಮಾಧ್ಯಮಗಳ ವರದಿಯನ್ನೇ ಆಧರಿಸಿ ರಾಜ್ಯ ಸರ್ಕಾರ ಧರ್ಮಸ್ಥಳದಲ್ಲಿ ಕೊಲೆ ಮಾಡಿ, ಹೂತಿರುವ ಶವಗಳ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಒಂದು ಹಂತದಲ್ಲಿ ನ್ಯಾಯಪೀಠ, ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸುತ್ತಿರುವುದೇಕೆ? ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿರುವ ವ್ಯಕ್ತಿಯ ಅರ್ಜಿಯನ್ನು ಪರಿಗಣಿಸಬೇಕು ಎಂದು ನೀವು ಹೇಗೆ ನಿರೀಕ್ಷಿಸುತ್ತೀರಿ. ಪ್ರತಿಬಂಧಕಾದೇಶ ಮಾಡಿದ ಮೇಲೂ ಒಂದರ ನಂತರ ಮತ್ತೊಂದು (ಯೂಟ್ಯೂಬ್) ಚಾನಲ್ ಆರಂಭಿಸುತ್ತಿರುವುದೇಕೆ ಎಂದು ಅರ್ಜಿದಾರರನ್ನು ಕುರಿತು ಪ್ರಶ್ನಿಸಿತು.
ಅದಕ್ಕೆ ಪ್ರತಿಕ್ರಿಯಿಸಿದ ವೇಲನ್, ಇದು ಇಬ್ಬರು ವ್ಯಕ್ತಿಗಳ ನಡುವಿನ ವಿವಾದವಲ್ಲ. ವಿಚಾರಣಾ ನ್ಯಾಯಾಲಯದ ಪ್ರತಿಬಂಧಕಾದೇಶ ಭಾರಿ ಪರಿಣಾಮ ಉಂಟು ಮಾಡಲಿದ್ದು, ಪ್ರತಿಯೊಂದು ಮಾಧ್ಯಮವನ್ನೂ ನಿರ್ಬಂಧಿಸುವ ಪರಿಣಾಮ ಹೊಂದಿದೆ ಎಂದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ಅರ್ಜಿಯ ಸಿಂಧುತ್ವದ ಕುರಿತ ಆದೇಶವನ್ನು ಕಾಯ್ದಿರಿಸಿತಲ್ಲದೆ, ಶುಕ್ರವಾರ ಆದೇಶ ಪ್ರಕಟಿಸಲು ಪ್ರಯತ್ನಿಸಲಾಗುವುದು ಎಂದು ಮೌಖಿಕವಾಗಿ ಹೇಳಿತು.
Related Articles
Thank you for your comment. It is awaiting moderation.
Comments (0)