ಶಾಸಕ ಕೆ.ಸಿ. ವೀರೇಂದ್ರ ಬಂಧನ ಪ್ರಶ್ನಿಸಿ ಪತ್ನಿಯಿಂದ ಅರ್ಜಿ; ಇಡಿಗೆ ನೋಟಿಸ್ ಜಾರಿಗೊಳಿಸಿದ ಹೈಕೋರ್ಟ್
- by Jagan Ramesh
- September 3, 2025
- 72 Views

ಬೆಂಗಳೂರು: ಆನ್‌ಲೈನ್ ಮತ್ತು ಆಫ್‌ಲೈನ್ ಅಕ್ರಮ ಬೆಟ್ಟಿಂಗ್ ಆರೋಪಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಶಾಸಕ ಕೆ.ಸಿ.ವೀರೇಂದ್ರ ಅವರನ್ನು ಹಣ ಅಕ್ರಮ ವರ್ಗಾವಣೆ ತಡೆ (ಪಿಎಂಎಲ್) ಕಾಯ್ದೆಯಡಿ ಬಂಧಿಸಿರುವ ಕ್ರಮವನ್ನು ಕಾನೂನುಬಾಹಿರವೆಂದು ಘೋಷಿಸುವಂತೆ ಕೋರಿ ವೀರೇಂದ್ರ ಪತ್ನಿ ಆರ್.ಡಿ. ಚೈತ್ರಾ ಸಲ್ಲಿಸಿರುವ ಅರ್ಜಿ ಸಂಬಂಧ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ವೀರೇಂದ್ರ ಅವರ ಬಂಧನವನ್ನು ಕಾನೂನುಬಾಹಿರವೆಂದು ಘೋಷಿಸಿ, ತಕ್ಷಣವೇ ಅವರನ್ನು ಬಿಡುಗಡೆಗೊಳಿಸಲು ಆದೇಶಿಸುವಂತೆ ಕೋರಿ ಚೈತ್ರಾ ಸಲ್ಲಿಸಿರುವ ರಿಟ್ ಅರ್ಜಿ ಕುರಿತು ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಅರ್ಜಿದಾರೆ ಚೈತ್ರಾ ಪರ ವಕೀಲರು ವಾದ ಮಂಡಿಸಿ, ಯಾವುದೇ ಅನುಸೂಚಿತ ಪ್ರಕರಣವಿಲ್ಲದಿದ್ದರೂ ವೀರೇಂದ್ರ ಅವರನ್ನು ಬಂಧಿಸಲಾಗಿದೆ. ಯಾವ ಆಧಾರದಲ್ಲಿ ಬಂಧಿಸಲಾಗುತ್ತಿದೆ ಎಂಬುದಕ್ಕೆ ಸೂಕ್ತ ಕಾರಣಗಳನ್ನು ನೀಡಿಲ್ಲ. ಈಗಾಗಲೇ ಮುಕ್ತಾಯಗೊಂಡಿರುವ ಕೆಲ ಹಳೇ ಪ್ರಕರಣಗಳನ್ನು ಉಲ್ಲೇಖಿಸಲಾಗಿದ್ದು, ಮತ್ತೆ ಕೆಲ ಪ್ರಕರಣಗಳಲ್ಲಿ ವೀರೇಂದ್ರ ಅವರ ವಿರುದ್ಧ ಯಾವುದೇ ನೇರ ಸಾಕ್ಷ್ಯಾಧಾರಗಳಿಲ್ಲ. ವೀರೇಂದ್ರ ಅವರ ಬಂಧನವೇ ಕಾನೂನುಬಾಹಿರವಾಗಿದೆ ಎಂದು ಆಕ್ಷೇಪಿಸಿದರು.
ಜಾರಿ ನಿರ್ದೇಶನಾಲಯದ ಪರವಾಗಿ ಹಾಜರಿದ್ದ ವಕೀಲ ಮಧುಕರ ದೇಶಪಾಂಡೆ ಅವರು, ಬಂಧನಕ್ಕೆ ಸಾಕಷ್ಟು ಆಧಾರಗಳಿವೆಯೇ ಎಂಬುದನ್ನು ಪರಿಶೀಲಿಸಿದ ನಂತರವೇ ವೀರೇಂದ್ರ ಅವರನ್ನು ವಿಚಾರಣಾ ನ್ಯಾಯಾಲಯ ಇಡಿ ವಶಕ್ಕೆ ನೀಡಿದೆ. ವೀರೇಂದ್ರ ಅವರ ಕಸ್ಟಡಿ ಗುರುವಾರ ಮುಕ್ತಾಯವಾಗಲಿದ್ದು, ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿದರು.
