ಖಾಸಗಿ ಅಪಾರ್ಟ್ಮೆಂಟ್‌ಗಳಿಂದ ಮಳೆ ನೀರು ಕಾಲುವೆ ಒತ್ತುವರಿ; ಪರ್ಯಾಯ ವ್ಯವಸ್ಥೆಯಾಗದಿದ್ದರೆ ಕಾಲುವೆ ಮರುಸ್ಥಾಪಿಸಲು ಜಿಬಿಎಗೆ ಹೈಕೋರ್ಟ್ ಆದೇಶ

ಬೆಂಗಳೂರು: ನಗರದ ಕನಕಪುರ ರಸ್ತೆಯ ಗುಬ್ಬಲಾಳ ಗ್ರಾಮದ ಬಳಿಯ ಮಂತ್ರಿ ಟ್ರಾಂಕ್ವಿಲ್‌ ಅಪಾರ್ಟ್‌ಮೆಂಟ್‌ ಮತ್ತು ರಾಯಲ್‌ ಪಾಮ್‌ ಅಪಾರ್ಟ್‌ಮೆಂಟ್‌‌ಗಳು ಮಳೆ ನೀರು ಕಾಲುವೆ ಒತ್ತುವರಿ ಮಾಡಿರುವುದು ತಜ್ಞರ ಸಮಿತಿ ವರದಿಯಿಂದ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸುಬ್ರಮಣ್ಯಪುರ ಕೆರೆಗೆ ಮಳೆ ನೀರು ಸರಾಗವಾಗಿ ಹರಿದುಹೋಗಲು ಡೆವಲಪರ್ಸ್‌ ಪರ್ಯಾಯ ವ್ಯವಸ್ಥೆ ಮಾಡಬೇಕು. ಇಲ್ಲವಾದರೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರವು 15 ದಿನಗಳಲ್ಲಿ ಒತ್ತುವರಿ ತೆರವುಗೊಳಿಸಬೇಕು ಎಂದು ಹೈಕೋರ್ಟ್‌ ಆದೇಶಿಸಿದೆ.

ಮಳೆ ನೀರು ಕಾಲುವೆ ಮರುಸ್ಥಾಪನೆ ಹೆಸರಿನಲ್ಲಿ ಒತ್ತುವರಿ ತೆರವುಗೊಳಿಸದಂತೆ ಸಲ್ಲಿಸಿರುವ ಮನವಿ ಪರಿಗಣಿಸಲು ಪಾಲಿಕೆಗೆ ನಿರ್ದೇಶಿಸುವಂತೆ ಕೋರಿ ರಾಯಲ್‌ ಪಾಮ್ಸ್ ನಿವಾಸಿಗಳ ಕಲ್ಯಾಣ ಸಂಘ ಅರ್ಜಿ ಸಲ್ಲಿಸಿತ್ತು. ಜತೆಗೆ, ಮಂತ್ರಿ ಟ್ರಾಂಕ್ವಿಲ್‌ ಅಪಾರ್ಟ್‌ಮೆಂಟ್‌ ಮಾಲೀಕರ ಸಂಘ ಹಾಗೂ ಮಂತ್ರಿ ಡೆವಲಪರ್ಸ್ ಪ್ರೈವೇಟ್‌ ಲಿಮಿಟೆಡ್‌ ಸಹ ಹಿಂದಿನ ಬಿಬಿಎಂಪಿ ನೀಡಿದ್ದ ನೋಟಿಸ್‌ ಪ್ರಶ್ನಿಸಿ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು. ಈ ಎರಡೂ ಅರ್ಜಿಗಳನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಆರ್‌. ನಟರಾಜ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಮೇಲಿನ ಮಾಡಿದೆ.

