ನಕಲಿ ಜಾತಿ ಪ್ರಮಾಣಪತ್ರ ಪಡೆದು ವಂಚಿಸಿದ ಆರೋಪ; ಬಿಎಸ್‌ಎನ್‌ಎಲ್ ನಿವೃತ್ತ ನೌಕರನ ವಿರುದ್ಧದ ಕೇಸ್ ರದ್ದತಿಗೆ ಹೈಕೋರ್ಟ್ ನಕಾರ
- by Jagan Ramesh
- October 8, 2024
- 336 Views
ಬೆಂಗಳೂರು: ನಕಲಿ ಜಾತಿ ಪ್ರಮಾಣಪತ್ರದ ಪ್ರಯೋಜನದಿಂದ ಭಾರತ ಸಂಚಾರ ನಿಗಮ ನಿಯಮಿತದಲ್ಲಿ (ಬಿಎಸ್‌ಎನ್‌ಎಲ್) ಉದ್ಯೋಗ ಗಿಟ್ಟಿಸಿಕೊಂಡು, ಇದೀಗ ನಿವೃತ್ತಿ ಹೊಂದಿರುವ ವ್ಯಕ್ತಿಯೊಬ್ಬರ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಪ್ರಕರಣ ರದ್ದುಕೋರಿ ಕಲಬುರಗಿಯ ಶ್ರೀಮಂತ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿದ ‘ಕಬ್ಬಲಿಗ’ ಜಾತಿಯ ಅರ್ಜಿದಾರರು ಪರಿಶಿಷ್ಟ ಪಂಗಡದ (ಎಸ್‌ಟಿ) ಕೋಲಿ ಧೋರ್ ಜಾತಿಯ ಹೆಸರಿನಲ್ಲಿ ನಕಲಿ ಪ್ರಮಾಣಪತ್ರ ಪಡೆದು ಅದರಿಂದ ಲಾಭ ಮಾಡಿಕೊಂಡಿರುವ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದೆ.
ಅರ್ಜಿದಾರರು ಕಬ್ಬಲಿಗ ಜಾತಿಗೆ ಸೇರಿದವರಾಗಿದ್ದು, ಅವರು ಸುಳ್ಳು ಮಾಹಿತಿ ನೀಡಿ 1978ರಲ್ಲಿ ಬಿಎಸ್‌ಎನ್‌ಎಲ್‌ನಲ್ಲಿ ಉದ್ಯೋಗ ಪಡೆದು ಅದರ ಲಾಭ ಮಾಡಿಕೊಂಡಿದ್ದಾರೆ. ಆದರೆ, ನಂತರ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ (ಡಿಸಿವಿಸಿ) ಅವರ ಪ್ರಮಾಣಪತ್ರವನ್ನು ರದ್ದುಪಡಿಸಿದೆ. ಆದ್ದರಿಂದ, ಪ್ರಕರಣದ ಬಗ್ಗೆ ತನಿಖೆ ಆಗಬೇಕಿದೆ. ರಾಜ್ಯ ಸರ್ಕಾರವನ್ನು ವಂಚಿಸಿರುವ ಹಾಗೂ ಎಸ್‌ಟಿ ಸಮುದಾಯಕ್ಕೆ ಸೇರಿದವರ ಹಕ್ಕು ಕಸಿದುಕೊಂಡಿರುವ ಆರೋಪ ಹೊತ್ತಿರುವ ಅರ್ಜಿದಾರರ ವಿರುದ್ಧ ವಿಚಾರಣಾ ಪ್ರಕ್ರಿಯೆ ನಡೆಸಬೇಕಿದೆ. ವಿಚಾರಣಾ ನ್ಯಾಯಾಲಯದಲ್ಲಿ ಅರ್ಜಿದಾರರು ವಿಚಾರಣೆ ಎದುರಿಸಲೇಬೇಕಿದ್ದು, ಅವರ ವಿರುದ್ಧದ ಪ್ರಕರಣ ರದ್ದುಪಡಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಪ್ರಕರಣವೇನು?
