ಜೈಲಿನಲ್ಲಿ ಕೈದಿಗಳಿಗೆ ಮೊಬೈಲ್ ನೀಡಿ ಹಣ ಗಳಿಕೆ ಆರೋಪ; ಪರಪ್ಪನ ಅಗ್ರಹಾರ ಜೈಲು ವಾರ್ಡರ್ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ಕಳ್ಳ ಮಾರ್ಗದಲ್ಲಿ ಮೊಬೈಲ್‌ ಫೋನ್‌ ಬಳಕೆಗೆ ಅವಕಾಶ ನೀಡಿ, ಪ್ರತಿ ಗಂಟೆಗೆ ಲಂಚದ ರೂಪದಲ್ಲಿ 300 ರೂ. ಪಡೆಯುತ್ತಿದ್ದ ಆರೋಪದಲ್ಲಿ ಜೈಲಿನ ಮುಖ್ಯ ವಾರ್ಡರ್ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಪಡಿಸಲು ಹೈಕೋರ್ಟ್‌ ನಿರಾಕರಿಸಿದೆ.

ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಪ್ರಕರಣ ಮತ್ತು ಆರೋಪಪಟ್ಟಿ ರದ್ದು ಕೋರಿ ಬೆಂಗಳೂರಿನ ಕೇಂದ್ರ ಕಾರಾಗೃಹದ ಮುಖ್ಯ ವಾರ್ಡರ್‌ ಆಗಿದ್ದ ಬಸವರಾಜ ಆರ್‌. ಉಪ್ಪಾರ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಜೆ.ಎಂ. ಖಾಜಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅದೇಶ ಮಾಡಿದೆ.

ಅರ್ಜಿದಾರ ಆರೋಪಿಯ ವಿರುದ್ಧದ ಆರೋಪ ಸಾಬೀತುಪಡಿಸಲು ಮೇಲ್ನೋಟಕ್ಕೆ ಅಗತ್ಯ ಸಾಕ್ಷಾಧಾರಗಳಿವೆ. ಜತೆಗೆ, ಪ್ರಕರಣದಲ್ಲಿ ಅರ್ಜಿದಾರರು ಸೇರಿ ಇತರ ಆರೋಪಿಗಳ ವಿರುದ್ಧ ತನಿಖೆಗೆ ಸಕ್ಷಮ ಪ್ರಾಧಿಕಾರ ಅನುಮತಿ ನೀಡಿದೆ. ಆದ್ದರಿಂದ, ಆರೋಪ ಸಾಬೀತುಪಡಿಸುವುದಕ್ಕೆ ತನಿಖಾಧಿಕಾರಿಗಳಿಗೆ ಅವಕಾಶ ನೀಡಬೇಕಾಗಿದೆ. ಪ್ರಕರಣದಲ್ಲಿ ಎಲ್ಲ ಆರೋಪಿಗಳ ವಿರುದ್ಧ ತನಿಖೆ ನಡೆಯುತ್ತಿದೆ. ಹೀಗಿರುವಾಗ, ಅರ್ಜಿದಾರ ಆರೋಪಿಯ ವಿರುದ್ಧದ ಕ್ರಿಮಿನಲ್‌ ಪ್ರಕರಣವು ನ್ಯಾಯಾಂಗ ಪ್ರಕ್ರಿಯೆಯ ದುರ್ಬಳಕೆಯಾಗುತ್ತದೆ ಎಂಬ ವಾದ ಪುರಸ್ಕರಿಸಲಾಗದು ಎಂದು ನ್ಯಾಯಪೀಠ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಪ್ರಕರಣವೇನು?
ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಯೊಬ್ಬರಿಗೆ ಪರೋಲ್‌ ಮೇಲೆ ಬಿಡುಗಡೆಗೆ ಶಿಫಾರಸು ಮಾಡುವಂತೆ ಕೋರಿ ಹೆಚ್ಚುವರಿ ಜೈಲು ಅಧೀಕ್ಷಕರಾಗಿದ್ದ ಎಸ್‌.ಎಚ್‌. ಜಯರಾಮಯ್ಯಗೆ ಮನವಿ ಮಾಡಲಾಗಿತ್ತು. ಅದಕ್ಕಾಗಿ ಅವರು 10 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಮೊತ್ತದಲ್ಲಿ 5 ಸಾವಿರ ರೂ. ಮುಂಗಡ ಪಾವತಿಗೆ ಕೋರಿದ್ದರು. ಲಂಚಕ್ಕೆ ಬೇಡಿಕೆಯಿಟ್ಟ ಆರೋಪ ಸಂಬಂಧ ಕೈದಿಯ ಪತ್ನಿ 2020ರ ಅಕ್ಟೋಬರ್ 10ರಂದು ಅಂದಿನ ಎಸಿಬಿ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರು, ಟ್ರ್ಯಾಪ್ ನಡೆಸಿದ್ದರು.

ಪ್ರಕರಣದ ತನಿಖೆ ವೇಳೆ ಅರ್ಜಿದಾರಾದ (ಮೂರನೇ ಆರೋಪಿ) ಮುಖ್ಯ ವಾರ್ಡರ್ ಬಸವರಾಜ ಉಪ್ಪಾರ, ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅದೇ ಕೈದಿಗೆ ಜೈಲಿನಲ್ಲಿ ಮೊಬೈಲ್‌ ಬಳಕೆಗೆ ಅವಕಾಶ ನೀಡಿದ್ದರು. ಜತೆಗೆ, ಆ ಮೊಬೈಲ್‌ ಅನ್ನು ಇತರ ಕೈದಿಗಳಿಗೂ ನೀಡಿ ಪ್ರತಿ ಗಂಟೆಗೆ 300 ರೂ.ಗಳನ್ನು ಅಕ್ರಮವಾಗಿ ಪಡೆದುಕೊಂಡು, ಬಳಿಕ ದತ್ತಾಂಶ ಅಳಿಸಿ ಹಾಕುತ್ತಿದ್ದ ವಿಚಾರ ಬೆಳಕಿಗೆ ಬಂದಿತ್ತು. ಇದೇ ಆಧಾರದಲ್ಲಿ ಲೋಕಾಯುಕ್ತ ಪೊಲೀಸರು ಅರ್ಜಿದಾರರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು. ಇದರಿಂದ, ಪ್ರಕರಣ‌ ರದ್ದುಕೋರಿ ಬಸವರಾಜ ಉಪ್ಪಾರ ಹೈಕೋರ್ಟ್ ಮೆಟ್ಟಿಲೇರಿದ್ದರು.

Related Articles

Comments (0)

Leave a Comment