ಫೆಬ್ರವರಿ 28ರಿಂದ (ಶನಿವಾರ) 15 ದಿನಗಳ ಒಳಗೆ ಅರ್ಜಿದಾರರು ಪರ್ಯಾಯ ಜಾಗವನ್ನು ಪ್ರಸ್ತಾಪಿಸಲು ವಿಫಲವಾದರೆ, ತಜ್ಞರ ಸಮಿತಿಯ ವರದಿಯ ಪ್ರಕಾರ ಜಿಬಿಎ ಒತ್ತುವರಿಗಳನ್ನು ತೆರವುಗೊಳಿಸಿ ಮಳೆ ನೀರು ಕಾಲುವೆಗಳನ್ನು ಪುನಃಸ್ಥಾಪಿಸಬೇಕು ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.

ರಾಜ್ಯ ಸರ್ಕಾರ ರಚಿಸಿದ ತಜ್ಞರ ಸಮಿತಿಯು ಮಳೆನೀರು ಚರಂಡಿಗಳ ಒತ್ತುವರಿಯನ್ನು ದೃಢಪಡಿಸಿ ವರದಿ ನೀಡಿದೆ. ಆದ್ದರಿಂದ, ಬೆಂಗಳೂರು ದಕ್ಷಿಣ ತಾಲೂಕಿನ ಗುಬ್ಬಲಾಳ ಗ್ರಾಮದಲ್ಲಿ ಎರಡು ಅಪಾರ್ಟ್‌ಮೆಂಟ್‌ ಸಂಕೀರ್ಣಗಳಿರುವ ಭೂಮಿಯನ್ನು ಮರು ಪರಿಶೀಲನೆ ನಡೆಸಬೇಕು. ಅರ್ಜಿದಾರರು ಮಳೆ ನೀರು ಕಾಲುವೆಗಳಿಗೆ ಪರ್ಯಾಯ ಜೋಡಣೆಯನ್ನು ಒದಗಿಸಿದರೆ, ಜಿಬಿಎ ಅದನ್ನು ಪರಿಶೀಲಿಸಬೇಕು ಮತ್ತು ಪಕ್ಕದ ಭೂಮಾಲೀಕರಿಗೆ ತೊಂದರೆಯಾಗದಂತೆ ಸುಬ್ರಹ್ಮಣ್ಯಪುರ ಕೆರೆಗೆ ನೀರು ಸರಾಗವಾಗಿ ಹರಿಯುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಗುಬ್ಬಲಾಳ ಗ್ರಾಮದ ಅಚ್ಚುಕಟ್ಟು ಪ್ರದೇಶದಿಂದ ಸುಬ್ರಹ್ಮಣ್ಯಪುರ ಕೆರೆಗೆ ನಾಲ್ಕು ಮಳೆನೀರು ಕಾಲುವೆಗಳಿಂದ ನೀರು ಹರಿದುಬರುತ್ತದೆ. ಸಮಿತಿಯ ನಕ್ಷೆ ಮತ್ತು ಅರ್ಜಿದಾರರು ಸಲ್ಲಿಸಿದ ಕಟ್ಟಡ ಯೋಜನೆಯು ಸರ್ವೆ ಸಂಖ್ಯೆ 7 ಮತ್ತು 11ರ ಮೂಲಕ ಮೂಲ ಮಳೆ ನೀರು ಚರಂಡಿ ಜೋಡಣೆಯನ್ನು ಪುನಃಸ್ಥಾಪಿಸುವುದರಿಂದ ಈ ಆಸ್ತಿಗಳ ಅಭಿವೃದ್ಧಿ ಸೀಮಿತವಾಗಿರುತ್ತದೆ ಎಂದು ತೋರಿಸಿದೆ. ಮಂತ್ರಿ ಟ್ರಾಂಕ್ವಿಲ್‌ ಒಂದು ಚರಂಡಿಯನ್ನು ತನ್ನ ಆಸ್ತಿಯ ಅಂಚಿಗೆ ತಳ್ಳಿ ಎರಡನೇ ಚರಂಡಿಯನ್ನು ನಿರ್ಬಂಧಿಸಿದೆ ಎಂದು ವರದಿಯಲ್ಲಿ ಸೂಚಿಸಲಾಗಿದೆ. ಬಿಡಿಎ ಅಧಿಕಾರಿಗಳ ಜತೆ ಶಾಮೀಲಾಗಿ ಸರ್ವೆ ಸಂಖ್ಯೆ 7ರ ಹಿಂದಿನ ಮಾಲೀಕರು ಸಹ ಕಾಲುವೆ ಜೋಡಣೆಯನ್ನು ಬದಲಾಯಿಸುವಲ್ಲಿ ಪಾತ್ರ ವಹಿಸಿರಬಹುದು ಎಂದು ತಿಳಿಸಿದೆ.