ಅರ್ಜಿದಾರರು ಮೂಲತಃ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಕಬ್ಬಲಿಗ ಜಾತಿಗೆ ಸೇರಿದವರಾಗಿದ್ದಾರೆ. ಆದರೆ, ಅವರು ಎಸ್‌ಟಿ ವರ್ಗಕ್ಕೆ ಸೇರಿದ ಕೋಲಿ ಧೋರ್ ಎಂಬ ಜಾತಿಯ ಹೆಸರಿನಲ್ಲಿ ನಕಲಿ ಪ್ರಮಾಣಪತ್ರ ಪಡೆದು ಕೇಂದ್ರ ಸರ್ಕಾರಿ ಒಡೆತನದ ಬಿಎಸ್‌ಎನ್‌ಎಲ್‌ನಲ್ಲಿ ಟೆಲಿಪೋನ್ ಆಪರೇಟರ್ ಆಗಿ ಉದ್ಯೋಗಕ್ಕೆ ಸೇರಿದ್ದರು. ಆ ಮೂಲಕ ಸರ್ಕಾರಕ್ಕೆ ವಂಚನೆ ಎಸಗಿದ್ದರು. ಈ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡು ಎಫ್‌ಐಆರ್ ಹೂಡಿದ್ದರು. ಬಳಿಕ ಅವರ ಜಾತಿ ಪ್ರಮಾಣಪತ್ರವನ್ನು ಡಿಸಿವಿಸಿ ರದ್ದುಗೊಳಿಸಿತ್ತು.
ಕ್ರಿಮಿನಲ್ ಪ್ರಕರಣ ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ ಅರ್ಜಿದಾರರು, 1978ರಲ್ಲಿ ಜಾತಿ ಸರ್ಟಿಫಿಕೇಟ್‌ಗಳನ್ನು ಪಡೆಯಲು ಯಾವುದೇ ನಿರ್ಬಂಧ ಇರಲಿಲ್ಲ. ನಂತರ 1993ರಲ್ಲಿ ನಿಯಮಗಳು ಬದಲಾದಾಗ ಆ ಜಾತಿಯ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿತ್ತು. ಆದ್ದರಿಂದ, ಅದು ನಕಲಿ ಜಾತಿ ಪ್ರಮಾಣಪತ್ರ ಪಡೆದಂತಾಗುವುದಿಲ್ಲ. ಜತೆಗೆ, ತಾವು 2013ರಲ್ಲಿಯೇ ಸೇವೆಯಿಂದ ನಿವೃತ್ತರಾಗಿದ್ದು, ಆದಾದ 4 ವರ್ಷಗಳ ನಂತರ ಸಲ್ಲಿಸಿರುವ ಕ್ರಿಮಿನಲ್ ದೂರು ಊರ್ಜಿತವಾಗುವುದಿಲ್ಲ ಎಂದು ವಾದಿಸಿದ್ದರು.
ಅದಕ್ಕೆ ಆಕ್ಷೇಪಿಸಿದ್ದ ನಾಗರಿಕ ಹಕ್ಕುಗಳ ಜಾರಿ (ಸಿಆರ್‌ಇ) ಸೆಲ್‌ನ ವಿಶೇಷ ವಕೀಲರಾದ ಸಿ.ಜಗದೀಶ್, ಅರ್ಜಿದಾರರು ನಕಲಿ ಜಾತಿ ಪ್ರಮಾಣಪತ್ರ ಪಡೆದು, ಅದರ ಲಾಭ ಮಾಡಿಕೊಂಡು ವಂಚನೆ ಎಸಗಿದ್ದಾರೆ. ಈ ಮೂಲಕ ಎಸ್‌ಟಿ ವರ್ಗದವರಿಗೆ ನ್ಯಾಯಯುತವಾಗಿ ದಕ್ಕಬೇಕಿದ್ದ ಹಕ್ಕನ್ನು ಕಸಿದುಕೊಂಡಿದ್ದಾರೆ. ಇಂತಹ ಪ್ರಕರಣಗಳಲ್ಲಿ ತನಿಖೆ ನಡೆಯಲೇಬೇಕು ಎಂದು ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್‌ಗಳು ಹೇಳಿವೆ. ಆದ್ದರಿಂದ, ಅರ್ಜಿ ವಜಾಗೊಳಿಸಿ, ತನಿಖೆಗೆ ಆದೇಶಿಸಬೇಕು ಎಂದು ಕೋರಿದ್ದರು.
Related Articles
Thank you for your comment. It is awaiting moderation.
Comments (0)