ಕದ್ದ ಒಡವೆಗಳ ಗಿರವಿ ಇಟ್ಟ ಪ್ರಕರಣಗಳ ತನಿಖೆಗೆ ಮಾರ್ಗಸೂಚಿ; ಕಾನೂನು ಆಯೋಗಕ್ಕೆ ಹೈಕೋರ್ಟ್ ಮನವಿ

ಬೆಂಗಳೂರು: ಕದ್ದ ಚಿನ್ನಾಭರಣಗಳನ್ನು ಗಿರಿವಿದಾರರಲ್ಲಿ (ಫೈನಾನ್ಷಿಯಲ್ ಕಂಪನಿ) ಅಡವಿಡುವುದರಿಂದ ಎದುರಾಗಬಹುದಾದ ಪರಿಣಾಮಗಳು ಮತ್ತು ಅಂತಹ ಪ್ರಕರಣಗಳಲ್ಲಿ ಕ್ರಿಮಿನಲ್ ಪ್ರಕ್ರಿಯೆ ಪ್ರಾರಂಭಿಸುವ ಕಾರ್ಯವಿಧಾನಕ್ಕೆ ಸಂಬಂಧಿಸಿದಂತೆ ಸೂಕ್ತ ಮಾರ್ಗಸೂಚಿಗಳನ್ನು ರಚಿಸುವಂತೆ ರಾಜ್ಯ ಕಾನೂನು ಆಯೋಗಕ್ಕೆ ಹೈಕೋರ್ಟ್ ಮನವಿ ಮಾಡಿದೆ.

ಕದ್ದ ಚಿನ್ನ ಅಡವಿರಿಸಿಕೊಂಡ ಆರೋಪ ಸಂಬಂಧ ನೋಟಿಸ್ ಜಾರಿ ಮಾಡಿದ್ದ ಬೇಗೂರು ಪೊಲೀಸರ ಕ್ರಮ ಪ್ರಶ್ನಿಸಿ ಮುತ್ತೂಟ್ ಫೈನಾನ್ಸ್ ಲಿಮಿಟೆಡ್ ಕಂಪನಿ ಸಲ್ಲಿಸಿದ್ದ ಅರ್ಜಿ ಸಂಬಂಧ ನೀಡಿರುವ ಆದೇಶದಲ್ಲಿ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮನವಿ ಮಾಡಿದೆ.

ಕಳವು ಮಾಡಿದ ಚಿನ್ನವನ್ನು ಗೋಲ್ಡ್ ಫೈನಾನ್ಸ್ ಕಂಪನಿಯಲ್ಲಿ ಅಡವಿಡುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಹಲವು ಅರ್ಜಿಗಳು ಸಲ್ಲಿಕೆಯಾಗುತ್ತಿರುವ ಕುರಿತು ಆದೇಶದಲ್ಲಿ ಉಲ್ಲೇಖಿಸಿರುವ ನ್ಯಾಯಪೀಠ, ಕದ್ದ ಚಿನ್ನ ಅಡವಿಡುವವರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ನಿಗಾ ಇಡಬೇಕು. ಅದರ ಮಾಲೀಕತ್ವವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದೆ.

ಜತೆಗೆ, ಅಡಮಾನ ಇಡುವುದಕ್ಕೆ ಬಂದ ವ್ಯಕ್ತಿಯ ಗುರುತು, ಕದ್ದ ಚಿನ್ನ ಅಡವಿಡುವುದರಿಂದ ಆಗುವ ಪರಿಣಾಮ ಹಾಗೂ ಆ ಸಂಬಂಧ ಕ್ರಿಮಿನಲ್ ವಿಚಾರಣೆ ನಡೆಸುವ ಸಂದರ್ಭದಲ್ಲಿ ಚಿನ್ನದೊಂದಿಗೆ ವ್ಯವಹರಿಸುವ ವಿಧಾನಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ರಚನೆ ಮಾಡಬೇಕಾದ ಅಗತ್ಯವಿದ್ದು, ರಾಜ್ಯ ಕಾನೂನು ಆಯೋಗ ಈ ವಿಷಯ ಪರಿಶೀಲಿಸಿ ಸೂಕ್ತ ಮಾರ್ಗಸೂಚಿಗಳನ್ನು ರೂಪಿಸಬೇಕೆಂದು ಕೋರುತ್ತಿರುವುದಾಗಿ ನ್ಯಾಯಪೀಠ ಆದೇಶದಲ್ಲಿ ಹೇಳಿದೆ.

