ಪ್ರಾಸಿಕ್ಯೂಷನ್ ಅನುಮತಿ ಪ್ರಶ್ನಿಸಿ ಸಿಎಂ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣ; ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಬೆಂಗಳೂರು: ಮುಡಾ ಪ್ರಕರಣದ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ನೀಡಿರುವ ಅನುಮತಿ ರದ್ದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.

ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ ಆಗಸ್ಟ್ 17ರಂದು ರಾಜ್ಯಪಾಲರು ಹೊರಡಿಸಿರುವ ಆದೇಶ ರದ್ದುಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ರಿಟ್ ಅರ್ಜಿ ಕುರಿತು ಗುರುವಾರ ಸುದೀರ್ಘ ವಾದ-ಪ್ರತಿವಾದ ಆಲಿಸಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ, ತೀರ್ಪು ಕಾಯ್ದಿರಿಸಿತು.

ಇದೇ ವೇಳೆ, ರಾಜ್ಯಪಾಲರ ಅನುಮತಿ ಆಧರಿಸಿ ಮುಖ್ಯಮಂತ್ರಿಗಳ ವಿರುದ್ಧ ಆತುರದ ಕ್ರಮ ಜರುಗಿಸದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹಾಗೂ ಲೋಕಾಯುಕ್ತ ಪೊಲೀಸರಿಗೆ ನಿರ್ದೇಶಿಸಿ ಆಗಸ್ಟ್ 19ರಂದು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಅರ್ಜಿ ಇತ್ಯರ್ಥವಾಗುವವರೆಗೆ ವಿಸ್ತರಿಸಿತು.

ಸ್ವತಂತ್ರ ವಿವೇಚನೆ ಬಳಸಿಲ್ಲ:
ಇದಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಪ್ರತ್ಯುತ್ತರ ವಾದ ಮಂಡಿಸಿದ ಹಿರಿಯ ವಕೀಲ ಡಾ. ಅಭಿಷೇಕ್‌ ಮನು ಸಿಂಘ್ವಿ, ಮುಖ್ಯಮಂತ್ರಿಗಳಿಗೆ ನೀಡಿದ್ದ ಶೋಕಾಸ್‌ ನೋಟಿಸ್‌ ಹಿಂಪಡೆಯುವ ಸಂಬಂಧ ಸಚಿವ ಸಂಪುಟ ಮಾಡಿದ್ದ ಶಿಫಾರಸಿನಲ್ಲಿ ಉಲ್ಲೇಖಿಸಿರುವ ಅಂಶಗಳಲ್ಲಿ ಎದ್ದು ಕಾಣುವ ಅತಾರ್ಕಿಕ ಅಂಶಗಳನ್ನು ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿ ಆದೇಶದಲ್ಲಿ ಪಟ್ಟಿ ಮಾಡಿಲ್ಲ. ಬದಲಾಗಿ, ಸಂಪುಟದ ಶಿಫಾರಸು ಪಕ್ಷಪಾತಿ ಎಂಬುದನ್ನಷ್ಟೇ ರಾಜ್ಯಪಾಲರು ಹೇಳಿದ್ದಾರೆ. ಆ ಮೂಲಕ ಸ್ವತಂತ್ರವಾಗಿ ವಿವೇಚನೆ ಬಳಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್ 17ಎ ಅಡಿ ತನಿಖೆಗೆ ಅನುಮತಿಸುವಾಗ ತನಿಖಾಧಿಕಾರಿ ಅಭಿಪ್ರಾಯ ರೂಪಿಸಿರಬೇಕು. ಇದೂ ಸಹ ಹಾಲಿ ಪ್ರಕರಣದಲ್ಲಿ ಪಾಲನೆಯಾಗಿಲ್ಲ. ಆದ್ದರಿಂದ, ರಾಜ್ಯಪಾಲರ ಆದೇಶ ರದ್ದುಪಡಿಸಬೇಕು ಎಂದು ಕೋರಿದರು.