ಈ ಜಲಮೂಲಗಳ ಅಪಧಮನಿಗಳನ್ನು ಶುದ್ಧವಾಗಿಡಲು, ಬ್ರಿಟಿಷರು ಅವುಗಳನ್ನು ಮೌಲ್ಯಮಾಪನದಿಂದ ಹೊರಗಿಟ್ಟರು ಮತ್ತು ಅವುಗಳನ್ನು ಮುಂದಿನ ಪೀಳಿಗೆಗೆ ನಿರ್ವಹಿಸುವಂತೆ ನೀಲನಕ್ಷೆಯನ್ನು ನಮಗೆ ನೀಡಿದರು. ಅದು 100 ವರ್ಷಗಳಿಗೂ ಅಧಿಕ ಕಾಲ ಸಮೀಕ್ಷೆ ಮತ್ತು ಕಂದಾಯ ಆಡಳಿತಕ್ಕೆ ದಾರಿದೀಪವಾಗಿ ಮುಂದುವರಿದಿರುವ ದಾಖಲೆಯನ್ನು ನಮಗೆ ನೀಡಿದೆ. ತಾಂತ್ರಿಕ ಪ್ರಗತಿಯ ಹೊರತಾಗಿಯೂ, ಕರ್ನಾಟಕ ರಾಜ್ಯದಲ್ಲಿ ಜಲಮೂಲಗಳ ಬಗ್ಗೆ ಸಾಮಾನ್ಯ ಸಮೀಕ್ಷೆ ನಡೆಸಲು ನಮಗೆ ಸಾಧ್ಯವಾಗದಿರುವುದು ದುರದೃಷ್ಟಕರ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಬೆಂಗಳೂರಿನ ಪ್ರವಾಹ ಸಮಸ್ಯೆಗಳನ್ನು ದೀರ್ಘ ಕಾಲದವರೆಗೆ ನಿರ್ಲಕ್ಷಿಸಲಾಗಿದೆ. ವಿಶೇಷವಾಗಿ ಪ್ರಭಾವಿಗಳು ವಾಸಿಸುವ ಒಂದು ತಗ್ಗು ಪ್ರದೇಶವು ಮುಳುಗುವವರೆಗೆ ಅದರ ಬಗ್ಗೆ ಗಮನಹರಿಸುವುದಿಲ್ಲ. ಇಂತಹ ಸಂದರ್ಭಗಳಲ್ಲಿ, ಮಳೆ ನೀರು ಕಾಲುವೆ ಒತ್ತುವರಿಗಳನ್ನು ಸಮಿತಿ ದೃಢಪಡಿಸಿರುವುದರಿಂದ ಅದರ ವಿರುದ್ಧ ಅರ್ಜಿದಾರರು ಸಲ್ಲಿಸಿದ ಪ್ರತಿಕ್ರಿಯೆಗಳನ್ನು ಸ್ಥಳೀಯ ಪ್ರಾಧಿಕಾರ ಪರಿಗಣಿಸುವ ಅಗತ್ಯವಿಲ್ಲ ಎಂದೂ ನ್ಯಾಯಾಲಯ ಹೇಳಿದೆ.

 

Related Articles

Comments (0)

Leave a Comment