ಇದನ್ನು ಪರಿಗಣಿಸಿದ ನ್ಯಾಯಪೀಠ, ಪ್ರತಿವಾದಿ ಇಡಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಸೆಪ್ಟೆಂಬರ್ 8ಕ್ಕೆ ಮುಂದೂಡಿತು.
ಅರ್ಜಿದಾರರ ಆಕ್ಷೇಪವೇನು?
ಆನ್‌ಲೈನ್ ಹಾಗೂ ಆಫ್‌ಲೈನ್ ಅಕ್ರಮ ಗೇಮಿಂಗ್ ಪ್ರಕರಣ ಸಂಬಂಧ 2022ರ ಜುಲೈ 6ರಂದು ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (First Information Report) ದಾಖಲಾಗಿತ್ತು. ಅದರಲ್ಲಿ ಯಾರೊಬ್ಬರ ಹೆಸರೂ ಉಲ್ಲೇಖವಾಗಿರಲಿಲ್ಲ. ಈ ಎಫ್‌ಐಆರ್ ಆಧರಿಸಿ ಇಡಿ 2025ರ ಆಗಸ್ಟ್ 21ರಂದು ಇಸಿಐಆರ್ (Enforcement Case Information Report) ದಾಖಲಿಸಿತ್ತು. ಆಗಸ್ಟ್ 23ರಂದು ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿ ಚಿತ್ರದುರ್ಗದ ಶಾಸಕರಾದ ನನ್ನ ಪತಿ ಕೆ.ಸಿ. ವಿರೇಂದ್ರ ಅವರನ್ನು ಬಂಧಿಸಲಾಗಿದೆ. ದುರುದ್ದೇಶದಿಂದ ಅವರನ್ನು ಗುರಿಯಾಗಿಸಿ ಇಡಿ ಬಂಧಿಸಲಾಗಿದೆ ಎಂದು ಚೈತ್ರಾ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಜತೆಗೆ, 10-15 ವರ್ಷಗಳ ಹಿಂದೆ ದಾಖಲಾಗಿದ್ದ ಕ್ರಿಕೆಟ್ ಬೆಟ್ಟಿಂಗ್ ಮತ್ತು ಜೂಜಾಟ ಪ್ರಕರಣ ಆಧರಿಸಿ ಇಡಿ ಈಗ ತನಿಖೆ ನಡೆಸುತ್ತಿದೆ. ಈ ಪ್ರಕರಣ ಈಗಾಗಲೇ ಮುಕ್ತಾಯಗೊಂಡಿದೆ. ಯಾವುದೇ ಅನುಸೂಚಿತ ಪ್ರಕರಣ ಇಲ್ಲದಿದ್ದರೂ ವಿರೇಂದ್ರ ಅವರನ್ನು ಬಂಧಿಸಲಾಗಿದೆ. ಚುನಾವಣೆಯ ವೇಳೆ ನನ್ನ ಪತಿ ಅವರ ಆಸ್ತಿ ವಿವರ ಸಲ್ಲಿಸಿದ್ದಾರೆ. ಲೋಕಾಯುಕ್ತರಿಗೂ ಕಾಲಕಾಲಕ್ಕೆ ಆಸ್ತಿ ವಿವರ ಸಲ್ಲಿಸಿದ್ದಾರೆ. ಅವರ ಬಂಧನಕ್ಕೆ ಸೂಕ್ತ ಕಾರಣಗಳನ್ನು ಇಡಿ ನೀಡಿಲ್ಲ. ಇದು ಸಂವಿಧಾನದ ಪರಿಚ್ಛೇದ 19 ಮತ್ತು 21ರ ಅಡಿ ದೊರೆತಿರುವ ಸ್ವಾತಂತ್ರ್ಯ ಮತ್ತು ಜೀವಿಸುವ ಹಕ್ಕಿನ ಉಲ್ಲಂಘನೆಯಾಗಿದೆ. ಆದ್ದರಿಂದ, ವಿರೇಂದ್ರ ಅವರ ಬಂಧನವನ್ನು ಅಕ್ರಮ ಎಂದು ಘೋಷಿಸಿ, ಕೂಡಲೇ ಬಿಡುಗಡೆ ಮಾಡಲು ಇಡಿಗೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
Related Articles
Thank you for your comment. It is awaiting moderation.
Comments (0)