ರಾಜ್ಯಪಾಲರು ತಮ್ಮ ಆದೇಶದಲ್ಲಿ ಆಧರಿಸಿರುವ ಮಧ್ಯಪ್ರದೇಶ ಪೊಲೀಸ್‌ ಎಸ್ಟಾಬ್ಲಿಷ್ಮೆಂಟ್ ತೀರ್ಪಿನ ಪ್ರಕರಣ ಸಂಪೂರ್ಣವಾಗಿ ಸಿದ್ದರಾಮಯ್ಯ ಪರವಾಗಿದೆ. ಆದರೆ, ಅದನ್ನು ತಪ್ಪಾಗಿ ವ್ಯಾಖ್ಯಾನಿಸಿದ್ದಾರೆ ಎಂದರು. ಈ ಮಧ್ಯೆ ನ್ಯಾಯಪೀಠ, ಯಾವ ಸಂಪುಟ ತನ್ನ ನಾಯಕನ (ಮುಖ್ಯಮಂತ್ರಿ) ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡಿರುವುದು ಸರಿ ಎನ್ನುತ್ತದೆ ಎಂದು ಪ್ರಶ್ನಿಸಿದರು. ಇದಕ್ಕೆ ಸಿಂಘ್ವಿ ಅವರು, ರಾಜಕೀಯದಲ್ಲಿ ಸಾಕಷ್ಟು ಬಾರಿ ಸಂಪುಟ ತಮ್ಮ ಮುಖ್ಯಮಂತ್ರಿ ವಿರುದ್ಧ ನಡೆದಿರುವ ಉದಾಹರಣೆಯೂ ಇದೆ ಎಂದು ಸಮಜಾಯಿಷಿ ನೀಡಿದರು. ಸುಮಾರು ನಾಲ್ಕು ತಾಸು ಸುದೀರ್ಘವಾಗಿ ವಾದಿಸಿದ ಸಿಂಘ್ವಿ ಅವರು ಅತ್ಯಂತ ಸೂಕ್ಷ್ಮ ವಿಚಾರಗಳನ್ನು ನ್ಯಾಯಾಲಯಕ್ಕೆ ಸವಿಸ್ತಾರವಾಗಿ ವಿವರಿಸಿದರು.

ಅಭಿಷೇಕ್‌ ಮನುಸಿಂಘ್ವಿ ವಾದದ ಪ್ರಮುಖಾಂಶ:

