ವೈವಾಹಿಕ ವ್ಯಾಜ್ಯಗಳಲ್ಲಿ ಪುರುಷರೂ ಕ್ರೌರ್ಯಕ್ಕೀಡಾಗುತ್ತಾರೆ; ಲಿಂಗ ತಟಸ್ಥ ಸಮಾಜದ ಇಂಗಿತ ವ್ಯಕ್ತಪಡಿಸಿದ ಹೈಕೋರ್ಟ್
- by Ramya B T
- January 21, 2025
- 229 Views

ಬೆಂಗಳೂರು: ಬಹುತೇಕ ವೈವಾಹಿಕ ವ್ಯಾಜ್ಯಗಳಲ್ಲಿ ಮಹಿಳೆಯರೇ ಸಂತ್ರಸ್ತರಾಗಿರುತ್ತಾರೆ ಎನ್ನುವುದು ವಾಸ್ತವದ ಸಂಗತಿಯಾದರೂ, ಅದರ ಅರ್ಥ ಮಹಿಳೆಯರ ಕ್ರೌರ್ಯದಿಂದ ಪುರುಷರು ಹಾನಿಗೊಳಗಾಗುದಿಲ್ಲ ಎಂದಲ್ಲ. ಆದ್ದರಿಂದ, ಲಿಂಗ ತಟಸ್ಥ ಸಮಾಜ ಸದ್ಯ ಅತ್ಯವಶ್ಯವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ವಿವಾಹ ವಿಚ್ಛೇದನ ಕೋರಿ ಪತಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ ತನ್ನ ಮನೆಯಿಂದ ನೂರಾರು ಕಿ.ಮೀ. ದೂರದಲ್ಲಿರುವ ಕಾರಣ ಪ್ರಕರಣವನ್ನು ತನ್ನ ವಾಸ್ತವ್ಯಕ್ಕೆ ಸಮೀಪದ ನ್ಯಾಯಾಲಯಕ್ಕೆ ವರ್ಗಾವಣೆ ಮಾಡುವಂತೆ ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಡಾ. ಸಿ. ಸುಮಲತಾ ಅವರಿದ್ದ ಏಕಸದಸ್ಯ ನ್ಯಾಯಪೀಠ, ತೀರ್ಪಿನಲ್ಲಿ ಲಿಂಗ ತಟಸ್ಥ ಸಮಾಜದ ಅಗತ್ಯತೆಯ ಕುರಿತು ಪ್ರಸ್ತಾಪಿಸಿದೆ.
ಸಾಂವಿಧಾನಿಕವಾಗಿ ಪುರುಷರಷ್ಟೇ ಸಮಾನ ಹಕ್ಕುಗಳು ಮಹಿಳೆಯರಿಗೂ ಇವೆ. ವಾಸ್ತವಿಕ ವಿಚಾರವೇನೆಂದರೆ ಇಂಥ ಬಹುತೇಕ ಪ್ರಕರಣಗಳಲ್ಲಿ ಮಹಿಳೆಯರೇ ಹೆಚ್ಚು ಬಾದಿತರಾಗಿರುತ್ತಾರೆ. ಅದರ ಅರ್ಥ ಮಹಿಳೆಯರಿಂದ ಪುರಷರ ಮೇಲೆ ಕ್ರೌರ್ಯವಾಗುವುದಿಲ್ಲ ಎಂದಲ್ಲ. ಆದ್ದರಿಂದ, ಲಿಂಗ ತಾರತಮ್ಯವಿಲ್ಲದ ಸಮಾಜ ಸದ್ಯದ ಅಗತ್ಯವಾಗಿದೆ. ಇಂಥ ಸಮಾಜವು ಲಿಂಗ ಆಧರಿಸಿ ಕರ್ತವ್ಯಗಳನ್ನು ಪ್ರತ್ಯೇಕಗೊಳಿಸುವುದನ್ನು ತಡೆಗಟ್ಟುವ ಗುರಿ ಹೊಂದಿರುತ್ತದೆ ಎಂದು ನ್ಯಾಯಾಲಯ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.
ಲಿಂಗ ತಟಸ್ಥ ಸಮಾಜವು ಕೌಟುಂಬಿಕ ವಿಚಾರಗಳು ಹಾಗೂ ಕೆಲಸದ ಸ್ಥಳಗಳಲ್ಲಿ ಸ್ತ್ರೀ ಮತ್ತು ಪುರುಷರನ್ನು ಸಮಾನವಾಗಿ ನಡೆಸಿಕೊಳ್ಳುವತ್ತ ಗಮನ ಕೇಂದ್ರೀಕರಿಸುತ್ತದೆ. ಸಮಾನತೆ ಎನ್ನುವುದು ಅದರ ನಿಜವಾದ ಅರ್ಥದಲ್ಲಿರಬೇಕು. ಮಹಿಳೆಯರನ್ನು ರಕ್ಷಿಸುವ ನಮ್ಮ ಪ್ರಯತ್ನಗಳು ಎಷ್ಟೇ ಶ್ಲಾಘನೀಯವಾಗಿದ್ದರೂ, ಸಮಾಜದಲ್ಲಿ ಪುರುಷರು ಎದುರಿಸುತ್ತಿರುವ ಸವಾಲುಗಳನ್ನು ಕಡೆಗಣಿಸುವಂತಾಗಬಾರದು ಎಂದು ಹೈಕೋರ್ಟ್ ಹೇಳಿದೆ.
