ಕೆಎಎಸ್ ನೇಮಕಾತಿಗೆ ಹೈಕೋರ್ಟ್ ಅಸ್ತು; ಅನುಮತಿ ಇಲ್ಲದೆ ಫಲಿತಾಂಶ ಪ್ರಕಟಿಸದಂತೆ ಮಧ್ಯಂತರ ಆದೇಶ

ಬೆಂಗಳೂರು: ಸರ್ಕಾರಿ ನೇಮಕಾತಿಯಲ್ಲಿ ಮೀಸಲು ಜಾರಿ ವಿಚಾರದಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂಬ ಕಾರಣಕ್ಕೆ 384 ಕೆಎಎಸ್‌ ಅಧಿಕಾರಿಗಳ ನೇಮಕಾತಿ ಕುರಿತ ಅಧಿಸೂಚನೆ ರದ್ದುಗೊಳಿಸಿದ್ದ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್‌, ಕೆಎಎಸ್‌ ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ಅನುಮತಿ ನೀಡಿದೆ.

ಕಳೆದ ಮೇ 28ರಂದು ಕೆಎಟಿ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ. ಸಿಂಗ್‌ ಹಾಗೂ ನ್ಯಾಯಮೂರ್ತಿ ವೆಂಕಟೇಶ್‌ ಟಿ. ನಾಯಕ್‌ ಅವರಿದ್ದ ವಿಭಾಗೀಯಪೀಠ, ಕೆಎಎಸ್‌ ನೇಮಕ ಪ್ರಕ್ರಿಯೆ ಮುಂದುವರಿಸಲು ಕೆಪಿಎಸ್‌ಸಿಗೆ ಅನುಮತಿ ನೀಡಿತಲ್ಲದೆ, ನ್ಯಾಯಾಲಯದ ಅನುಮತಿ ಇಲ್ಲದೆ ಆಯ್ಕೆ ಪಟ್ಟಿಯ ಫಲಿತಾಂಶ ಪ್ರಕಟಿಸುವಂತಿಲ್ಲ ಎಂದು ಮಧ್ಯಂತರ ಆದೇಶ ಮಾಡಿದೆ.

ಜತೆಗೆ, ಕೆಎಟಿ ಮೊರೆ ಹೋಗಿದ್ದ ಮೂಲ ಅರ್ಜಿದಾರರಾದ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಬಿ.ಎನ್‌. ಮಧು ಹಾಗೂ ಕರ್ನಾಟಕ ಲೋಕಸೇವಾ ಆಯೋಗ ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೊಳಿಸಿ ಮೂರು ವಾರಗಳಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಸೂಚಿಸಿದ ನ್ಯಾಯಪೀಠ, ಪ್ರತಿವಾದಿಗಳು ಸಲ್ಲಿಸುವ ಆಕ್ಷೇಪಣೆಗೆ ಸರ್ಕಾರದ ಪ್ರತಿ ಆಕ್ಷೇಪಣೆಗಳಿದ್ದರೆ ಅದನ್ನು ಎರಡು ವಾರದಲ್ಲಿ ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಐದು ವಾರಗಳ ಕಾಲ ಮುಂದೂಡಿತು.

ಪ್ರಕರಣವೇನು?
ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ 2022ರಲ್ಲಿ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಶೈಕ್ಷಣಿಕ ಸಂಸ್ಥೆಗಳಲ್ಲಿ ಸೀಟು ಹಂಚಿಕೆ ಮೀಸಲು ಮತ್ತು ರಾಜ್ಯ ಸೇವೆಯಲ್ಲಿನೇಮಕ ಹುದ್ದೆಗಳಿಗೆ ಮೀಸಲು) ಸುಗ್ರೀವಾಜ್ಞೆ ಜಾರಿಗೊಳಿಸಿತ್ತು. ಅದರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲಾತಿ ಪ್ರಮಾಣವನ್ನು ಶೇ. 18ರಿಂದ ಶೇ. 24ಕ್ಕೆ ಹೆಚ್ಚಿಸಿ ಸುಗ್ರೀವಾಜ್ಞೆ ಹೊರಡಿಸಿತ್ತು. ಅದನ್ನು ಆಧರಿಸಿ ಕರ್ನಾಟಕ ಸರ್ಕಾರಿ ಸೇವೆಯಲ್ಲಿ ರೋಸ್ಟರ್‌ ಮೀಸಲು ನಿಗದಿಪಡಿಸಿತ್ತು. ಅದನ್ನು ಆಧರಿಸಿ ಕೆಪಿಎಸ್‌ಸಿ 384 ಗ್ರೂಪ್‌ ಎ ಮತ್ತು ಬಿ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿತ್ತು.

