ಬಳ್ಳಾರಿ ಖನಿಜ ಪ್ರತಿಷ್ಠಾನದ ನಿಧಿ ವರ್ಗಾವಣೆ; ಸರ್ಕಾರದ ಕ್ರಮ ಪ್ರಶ್ನಿಸಿದ್ದ ಪಿಐಎಲ್ ವಜಾ

ಬೆಂಗಳೂರು: ಗಣಿ ಬಾಧಿತ ಪ್ರದೇಶಗಳ ಅಭಿವೃದ್ದಿಗಾಗಿ ಬಳ್ಳಾರಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ಮೂಲಕ ಸಂಗ್ರಹಿಸಲಾಗಿರುವ ನಿಧಿಯ ಮೊತ್ತದ ಶೇ.28 ಪ್ರಮಾಣವನ್ನು ನೂತನವಾಗಿ ರಚಿಸಲಾಗಿರುವ ವಿಜಯನಗರ ಜಿಲ್ಲೆಗೆ ವರ್ಗಾವಣೆ ಮಾಡಲು ಗಣಿ ಇಲಾಖೆ ಹೊರಡಿಸಿರುವ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು ತೋರಣಗಲ್‌ನ ಧರಣಿ ಮಹಿಳಾ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ವೈ.ಜಿ. ದಿಲೀಪ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿ ಕುರಿತು ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಹಣ ವರ್ಗಾವಣೆ ವಿಚಾರವು ಸಂಬಂಧಪಟ್ಟ ಇಲಾಖೆ, ಪ್ರಾಧಿಕಾರದ ವ್ಯಾಪ್ತಿಗೆ ಬರುವ ವಿಷಯವಾಗಿದ್ದು, ಸಾರ್ವಜನಿಕ ಹಿತಾಸಕ್ತಿ ವ್ಯಾಪ್ತಿಗೆ ಇದು ಬರುವುದಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿ ಆದೇಶಿತು.

ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು, ಬಳ್ಳಾರಿ ಜಿಲ್ಲೆಯಲ್ಲಿ ಸಂಗ್ರಹವಾಗುವ ನಿಧಿಯಲ್ಲಿ ಶೇ.28 ಪ್ರಮಾಣವನ್ನು ವಿಜಯನಗರ ಜಿಲ್ಲೆಗೆ ಕೊಟ್ಟರೆ, ಬಳ್ಳಾರಿ ಜಿಲ್ಲೆಯ ಜನರಿಗೆ ಅನ್ಯಾಯವಾಗಲಿದೆ. ಆದ್ದರಿಂದ, ಸರ್ಕಾರದ ಆದೇಶ ರದ್ದುಪಡಿಸಬೇಕು. ನಿಧಿ ವರ್ಗಾವಣೆ ಮಾಡುವುದಕ್ಕೆ ನಿರ್ಬಂಧ ಹೇರಬೇಕು ಎಂದು ಮನವಿ ಮಾಡಿದರು.

ಕೇಂದ್ರ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್ ವಾದ ಮಂಡಿಸಿ, ನಿಧಿ ವರ್ಗಾವಣೆ ಕುರಿತ ಆದೇಶದಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಉಲ್ಲಂಘನೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರೆ, ಬಳ್ಳಾರಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ನಿಧಿಯಿಂದ ವಿಜಯನಗರ ಜಿಲ್ಲೆಗೆ ಹೋಗುವ ಹಣ ಆ ಜಿಲ್ಲೆಯ ಬಡ ಜನರು ವಿಶೇಷವಾಗಿ ಮಹಿಳೆಯರ ಅಭಿವೃದ್ಧಿಗೆ ಬಳಕೆಯಾಗುತ್ತದೆ ಎಂದು ರಾಜ್ಯ ಸರ್ಕಾರದ ಪರ ವಕೀಲೆ ನಿಲೋಫರ್ ಅಕ್ಬರ್ ವಿವರಣೆ ನೀಡಿದರು.

ಪ್ರಕರಣವೇನು?
ಬಳ್ಳಾರಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‌ನಲ್ಲಿ ಸಂಗ್ರಹವಾಗಿರುವ ಸಂಪೂರ್ಣ ನಿಧಿಯಲ್ಲಿ ಶೇ.28 ಪ್ರಮಾಣವನ್ನು ವಿಜಯನಗರ ಜಿಲ್ಲೆಗೆ ವರ್ಗಾಯಿಸಬೇಕು. ಅಲ್ಲದೆ, ಸಂಡೂರು ತಾಲೂಕಿನಲ್ಲಿ ಇನ್ನು ಮುಂದೆ ಸಂಗ್ರಹಿಸಬಹುದಾದ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಲ್ಲಿ ಶೇ.28 ಅನ್ನು ಪ್ರತಿ ವರ್ಷ ವಿಜಯನಗರ ಜಿಲ್ಲೆಗೆ ಹಂಚಿಕೆ ಮಾಡಬೇಕು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ (ಗಣಿ-1) ಅಧೀನ ಕಾರ್ಯದರ್ಶಿ 2022ರ ಮಾರ್ಚ್ 14ರಂದು ಆದೇಶ ಹೊರಡಿಸಿದ್ದರು. ಈ ಆದೇಶದಂತೆ, ವಿಜಯನಗರ ಜಿಲ್ಲೆಗೆ ನಿಧಿಯ ಹಣ ಹಂಚಿಕೆ ಮಾಡುವ ಸಂಬಂಧ ಬಳ್ಳಾರಿ ಜಿಲ್ಲಾಧಿಕಾರಿ ಹಾಗೂ ವಿಜಯನಗರ ಜಿಲ್ಲಾಧಿಕಾರಿಗಳಿಗೆ ಸರ್ಕಾರ 2024ರ ಜುಲೈ 10ರಂದು ಸುತ್ತೋಲೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

Related Articles

Comments (0)

Leave a Comment