ಕರ್ತವ್ಯ ಬದ್ಧತೆ ಇರಬೇಕು:
ಅರ್ಜಿದಾರ ಕಂಪನಿ ಪೊಲೀಸರ ತನಿಖೆಗೆ ಸಂಪೂರ್ಣ ಸಹಕಾರ ನೀಡಲಿದ್ದಾರೆ. ಆದರೆ, ಅವರು ಗಿರಿವಿದಾರರಾಗಿದ್ದು, ಈಗಾಗಲೇ ಅಡವಿಟ್ಟಿರುವ ಚಿನ್ನದ ಮೇಲೆ ತಮ್ಮ ಹಕ್ಕು ಹೊಂದಿರಲಿದ್ದಾರೆ ಎಂಬ ಕಂಪನಿಯ ಪರ ವಕೀಲರ ವಾದವನ್ನು ತಳ್ಳಿ ಹಾಕಿರುವ ನ್ಯಾಯಪೀಠ, ಗಿರವಿದಾರರಾಗಿರುವ ಅರ್ಜಿದಾರರು, ಗಿರವಿ ಇರಿಸಿಕೊಂಡಿರುವ ಒಡವೆಗಳ ಮೇಲೆ ಸೀಮಿತ ಹಕ್ಕು ಮಾತ್ರ ಹೊಂದಿದ್ದಾರೆ. ಅದನ್ನು ಮೀರಿ ಇತರ ಹಕ್ಕುಗಳನ್ನು ಪಡೆಯುವುದಕ್ಕೆ ಸಾಧ್ಯವಿಲ್ಲ. ಜತೆಗೆ, ಚಿನ್ನದ ನಿಜವಾದ ಮಾಲೀಕರಿಂದ ಕದ್ದ ನಂತರ ಚಿನ್ನದ ಹಣಕಾಸು ಕಂಪನಿಯಲ್ಲಿ ಅಡವಿಡಲಾಗುತ್ತದೆ ಎಂಬ ಕಾರಣಕ್ಕೆ ಚಿನ್ನದ ಮಾಲೀಕರು ಅದರ ಬಳಕೆಯಿಂದ ವಂಚಿತರಾಗಲು ಸಾಧ್ಯವಿಲ್ಲ. ಚಿನ್ನಾಭರಣ ಅಡವಿರಿಸಕೊಂಡು ಸಾಲ ನೀಡುವ ಗೋಲ್ಡ್ ಫೈನಾನ್ಸ್ ಕಂಪನಿಗಳು ಅವುಗಳನ್ನು ಸ್ವೀಕರಿಸುವುದಕ್ಕೂ ಮುನ್ನ ಶ್ರದ್ದೆಯಿಂದ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಚಿನ್ನ ಬಿಡುಗಡೆಗೂ ಮುನ್ನ ನೋಟಿಸ್:
ಈ ಪ್ರಕರಣದಲ್ಲಿ ವಿವಾದಿತ ಚಿನ್ನದ ಸಂಬಂಧ ಅರ್ಜಿದಾರ ಕಂಪನಿ ತನಿಖಾಧಿಕಾರಿಯೊಂದಿಗೆ ಸಂಪೂರ್ಣ ಸಹಕಾರ ನೀಡಬೇಕು. ಅಡಮಾನಕ್ಕೆ ಸಂಬಂಧಿಸಿದಂತೆ ಎಲ್ಲ ರೀತಿಯ ದಾಖಲೆಗಳೊಂದಿಗೆ ವಿವರಗಳನ್ನು ನೀಡಬೇಕು. ತನಿಖಾಧಿಕಾರಿಗಳು ಚಿನ್ನದ ಮಾಲೀಕತ್ವ ಸೇರಿ ವಿವಿಧ ವಿಚಾರಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ಆ ಚಿನ್ನದ ತಪಾಸಣೆಗೆ ಅವಕಾಶ ನೀಡಬೇಕು. ಅಗತ್ಯವಿದ್ದಲ್ಲಿ ತನಿಖಾಧಿಕಾರಿ ರಸೀದಿಯನ್ನು ನ್ಯಾಯಾಲಯದಲ್ಲಿ ಠೇವಣಿ ಇಡಬಹುದು ಎಂದಿರುವ ನ್ಯಾಯಪೀಠ, ಚಿನ್ನವನ್ನು ಕಳವು ಮಾಡಲಾಗಿದೆ ಎಂಬ ತೀರ್ಮಾನಕ್ಕೆ ಬಂದ ಬಳಿಕ ಪೊಲೀಸ್ ಅಧಿಕಾರಿಗಳು ಚಿನ್ನವನ್ನು ತಮ್ಮ ವಶದಲ್ಲಿಟ್ಟುಕೊಳ್ಳುವುದಕ್ಕೆ ಅವಕಾಶವಿಲ್ಲ. ಆದರೆ, ಅದನ್ನು ವಶಪಡಿಸಿಕೊಂಡು ನ್ಯಾಯಾಲಯದಲ್ಲಿ ಠೇವಣಿ ಇಡಬೇಕು ಎಂದು ಸ್ಪಷ್ಟಪಡಿಸಿದೆ.

ತನಿಖೆ ಬಳಿಕ ಚಿನ್ನವನ್ನು ಯಾರಿಗೆ ಹಿಂದಿರುಗಿಸಬೇಕು ಎಂಬುದನ್ನು ನಿರ್ಧರಿಸಬೇಕಾಗಿರುವುದು ವಿಚಾರಣಾ ನ್ಯಾಯಾಲಯಕ್ಕೆ ಬಿಟ್ಟ ವಿಚಾರವಾಗಿರಲಿದೆ. ವಿಚಾರಣೆ ಬಳಿಕ ಚಿನ್ನ ಬಿಡುಗಡೆ ಮಾಡುವಂತೆ ಕೋರಿ ಸಲ್ಲಿಸಿರುವ ಅರ್ಜಿ ಪರಿಗಣಿಸುವ ಸಂದರ್ಭದಲ್ಲಿ ಇಲ್ಲವೇ ನ್ಯಾಯಾಲಯ ಅದನ್ನು ಬಿಡುಗಡೆ ಮಾಡುವಾಗ ಅರ್ಜಿದಾರ ಕಂಪನಿಗೆ ನೋಟಿಸ್ ನೀಡಬೇಕಾಗುತ್ತದೆ ಮತ್ತು ಬಿಡುಗಡೆಗೆ ಆದೇಶಿಸುವ ಮೊದಲು ಅರ್ಜಿದಾರರ ವಿಚಾರಣೆಗೆ ಅವಕಾಶ ನೀಡಬೇಕಾಗುತ್ತದೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.

Related Articles

Comments (0)

Leave a Comment