ಇದನ್ನು ಪ್ರಶ್ನಿಸಿ ಕೆಎಟಿ ಮೊರೆ ಹೋಗಿದ್ದ ಬಿ.ಎನ್. ಮಧು, ಸುಪ್ರೀಂಕೋರ್ಟ್‌ ಆದೇಶಕ್ಕೆ ವಿರುದ್ಧವಾಗಿ, ರಾಜಕೀಯ ಕಾರಣಕ್ಕಾಗಿ ಸರ್ಕಾರ ಮೀಸಲು ಪ್ರಮಾಣವನ್ನು ಶೇ. 56ಕ್ಕೆ ಹೆಚ್ಚಳ ಮಾಡಿದೆ. ಇದರಿಂದ, ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಕೇವಲ ಶೇ.44 ಅವಕಾಶ ಸಿಗಲಿದ್ದು, ಸಂವಿಧಾನಬದ್ಧವಾಗಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಸಿಗಬೇಕಾದ ಅವಕಾಶ ಕಸಿದುಕೊಂಡಂತಾಗಿದೆ. ಇದು ಸುಪ್ರಿಂಕೋರ್ಟ್‌ನ ಸಂವಿಧಾನ ಪೀಠದ ಆದೇಶದ ಉಲ್ಲಂಘನೆಯಾಗಿದೆ ಎಂದು ಆಕ್ಷೇಪಿಸಿದ್ದರು.

ಕೆಎಟಿ ಆದೇಶ:
ಅರ್ಜಿ ವಿಚಾರಣೆ ನಡೆಸಿದ್ದ ಕೆಎಟಿ ಅಧ್ಯಕ್ಷ ನ್ಯಾಯಮೂರ್ತಿ ಆರ್.ಬಿ. ಬೂದಿಹಾಳ್‌ ಹಾಗೂ ಆಡಳಿತ ಸದಸ್ಯ ರಾಘವೇಂದ್ರ ಔರಾದ್ಕರ್‌ ಅವರಿದ್ದ ಪೀಠ, 2022ರ ಅಕ್ಟೋಬರ್ 23ರಂದು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಹೊರಡಿಸಿದ್ದ ಸುಗ್ರಿವಾಜ್ಞೆಯು ಮೀಸಲು ಪ್ರಮಾಣವನ್ನು ಶೇ. 50ರಿಂದ ಶೇ. 56ಕ್ಕೆ ಹೆಚ್ಚಿಸಿದೆ. ಅದನ್ನು ಆಧರಿಸಿ 2022ರ ಡಿಸೆಂಬರ್‌ನಲ್ಲಿ ಸರ್ಕಾರಿ ಅಧಿಸೂಚನೆ ಪ್ರಕಟಿಸಿ ರೋಸ್ಟರ್‌ ಅಂಕಗಳನ್ನು ನಿಗದಿಪಡಿಸಲಾಗಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ಶಾಸನಸಭೆಯ ಅನುಮತಿ ಪಡೆದಿಲ್ಲ. ಆದ್ದರಿಂದ, ಅದರ ಆಧಾರದಲ್ಲಿ ರಚಿಸಲಾದ 2023ರ ನಿಯಮಾವಳಿ ಊರ್ಜಿತವಲ್ಲ ಎಂದು ಅಭಿಪ್ರಾಯಪಟ್ಟಿತ್ತು.

ಇಂದಿರಾ ಸಾಗ್ನಿ ಹಾಗೂ ಕೇಂದ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರಿಂಕೋರ್ಟ್‌ ನೀಡಿರುವ ತೀರ್ಪಿನಲ್ಲಿ ಒಟ್ಟು ಮೀಸಲು ಪ್ರಮಾಣ ಶೇ. 50 ಮೀರುವಂತಿಲ್ಲವೆಂದು ಮಿತಿ ಹೇರಿದೆ. ಆ ತೀರ್ಪಿನ ನಂತರ ಬೇರಾವುದೇ ತೀರ್ಪಿನಲ್ಲಿ ಸುಪ್ರಿಂಕೋರ್ಟ್‌ ಶೇ. 50ರ ಮಿತಿ ದಾಟುವಂತೆ ಹೇಳಿಲ್ಲ. ಆದರೂ, ಇತರ ಕೆಲ ರಾಜ್ಯಗಳು ಮಾಡಿವೆ ಎಂಬ ಕಾರಣ ಮುಂದಿಟ್ಟುಕೊಂಡು ಮೀಸಲು ಪ್ರಮಾಣ ಹೆಚ್ಚಳಕ್ಕೆ ಯಾವುದೇ ಶಾಸನಾತ್ಮಕ ಬೆಂಬಲ ಇಲ್ಲ ಎಂದಿದ್ದ ಕೆಎಟಿ, ಮೀಸಲು ಪ್ರಮಾಣ ಹೆಚ್ಚಳ ಮಾಡಿ 2022ರ ಡಿಸೆಂಬರ್‌ನಲ್ಲಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ಹಾಗೂ ಆ ಆದೇಶದ ಆಧಾರದಲ್ಲಿ 2024ರ ಫೆಬ್ರವರಿ 26ರಂದು ಕೆಪಿಎಸ್‌ಸಿ ಹೊರಡಿಸಿದ್ದ 384 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನೂ ರದ್ದುಪಡಿಸಿತ್ತು.

Related Articles

Comments (0)

Leave a Comment