ಮುಡಾ ಹಗರಣದ ಮೇಲ್ಮನವಿ; ಸಿಎಂ ಪತ್ನಿ, ಬಾವಮೈದುನ, ಡಿಜಿಪಿಗೆ ಹೈಕೋರ್ಟ್ ನೋಟಿಸ್
- by Ramya B T
- July 10, 2025
- 95 Views

ಬೆಂಗಳೂರು: ಮುಡಾ ಹಗರಣದ ಮೇಲ್ಮನವಿಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಮತ್ತವರ ಸಹೋದರ ಬಿ.ಎಂ. ಮಲ್ಲಿಕಾರ್ಜುನ ಸ್ವಾಮಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಮೈಸೂರಿನ ವಿಜಯನಗರ ಪೊಲೀಸ್ ಠಾಣಾಧಿಕಾರಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಪ್ರಕರಣದ ಮೂಲ ದೂರುದಾರ ಸ್ನೇಹಮಯಿ ಕೃಷ್ಣ, ಸಿಎಂ ಸಿದ್ದರಾಮಯ್ಯ ಮತ್ತು ವಿವಾದಿತ ಜಮೀನಿನ ಮೂಲ ಮಾಲೀಕ ಜೆ. ದೇವರಾಜು ಸಲ್ಲಿಸಿರುವ ಮೇಲ್ಮನವಿಗಳನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ. ಕಾಮೇಶ್ವರ ರಾವ್ ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಸ್ನೇಹಮಯಿ ಕೃಷ್ಣ ಪರ ಹಿರಿಯ ವಕೀಲ ಕೆ.ಜಿ. ರಾಘವನ್ ಪ್ರಕರಣದ ಬೆಳವಣಿಗೆಯ ಬಗ್ಗೆ ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.
ಇದನ್ನು ಆಲಿಸಿದ ನ್ಯಾಯಪೀಠ, ಸಿಬಿಐ ತನಿಖೆ ಕೋರಿ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಮೇಲ್ಮನವಿಯಲ್ಲಿ ಬಿ.ಎಂ. ಪಾರ್ವತಿ ಅವರಿಗೆ ನೋಟಿಸ್ ಜಾರಿಯಾಗಿಲ್ಲ. ಜೆ. ದೇವರಾಜು ಸಲ್ಲಿಸಿರುವ ಮತ್ತೊಂದು ಮೇಲ್ಮನವಿಯಲ್ಲಿ ಪಾರ್ವತಿ, ಮಲ್ಲಿಕಾರ್ಜುನ ಸ್ವಾಮಿ, ಪೊಲೀಸ್ ಮಹಾನಿರ್ದೇಶಕರು ಹಾಗೂ ಮೈಸೂರಿನ ವಿಜಯನಗರ ಠಾಣಾಧಿಕಾರಿಗೆ ನೋಟಿಸ್ ಜಾರಿಯಾಗಿಲ್ಲ. ಆದ್ದರಿಂದ, ಎಲ್ಲರಿಗೂ ನೋಟಿಸ್ ಮತ್ತು ಹ್ಯಾಂಡ್ ಸಮನ್ಸ್ ಜಾರಿ ಮಾಡುವಂತೆ ನಿರ್ದೇಶಿಸಿದ ನ್ಯಾಯಪೀಠ ವಿಚಾರಣೆಯನ್ನು ಸೆಪ್ಟೆಂಬರ್ 4ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ:
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಅಕ್ರಮ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿ ರಾಜ್ಯಪಾಲರು ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ 2024ರ ಸೆಪ್ಟೆಂಬರ್ 24ರಂದು ಎತ್ತಿಹಿಡಿದಿತ್ತು. ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.
ಮತ್ತೊಂದೆಡೆ, ಮುಡಾ ಹಗರಣಕ್ಕೂ, ತಮಗೂ ಸಂಬಂಧವಿಲ್ಲದಿದ್ದರೂ, ಅನಗತ್ಯವಾಗಿ ತಮ್ಮನ್ನು ಪ್ರಕರಣದಲ್ಲಿ ಎಳೆದು ತರಲಾಗಿದೆ. ರಾಜ್ಯಪಾಲರ ಕ್ರಮ ಎತ್ತಿ ಹಿಡಿದ ಆದೇಶದಲ್ಲಿ ಏಕಸದಸ್ಯ ನ್ಯಾಯಪೀಠ ವ್ಯಕ್ತಪಡಿಸಿದ್ದ ಕಟು ಅಭಿಪ್ರಾಯಗಳಿಂದ ತಾವು ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣ ಎದುರಿಸುವಂತಾಗಿದೆ ಎಂದು ಆಕ್ಷೇಪಿಸಿ ವಿವಾದಿತ ಜಮೀನಿನ ಮೂಲ ಮಾಲೀಕ ಜೆ. ದೇವರಾಜು ಸಹ ಪ್ರತ್ಯೇಕ ಮೇಲ್ಮನವಿ ಸಲ್ಲಿಸಿದ್ದಾರೆ.
ಈ ಮಧ್ಯೆ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಮತ್ತೊಂದು ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿತ್ತು. ಇದರಿಂದ, ಸ್ನೇಹಮಯಿ ಕೃಷ್ಣ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಎಲ್ಲ ಮೇಲ್ಮನವಿಗಳನ್ನು ನ್ಯಾಯಾಲಯ ಒಟ್ಟಾಗಿ ವಿಚಾರಣೆ ನಡೆಸಲಿದೆ.
Related Articles
Thank you for your comment. It is awaiting moderation.
Comments (0)