ಪ್ರಚೋದನಕಾರಿ ಭಾಷಣ; ಈಶ್ವರಪ್ಪ ವಿರುದ್ಧ ಬಲವಂತದ ಕ್ರಮ ಬೇಡವೆಂದ ಹೈಕೋರ್ಟ್

ಬೆಂಗಳೂರು: ಸರ್ಕಾರದ ವಿವಿಧ ವಸತಿ ಯೋಜನೆಗಳಲ್ಲಿ ಮುಸ್ಲಿಮರಿಗೆ ಶೇ. 15 ಮೀಸಲಾತಿ ನಿಗದಿಪಡಿಸಿದ್ದನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಮಧ್ಯಂತರ ಆದೇಶ ಮಾಡಿದೆ.

ಶಿವಮೊಗ್ಗ ನಗರದ ಕೋಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಹಾಗೂ ಅದರ ಸಂಬಂಧ ಶಿವಮೊಗ್ಗ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ರದ್ದು ಕೋರಿ ಕೆ.ಎಸ್. ಈಶ್ವರಪ್ಪ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ.ಐ ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಬುಧವಾರ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಪ್ರಕರಣ ಸಂಬಂಧ ಪೊಲೀಸರು ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ಜರಗಿಸಬಾರದು. ಆದರೆ, ಅರ್ಜಿದಾರರು ತನಿಖೆಗೆ ಸಹಕರಿಸಬೇಕು ಎಂದು ನಿರ್ದೇಶಿಸಿತಲ್ಲದೆ, ಅರ್ಜಿ ಸಂಬಂಧ ಸರ್ಕಾರ ಹಾಗೂ ದೂರುದಾರ ಕೋಟೆ ಪೊಲೀಸ್ ಠಾಣೆಯ ಅಧಿಕಾರಿ ಸಂತೋಷ್ ಎಸ್. ಭಾಗೋಜಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.

ಪ್ರಕರಣವೇನು?
ವಸತಿ ಯೋಜನೆಗಳಲ್ಲಿ ಮುಸ್ಲಿಮರಿಗೆ ಶೇ. 15 ಮೀಸಲಾತಿ ನಿಗದಿಪಡಿಸಿದ ಸರ್ಕಾರದ ಕ್ರಮ ಖಂಡಿಸಿ ರಾಷ್ಟ್ರ ಭಕ್ತರ ಬಳಗದ ವತಿಯಿಂದ ಶಿವಮೊಗ್ಗದ ಶಿವಪ್ಪ ನಾಯಕ ಸರ್ಕಲ್ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಈಶ್ವರಪ್ಪ ಅವರು ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ್ದರು ಎಂದು ಕೋಟೆ ಪೊಲೀಸ್ ಠಾಣೆಯ ಅಧಿಕಾರಿ ಸಂತೋಷ್ ಭಾಗೋಜಿ ದೂರು ಸಲ್ಲಿಸಿದ್ದರು. ಇದನ್ನು ಆಧರಿಸಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು. ಇದರಿಂದ, ಪ್ರಕರಣ ರದ್ದು ಕೋರಿ ಈಶ್ವರಪ್ಪ ಹೈಕೋರ್ಟ್ ಮೊರೆ ಹೋಗಿದ್ದಾರೆ.

Related Articles

Comments (0)

Leave a Comment