ಪ್ರಕರಣವೇನು?
ಪತಿ ದಾಖಲಿಸಿರುವ ವಿಚ್ಛೇದನ ಪ್ರಕರಣವು ಚಿಕ್ಕಮಗಳೂರಿನ ನರಸಿಂಹರಾಜಪುರ ಹಿರಿಯ ಸಿವಿಲ್ ನ್ಯಾಯಾಧೀಶರ ಮುಂದೆ ಬಾಕಿ ಇದ್ದು, ಆ ನ್ಯಾಯಾಲಯ ನನ್ನ ಮನೆಯಿಂದ 130 ಕಿ.ಮೀ. ದೂರವಿದೆ. ಇದರಿಂದ, ಪ್ರತಿ ಬಾರಿಯೂ ವಿಚಾರಣೆಗಾಗಿ ಅಷ್ಟು ದೂರ ಪ್ರಯಾಣಿಸುವುದು ಕಷ್ಟವಾಗುತ್ತಿದೆ. ಸದ್ಯ ನಾನು ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ವಾಸಿಸುತ್ತಿದ್ದು, ಪ್ರಕರಣವನ್ನು ಹೊಸನಗರ ನ್ಯಾಯಾಲಯಕ್ಕೇ ವರ್ಗಾಯಿಸಬೇಕು ಎಂದು ಕೋರಿ ಮಹಿಳೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಪತ್ನಿಯ ಅರ್ಜಿಗೆ ಆಕ್ಷೇಪಿಸಿದ್ದ ಪತಿಯ ಪರ ವಕೀಲರು, ಅರ್ಜಿದಾರೆ ಬೇರೊಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಇದೇ ಕಾರಣಕ್ಕೆ ಗಂಡನ ಮನೆ ತೊರೆದು ಹೋಗಿದ್ದಾರೆ. ವಿವಾಹ ಬಂಧದಿಂದ ಜನಿಸಿರುವ 9 ಮತ್ತು 7 ವರ್ಷದ ಇಬ್ಬರು ಮಕ್ಕಳನ್ನು ಪತಿಯೇ ನೋಡಿಕೊಳ್ಳುತ್ತಿದ್ದಾರೆ. ಮಕ್ಕಳಿಗೆ ಅಡುಗೆ ತಯಾರಿಸಿ ಉಣಬಡಿಸುವುದು, ಶಾಲೆಗೆ ಕಳುಹಿಸುವುದು ಸೇರಿ ಇತ್ಯಾದಿ ಕೆಲಸಗಳನ್ನು ಪತಿಯೇ ಮಾಡುತ್ತಿದ್ದಾರೆ. ಒಂದು ವೇಳೆ ಪ್ರಕರಣವನ್ನು ಶಿವಮೊಗ್ಗಕ್ಕೆ ವರ್ಗಾಯಿಸಿದರೆ ಪತಿಗೆ ಸಾಕಷ್ಟು ತೊಂದರೆಯಾಗಲಿದೆ. ಆದ್ದರಿಂದ, ಪತ್ನಿಯ ಅರ್ಜಿ ಪುರಸ್ಕರಿಸಬಾರದು ಎಂದು ಮನವಿ ಮಾಡಿದ್ದರು.
ಮಕ್ಕಳನ್ನು ಕಷ್ಟಕ್ಕೆ ದೂಡಲಾಗದು:
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಪ್ರಕರಣವನ್ನು ಬೇರೊಂದು ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿದರೆ ಸದ್ಯ ಪತ್ನಿ ಎದುರಿಸುತ್ತಿರುವ ಸಮಸ್ಯೆಗಿಂತ ಹೆಚ್ಚಿನ ಸಮಸ್ಯೆಯನ್ನು ಪತಿ ಅನುಭವಿಸುವಂತಾಗುತ್ತದೆ. ಏಕೆಂದರೆ, ಮಕ್ಕಳಿಬ್ಬರನ್ನೂ ಪತಿಯೇ ನೋಡಿಕೊಳ್ಳುತ್ತಿದ್ದಾರೆ. ಪ್ರಕರಣವನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾವಣೆ ಮಾಡುವುದರಿಂದ ಪತಿಯ ಜತೆಗೆ ಚಿಕ್ಕ ವಯಸ್ಸಿನ ಮಕ್ಕಳನ್ನೂ ಕಷ್ಟಕ್ಕೆ ಒಳಪಡಿಸಿದಂತಾಗುತ್ತದೆ. ಅರ್ಜಿ ಸಲ್ಲಿಸಿರುವುದು ಮಹಿಳೆ ಎಂದ ಮಾತ್ರಕ್ಕೆ ಪ್ರಕರಣವನ್ನು ವರ್ಗಾಯಿಸಲಾಗದು. ವಾಸ್ತವಿಕ ವಿಚಾರಗಳು ಹಾಗೂ ಸನ್ನಿವೇಶಗಳನ್ನೂ ನ್ಯಾಯಾಲಯ ಗಮನಿಸಬೇಕಾಗುತ್ತದೆ ಎಂದು ತಿಳಿಸಿ, ಪತ್ನಿಯ ಅರ್ಜಿ ವಜಾಗೊಳಿಸಿದೆ.
ಪ್ರಕರಣದ ವಿವರ:
CP: 370/2024
ABC Vs XYZ
Related Articles
Thank you for your comment. It is awaiting moderation.
Comments (0)