ಕೇತಗಾನಹಳ್ಳಿ ಗ್ರಾಮದಲ್ಲಿ ರೈತರನ್ನು ಒಕ್ಕಲೆಬ್ಬಿಸುತ್ತಿರುವ ಕ್ರಮ ಪ್ರಶ್ನಿಸಿ ಪಿಐಎಲ್; ಅರಣ್ಯ ಇಲಾಖೆಗೆ ಹೈಕೋರ್ಟ್ ನೋಟಿಸ್

ಬೆಂಗಳೂರು: ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಕೇತಗಾನಹಳ್ಳಿ ಗ್ರಾಮದಲ್ಲಿ ಸ್ಥಳೀಯ ರೈತರಿಗೆ 1999ರಲ್ಲಿ ಮಂಜೂರು ಮಾಡಲಾಗಿರುವ 105 ಎಕರೆ ಜಮೀನಿಂದ ಭೂಮಾಲೀಕ ರೈತರನ್ನು ಒಕ್ಕಲೆಬ್ಬಿಸುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ಅರಣ್ಯ ಇಲಾಖೆಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಭೂಮಾಲೀಕ ರೈತರ ಪರವಾಗಿ ಶ್ರೀನಿವಾಸಪುರ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಡಿ.ವಿ. ಅಶೋಕ್ ಹಾಗೂ ಕೆಎಂಎಫ್ ನಿರ್ದೇಶಕ ಕೆ.ಕೆ. ಮಂಜುನಾಥ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಪ್ರತಿವಾದಿಗಳಾದ ಅರಣ್ಯ ಇಲಾಖೆ ಕಾರ್ಯದರ್ಶಿ, ಕೋಲಾರ ವಿಭಾಗದ ಅರಣ್ಯ ಉಪ ಸಂರಕ್ಷಣಾಧಿಕಾರಿ, ಶ್ರೀನಿವಾಸಪುರ ವಲಯ ಅರಣ್ಯ ಸಂರಕ್ಷಣಾಧಿಕಾರಿ, ಶ್ರೀನಿವಾಸಪುರ ತಹಶೀಲ್ದಾರ್‌ಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಡಿಸೆಂಬರ್ 9ಕ್ಕೆ ಮುಂದೂಡಿತು.

ಅರ್ಜಿದಾರರ ಮನವಿ ಏನು?
ಕೇತಗಾನಹಳ್ಳಿಯ ಸರ್ವೆ ನಂಬರ್ 91ರ ಒಟ್ಟು 257 ಎಕರೆ 33 ಗುಂಟೆ ಜಮೀನಿನಲ್ಲಿ 105 ಎಕರೆ 35 ಗುಂಟೆ ಜಮೀನನ್ನು ಸ್ಥಳೀಯ ಭೂರಹಿತ ರೈತರಿಗೆ 1999ರಲ್ಲಿ ಮಂಜೂರು ಮಾಡಲಾಗಿತ್ತು. ಕಂದಾಯ ದಾಖಲೆಗಳಲ್ಲಿ ರೈತರ ಹೆಸರು ಸಹ ನಮೂದಾಗಿ, ಈವರೆಗೆ ಅವರು ಜಮೀನನನ್ನು ಕೃಷಿ ಚಟುವಟಿಕೆ ಉಪಯೋಗಿಸಿಕೊಂಡು ಬಂದಿದ್ದಾರೆ. ಆದರೆ, ಈಗ ಅರಣ್ಯ ಅಧಿಕಾರಿಗಳು ಯಾವುದೇ ನೋಟಿಸ್ ನೀಡದೆ ಏಕಾಏಕಿ ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿದ್ದು, ಬಲವಂತವಾಗಿ ಜಮೀನುಗಳಿಗೆ ನುಗ್ಗಿ ಬೆಳೆಯನ್ನು ಕಿತ್ತು ಹಾಕುತ್ತಿದ್ದಾರೆ. ಜಮೀನಿನಲ್ಲಿರುವ ಗಿಡ-ಮರಗಳನ್ನು ನಾಶಪಡಿಸುತ್ತಿದ್ದಾರೆ. ಆದ್ದರಿಂದ, ರೈತರಿಗೆ ಕಿರುಕುಳ ನೀಡದಂತೆ ಅರಣ್ಯ ಇಲಾಖೆಗೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

Related Articles

Comments (0)

Leave a Comment