  • ಸಚಿವ ಸಂಪುಟದ ಶಿಫಾರಸಿಗೆ ಬದ್ಧರಾಗಿರಬೇಕಿಲ್ಲ ಎಂದು ರಾಜ್ಯಪಾಲರು ಹೇಳುವುದಾದರೆ, ಏಕೆ ಬದ್ಧವಾಗಿರಬೇಕಿಲ್ಲ ಎಂಬುದನ್ನೂ ಹೇಳಬೇಕಿತ್ತು.
  • ಇಡೀ ಪ್ರಕರಣದಲ್ಲಿ ಮುಖ್ಯಮಂತ್ರಿಗಳು ಪಾತ್ರವೇನು ಎಂಬುದನ್ನೂ ತಿಳಿಸಿಲ್ಲ. ಯಾವುದಾದರೂ ಕಡತಕ್ಕೆ ಸಿಎಂ ಸಹಿ ಹಾಕಿದ್ದಾರೆಯೇ? ಯಾವುದಾದರೂ ಶಿಫಾರಸು ಮಾಡಿದ್ದಾರೆಯೇ? ಯಾವ ತೀರ್ಮಾನ ಕೈಗೊಂಡಿದ್ದಾರೆ ಎಂಬ ಬಗ್ಗೆ ಒಂದಂಶವನ್ನೂ ಆದೇಶದಲ್ಲಿ ತಿಳಿಸಿಲ್ಲ.
  • ರಾಜ್ಯಪಾಲರು 50 ಪುಟಗಳ ಆದೇಶ ನೀಡಬೇಕಿಲ್ಲ. ಆದರೆ, ಅವರ ಮುಂದಿರುವ ಸಾವಿರ ಪುಟಗಳ ಕಡತದಲ್ಲೇನಿದೆ ಎಂಬುದನ್ನು ಆದೇಶದಲ್ಲಿ ಹೇಳಬೇಕಿತ್ತು.
  • ಸಚಿವ ಸಂಪುಟದ ಧೋರಣೆ ತಾರತಮ್ಯಪೂರಿತ ಮತ್ತು ಅದರ ನಿರ್ಧಾರ ತಪ್ಪಿದೆ ಎಂಬುದನ್ನು ರಾಜ್ಯಪಾಲರು ಕಾರಣಸಹಿತ ಹೇಳಬೇಕಿತ್ತು.
  • ಮಾಜಿ ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಮೊಟ್ಟೆ ಹಗರಣ ಕುರಿತು 2021 ಡಿ.9ರಂದು ದಾಖಲಾದ ದೂರಿಗೆ ಮೂರು ವರ್ಷದ ಬಳಿಕ ಪ್ರಾಸಿಕ್ಯೂಷನ್ ಅನುಮತಿ ನಿರಾಕರಿಸಿದ್ದಾರೆ.
  • ಮುರುಗೇಶ್ ನಿರಾಣಿ ಕೇಸ್ ನಲ್ಲಿ ಸ್ಪಷ್ಟನೆ ಕೇಳಿ ಕಡತ ಹಿಂದಿರುಗಿಸಲಾಗಿದೆ. ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಪ್ರಕರಣ ಹಿಂದಿರುಗಿಸಲಾಗಿದೆ. ಆದರೆ, ಸಿಎಂ ಸಹಿ ಇಲ್ಲದ 23 ವರ್ಷಗಳ ಹಳೆಯ ಪ್ರಕರಣದಲ್ಲಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ.

ಕೆಸರೆ ಗ್ರಾಮ ಅಸ್ತಿತ್ವದಲ್ಲಿತ್ತು:
ಸಿದ್ದರಾಮಯ್ಯ ಪರವಾಗಿ ವಾದ ಮುಂದುವರಿಸಿದ ಮತ್ತೊಬ್ಬ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್‌, ಕೆಸರೆ ಗ್ರಾಮದಲ್ಲಿನ ವಿವಾದಿತ ಸರ್ವೇ ಸಂಖ್ಯೆ 464ರಲ್ಲಿನ 3.16 ಗುಂಟೆ ಭೂಮಿಯನ್ನು ಮುಡಾ ಡಿನೋಟಿಫೈ ಮಾಡಿದ್ದು, ದೇವನೂರು ಬಡಾವಣೆ ರೂಪಿಸುವಾಗ ಅದನ್ನು ವಶಕ್ಕೆ ಪಡೆಯಲಾಗಿಲ್ಲ. ಇಂದಿಗೂ ವಿವಾದಿತ ಭೂಮಿಯನ್ನು ಮುಡಾ ತನ್ನ ವಶಕ್ಕೆ ಪಡೆದಿಲ್ಲ. ಅದು ಸಿದ್ದರಾಮಯ್ಯ ಸಂಬಂಧಿಕರ ವಶದಲ್ಲೇ ಇದೆ ಎಂದು ತಿಳಿಸಿದರು.

