ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ ಪ್ರಶ್ನಿಸಿದ ಪಿಐಎಲ್; ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
- by Jagan Ramesh
- December 2, 2025
- 19 Views
ಬೆಂಗಳೂರು: ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ-2025ರ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ-2024 ಹಾಗೂ ಗ್ರೇಟರ್ ಬೆಂಗಳೂರು ಆಡಳಿತ (ತಿದ್ದುಪಡಿ) ಅಧಿನಿಯಮ-2025 ಅನ್ನು ಅಸಂವಿಧಾನಿಕವೆಂದು ಘೋಷಿಸುವಂತೆ ಕೋರಿ ಪತ್ರಕರ್ತ ಹಾಗೂ ರಂಗ ಕಲಾವಿದ ಪ್ರಕಾಶ್ ಬೆಳವಾಡಿ ಮತ್ತಿತರರು ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಇದೇ ವಿಷಯಕ್ಕೆ ಸಂಬಂಧಿಸಿದ ಮತ್ತೊಂದು ಅರ್ಜಿಯು 2027ರ ಜನವರಿ 7ಕ್ಕೆ ವಿಚಾರಣೆಗೆ ನಿಗದಿಯಾಗಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿಯಲ್ಲಿ ಪ್ರತಿವಾದಿಗಳಾದ ರಾಜ್ಯ ಸರ್ಕಾರ, ನಗರಾಭಿವೃದ್ಧಿ ಇಲಾಖೆ, ಜಿಬಿಎಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಜನವರಿ 7ಕ್ಕೆ ಮುಂದೂಡಿತು.
ಅರ್ಜಿದಾರರ ಮನವಿ ಏನು?
ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ-2024 ಹಾಗೂ ಗ್ರೇಟರ್ ಬೆಂಗಳೂರು ಆಡಳಿತ (ತಿದ್ದುಪಡಿ) ಅಧಿನಿಯಮ-2025 ಅನ್ನು ಅಸಾಂವಿಧಾನಿಕವೆಂದು ಘೋಷಿಸಬೇಕು. ಈ ಕಾಯ್ದೆ ಆಧರಿಸಿ ಹೊರಡಿಸಲಾದ ಎಲ್ಲ ಅಧಿಸೂಚನೆಗಳನ್ನು ರದ್ದುಪಡಿಸಬೇಕು. ಕಾಯ್ದೆಯ ಸಾಂವಿಧಾನಿಕ ಮಾನ್ಯತೆ ನಿರ್ಧಾರವಾಗುವ ತನಕ ಕಾಯ್ದೆಯಡಿ ಯಾವುದೇ ಪ್ರಾಧಿಕಾರ, ಸಮಿತಿಗಳನ್ನು ರಚಿಸದಂತೆ ರಾಜ್ಯ ಸರ್ಕಾರವನ್ನು ನಿರ್ಬಂಧಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಜತೆಗೆ, ಸುರಂಗ ರಸ್ತೆಗಳು, ಬೆಂಗಳೂರು ಬ್ಯುಸಿನೆಸ್ ಕಾರಿಡಾರ್, ಪೆರಿಫೆರಲ್ ರಿಂಗ್ ರಸ್ತೆ, ಫ್ಲೈವರ್ಗಳು, ಡಬಲ್ ಡೆಕ್ಕರ್ ಫ್ಲೈವರ್ಗಳು, ಎಲಿವೇಟೆಡ್ ಕಾರಿಡಾರ್ಗಳು, ಕೆರೆ ಮತ್ತು ರಾಜಕಾಲುವೆ ಬಫರ್ ವಲಯಗಳಲ್ಲಿನ ರಸ್ತೆಗಳ ಸಂಬಂಧ ಯೋಜನಾ ಅನುಮೋದನೆಗಳು, ಭೂಸ್ವಾಧೀನ, ಮರ ಕಡಿಯುವುದು ಸೇರಿ ಯಾವುದೇ ಕಾಮಗಾರಿಗಳಿಗೆ ಮುಂದಾಗಂದಂತೆ ಸರ್ಕಾರ, ಜಿಬಿಎಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.
Related Articles
Thank you for your comment. It is awaiting moderation.


Comments (0)