ಲೋಕಾ ದಾಳಿ ಹೆಸರಿನಲ್ಲಿ ಹಣ ವಸೂಲಿ; ಶ್ರೀನಾಥ್ ಜೋಶಿಗೆ ಹೊಸದಾಗಿ ನೋಟಿಸ್ ನೀಡಲು ಲೋಕಾಯುಕ್ತ ಪೊಲೀಸರಿಗೆ ಹೈ ಸೂಚನೆ

ಬೆಂಗಳೂರು: ಲೋಕಾಯುಕ್ತ ದಾಳಿ ಹೆಸರಿನಲ್ಲಿ ಬೆದರಿಸಿ ಸರ್ಕಾರಿ ಅಧಿಕಾರಿಗಳಿಂದ ಹಣ ಸುಲಿಗೆ ಮಾಡಿದ‌‌ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಸೂಚಿಸಿ ಐಪಿಎಸ್‌ ಅಧಿಕಾರಿ ಶ್ರೀನಾಥ್ ಜೋಶಿಗೆ (ಲೋಕಾಯುಕ್ತ ಮಾಜಿ ಎಸ್‌ಪಿ) ಹೊಸದಾಗಿ ನೋಟಿಸ್‌ ಜಾರಿಗೊಳಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಹೈಕೊರ್ಟ್‌ ಸೂಚಿಸಿದೆ.

ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಲೋಕಾಯುಕ್ತ ಪೊಲೀಸರು ನೀಡಿದ್ದ ನೋಟಿಸ್ ರದ್ದು ಕೋರಿ ಆರೋಪಿ ಶ್ರೀನಾಥ್ ಜೋಶಿ‌ ಸಲ್ಲಿಸಿರುವ ಅರ್ಜಿ‌ಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಆರ್‌. ಕೃಷ್ಣ ಕುಮಾರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಸೂಚನೆ ನೀಡಿದೆ.

ಲೋಕಾಯುಕ್ತ ಪೊಲೀಸರು ಅರ್ಜಿದಾರರಿಗೆ ಜೂನ್ 15ರಂದು ನೋಟಿಸ್‌ ಜಾರಿಗೊಳಿಸಿ, ಒಂದು ದಿನದಲ್ಲಿ (ಜೂನ್ 16ರ ಒಳಗೆ) ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಆದರೆ, ವಿಚಾರಣೆಗೆ ಹಾಜರಾಗಲು ನಿಗದಿಪಡಿಸಿದ್ದ ಸಮಯ ಮುಗಿದಿದೆ. ಇದರಿಂದ, ಲೋಕಾಯುಕ್ತ ಪೊಲೀಸರು ಹೊಸದಾಗಿ ಜೋಶಿಗೆ ನೋಟಿಸ್‌ ಜಾರಿ ಮಾಡಬೇಕು. ನೋಟಿಸ್‌ ನೀಡಿದ ನಂತರ 10 ದಿನದಲ್ಲಿ ಜೋಶಿ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು ಎಂದು ಸೂಚಿಸಿದ ನ್ಯಾಯಪೀಠ ಅರ್ಜಿ ಇತ್ಯರ್ಥಪಡಿಸಿತು.

ಜತೆಗೆ, ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಜೋಶಿ ಅವರು ಅರ್ಜಿ ಸಲ್ಲಿಸಿದರೆ, ಅದನ್ನು ಕಾನೂನು ಪ್ರಕಾರ ಪರಿಗಣಿಸಬೇಕು ಎಂದು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ನ್ಯಾಯಪೀಠ ಸೂಚಿಸಿತು.

ಇದಕ್ಕೂ ಮುನ್ನ ಲೋಕಾಯುಕ್ತ ಪೊಲೀಸರ ಪರ ವಕೀಲರು ವಾದ ಮಂಡಿಸಿ, ವಿಚಾರಣೆಗೆ ಹಾಜರಾಗಲು ಸೂಚಿಸಿ 2025ರ ಜೂನ್ 15ರಂದು ಅರ್ಜಿದಾರರಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಆದರೆ, ಜೋಶಿ ಅವರು ವಿಚಾರಣೆಗೆ ಹಾಜರಾಗದೇ ನಾಪತ್ತೆಯಾಗಿದ್ದಾರೆ. ಪ್ರಕರಣ ಸಂಬಂಧ ಜೋಶಿ ಅವರ ಹೇಳಿಕೆ ಪಡೆದುಕೊಳ್ಳುವ ಅವಶ್ಯಕತೆಯಿದೆ. ಇದರಿಂದ, ಅವರ ವಿರುದ್ಧದ ನೋಟಿಸ್‌ಗೆ ನೀಡಿರುವ ತಡೆಯಾಜ್ಞೆ ತೆರವುಗೊಳಿಸಬೇಕು ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಆ ಮನವಿಯನ್ನು ನ್ಯಾಯಪೀಠ ಪರಿಗಣಿಸಿತು.

ಇದೇ ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ರದ್ದು ಕೋರಿ ಮತ್ತೊಬ್ಬ ಆರೋಪಿ ಮಾಜಿ ಹೆಡ್ ಕಾನ್‌ಸ್ಟೆಬಲ್ ನಿಂಗಪ್ಪ ಸಾವಂತ್ ಸಲ್ಲಿಸಿರುವ ಅರ್ಜಿ ಕುರಿತ ಆದೇಶವನ್ನು ನ್ಯಾಯಪೀಠ ಕಾಯ್ದಿರಿಸಿದೆ.

Related Articles

Comments (0)

Leave a Comment