ವಿವಾದಿತ ಭೂಮಿ ಸೇರಿ ಹಲವು ಜಮೀನುಗಳನ್ನು 1993ರಲ್ಲಿ ವಶಪಡಿಸಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ಮುಡಾ ಒಟ್ಟಾರೆಯಾಗಿ ಒಂದು ಕೋಟಿಗೂ ಅಧಿಕ ಪರಿಹಾರ ನೀಡಿತ್ತು. ಇದು ಸಿವಿಲ್‌ ನ್ಯಾಯಾಲಯದ ಮೆಟ್ಟಿಲೇರಿದ್ದು, ನ್ಯಾಯಾಲಯ ಪ್ರತ್ಯೇಕವಾಗಿ ಸಂತ್ರಸ್ತರಿಗೆ ಪರಿಹಾರ ವಿತರಿಸುವಂತೆ ಆದೇಶಿಸಿತ್ತು. ಇನ್ನು ದೂರುದಾರರು ಕೆಸರೆ ಗ್ರಾಮವೇ ಇಲ್ಲ ಎಂದು ವಾದಿಸಿದ್ದಾರೆ. 2011ರ ಜನಗಣತಿಯ ಪ್ರಕಾರ ಕೆಸರೆ ಗ್ರಾಮ ಇದ್ದು, ಅಲ್ಲಿ ಜನವಸತಿ ಮತ್ತು ಆಸ್ಪತ್ರೆ ಇತ್ಯಾದಿಗಳು ಇದ್ದವು. ಇದಕ್ಕೆ ಸಂಬಂಧಿಸಿದಂತೆ ಜನಗಣತಿಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದರು.

ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ಅವರ ಜಮೀನಿಗೆ ಪರ್ಯಾಯವಾಗಿ 14 ನಿವೇಶನ ನೀಡಲಾಗಿದೆ. ದೂರುದಾರರು ಆಪಾದಿಸಿರುವಂತೆ ಸೂಜಿ ಗಾತ್ರದ ಅನುಮಾನಕ್ಕೆ ಆಸ್ಪದವೇ ಇಲ್ಲ. ನಿವೇಶಗಳನ್ನು ಈಗಲೂ ವಾಪಸ್‌ ಪಡೆದು, ಅರ್ಜಿದಾರರ ಪತ್ನಿಗೆ ವಿವಾದಿತ ಭೂಮಿಯನ್ನು ಮರಳಿಸಬಹುದು ಎಂದ ರವಿವರ್ಮ ಕುಮಾರ್, ಸಿದ್ದರಾಮಯ್ಯನವರ ಸಂಬಂಧಿಗಳು ಕೆಲವರು ಅವರಿಂದ ಲಾಭ ಪಡೆದಿರಬಹುದು. ಅಧಿಕಾರಿಗಳಿಗೂ ಲಾಭವಾಗಿರಬಹುದು. 14 ಜುಜುಬಿ ನಿವೇಶನಗಳಿಗೆ ಅವರನ್ನು ಹೀಗೆ ಹಣಿಯಲು ಯತ್ನಿಸಬಹುದೇ ಇಡೀ ಪ್ರಕ್ರಿಯೆಯಲ್ಲಿ ರಾಜಕೀಯ ದುರುದ್ದೇಶ ಅಡಗಿದೆ ಎಂದು ಆಕ್ಷೇಪಿಸಿದರು.

ರಾಜ್ಯಪಾಲರದ್ದು ಅಪಕ್ವ ಆದೇಶ:
ಸರ್ಕಾರದ ಪರ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿ, ತನಿಖಾಧಿಕಾರಿಯ ಯಾವುದೇ ಪ್ರಾಥಮಿಕ ತನಿಖೆಯ ಆಧಾರವಿಲ್ಲದೇ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಸೆಕ್ಷನ್‌ 17 ಎ ಅಡಿಯಲ್ಲಿ ಅನುಮತಿ ನೀಡಿರುವುದು ಅಪಕ್ವವಾದ ಆದೇಶವಾಗಿದೆ. ಕೇವಲ ತರಾತುರಿಯಲ್ಲಿ ರಾಜ್ಯಪಾಲರು ನಿರ್ಧಾರ ಕೈಗೊಂಡಿದ್ದಾರೆ. ಅನುಮತಿ ನೀಡುವಾಗ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಿಲ್ಲ. ಆದ್ದರಿಂದ, ಅವರ ಅನುಮತಿ ಕಾನೂನುಬಾಹಿರವಾಗಿದೆ ಎಂದರು.

Related Articles

Comments (0)

Leave a Comment