ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧದ ವಿಚಾರಣೆ ರದ್ದುಪಡಿಸಿದ ಹೈಕೋರ್ಟ್
- by Jagan Ramesh
- August 22, 2024
- 74 Views
ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ, ಎಲ್ಲ ಹಿಂದುಗಳು ಕಾಂಗ್ರೆಸ್ ಪಕ್ಷವನ್ನು ಬಹಿಷ್ಕರಿಸುತ್ತಾರೆ ಎಂದು ಹೇಳಿಕೆ ನೀಡುವ ಮೂಲಕ ಸರ್ಕಾರಿ ಅಧಿಕಾರಿಗಳ ಆದೇಶ ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದಂತೆ ವಿಜಯಪುರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧದ ಗದಗ ಜಿಲ್ಲೆಯ 1ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ವಿಚಾರಣೆಯನ್ನು ಹೈಕೋರ್ಟ್ ರದ್ದುಪಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದ ಖಾಸಗಿ ದೂರು ಮತ್ತು ವಿಚಾರಣಾ ನ್ಯಾಯಾಲಯದಲ್ಲಿನ ಪ್ರಕ್ರಿಯೆ ರದ್ದು ಕೋರಿ ಶಾಸಕ ಯತ್ನಾಳ್ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ಮಾಡಿದೆ.
ವಿಚಾರಣೆ ವೇಳೆ ವಾದ ಮಂಡಿಸಿದ್ದ ಯತ್ನಾಳ್ ಪರ ವಕೀಲ ವೆಂಕಟೇಶ್ ದಳವಾಯಿ, ಚುನಾವಣಾ ಸಂಚಾರ ವಿಚಕ್ಷಣಾ ತಂಡದ ಅಧಿಕಾರಿ ದಾಖಲಿಸಿದ್ದ ಖಾಸಗಿ ದೂರು ಆಧರಿಸಿ ವಿಚಾರಣಾ ನ್ಯಾಯಾಲಯ ಭಾರತೀಯ ದಂಡ ಸಂಹಿತೆ ಸೆಕ್ಷನ್ 188 ಅಡಿ ಸರ್ಕಾರಿ ಅಧಿಕಾರಿಗಳು ಹೊರಡಿಸಿದ ಆದೇಶದ ಉಲ್ಲಂಘಿಸಿದ ಅಪರಾಧದ ಕಾಗ್ನಿಜೆನ್ಸ್ ತೆಗೆದುಕೊಂಡಿತ್ತು. ಈ ಸಂಬಂಧ ಅರ್ಜಿದಾರರಿಗೆ ಸಮನ್ಸ್ ಜಾರಿಗೊಳಿಸಿದೆ. ಆದರೆ, ಈ ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 188 ಅನ್ವಯಿಸುವುದಿಲ್ಲ. ಆದ್ದರಿಂದ, ವಿಚಾರಣಾ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು ಎಂದು ಕೋರಿದರು.
ಈ ವಾದ ಪುರಸ್ಕರಿಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ಪ್ರಕರಣದ ವಿಚಾರಣೆಗೆ ಅನುಮತಿಸಿದರೆ, ಅದು ಕಾನೂನಿನ ದುರ್ಬಳಕೆಯಾಗಲಿದೆ ಎಂದು ಅಭಿಪ್ರಾಯಪಟ್ಟು ಯತ್ನಾಳ್ ಅವರ ವಿರುದ್ಧದ ಖಾಸಗಿ ದೂರು ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದುಪಡಿಸಿ ಆದೇಶಿಸಿತು.
ಪ್ರಕರಣವೇನು?
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ 2023ರ ಮೇ 2ರಂದು ಗದಗ ನಗರ ಬಿಜೆಪಿ ಅಭ್ಯರ್ಥಿ ಮೆಣಸಿನಕಾಯಿ ಪರ ರೋಡ್ ಶೋ ಆಯೋಜಿಸಲಾಗಿತ್ತು. ಇದಾದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡುತ್ತಾ 2ಎ ಮೀಸಲಾತಿ ವಿಚಾರವಾಗಿ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದ ಯತ್ನಾಳ್, ಎಲ್ಲ ಹಿಂದುಗಳು ಕಾಂಗ್ರೆಸ್ ಪಕ್ಷವನ್ನು ಬಹಿಷ್ಕಾರ ಮಾಡುತ್ತಾರೆ ಎಂದಿದ್ದರು. ಈ ದೃಶ್ಯಗಳು ಯೂಟ್ಯೂಬ್ ಚಾನಲ್‌ಗಳಲ್ಲಿ ಪ್ರಸಾರವಾಗಿ ವೈರಲ್ ಆಗಿತ್ತು. ಈ ಸಂಬಂಧ, ಗದಗ ಮತಕ್ಷೇತ್ರದ ಸಂಚಾರ ವಿಚಕ್ಷಣಾ ದಳದ ಅಧಿಕಾರಿಯಾಗಿದ್ದ ಸಹಾಯಕ ಇಂಜಿನಿಯರ್ ಮಂಜುನಾಥ್, ಗದಗ 1ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿಗೆ ಖಾಸಗಿ ದೂರು ದಾಖಲಿಸಿದ್ದರು. ವಿಚಾರಣಾ ನ್ಯಾಯಾಲಯ ಯತ್ನಾಳ್ ಅವರಿಗೆ 2023ರ ಮೇ 11ರಂದು ಸಮನ್ಸ್ ಜಾರಿಗೊಳಿಸಿತ್ತು.
Related Articles
Thank you for your comment. It is awaiting moderation.
Comments (0)