ಅದಿರಿಗೆ ಸರಾಸರಿ ಮಾರಾಟ ದರ ನಿಗದಿಗೆ ಕೋರಿ ಅರ್ಜಿ; ಸರ್ಕಾರಗಳಿಗೆ ಹೈಕೋರ್ಟ್ ನೋಟಿಸ್
- by Jagan Ramesh
- December 24, 2024
- 275 Views
ಬೆಂಗಳೂರು: ಪ್ರತಿಯೊಂದು ದರ್ಜೆಯ ಕಬ್ಬಿಣದ ಅದಿರಿಗೆ ಸರಾಸರಿ ಮಾರಾಟ ದರ ನಿಗದಿಪಡಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನಲ್ಲಿ ಗಣಿ ಗುತ್ತಿಗೆ ಹೊಂದಿರುವ ಬಿಕೆಜಿ ಮೈನಿಂಗ್ ಪ್ರೈವೇಟ್ ಲಿಮಿಟೆಡ್ ಹಾಗೂ ನದೀಮ್ ಮಿನರಲ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗಳು ಸಲ್ಲಿಸಿರುವ ಪ್ರತ್ಯೇಕ ರಿಟ್ ಅರ್ಜಿಗಳನ್ನು ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಹಾಗೂ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ರಜಾ ಕಾಲದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಅರ್ಜಿ ಕುರಿತು ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ಗಣಿ ಸಚಿವಾಲಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕೈಗಾರಿಕಾ ಇಲಾಖೆ, ಇಂಡಿಯನ್ ಬ್ಯೂರೋ ಆಫ್ ಮೈನ್ಸ್, ಪ್ರಾದೇಶಿಕ ಗಣಿ ನಿಯಂತ್ರಕರಿಗೆ ನೋಟಿಸ್ ಜಾರಿಗೊಳಿಸಿತು. ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಪ್ರತಿವಾದಿಗಳಿಗೆ ನಿರ್ದೇಶಿಸಿ, ವಿಚಾರಣೆಯನ್ನು ಜನವರಿ 9ಕ್ಕೆ ಮುಂದೂಡಿತು.
ಅರ್ಜಿಯಲ್ಲೇನಿದೆ?
ಕೆಳ ದರ್ಜೆಯ (Fe 35%) ಕಬ್ಬಿಣದ ಅದಿರಿಗೆ ಸರಾಸರಿ ಮಾರಾಟ ದರ ನಿಗದಿಪಡಿಸಲಾಗಿಲ್ಲ. ಇದರಿಂದ, ಆರ್ಥಿಕ ಅನನುಕೂಲತೆಗಳು ಉಂಟಾಗುತ್ತಿವೆ. ಈ ಸಂಬಂಧ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ, ಉನ್ನತ ದರ್ಜೆಯ ಕಬ್ಬಿಣದ ಅದಿರಿನ ರಾಯಧನ ಪಾವತಿಸಬೇಕಾಗಿದೆ. ಇದು ಗಣಿ ಮತ್ತು ಖನಿಜಗಳು (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ-1957ರ ಸೆಕ್ಷನ್ 9(2) ಮತ್ತು ಖನಿಜಗಳ ರಿಯಾಯಿತಿ (ಪರಮಾಣು, ಹೈಡ್ರೋಕಾರ್ಬನ್ ಎನರ್ಜಿ ಖನಿಜಗಳು ಹೊರತಾದ) ನಿಯಮಗಳು-2016ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಖನಿಜಗಳ ರಿಯಾಯಿತಿ (ಪರಮಾಣು, ಹೈಡ್ರೋಕಾರ್ಬನ್ ಎನರ್ಜಿ ಖನಿಜಗಳು ಹೊರತಾದ) ನಿಯಮಗಳು-2016ರ ನಿಯಮ 42ರಂತೆ ಪ್ರತಿ ದರ್ಜೆಯ ಕಬ್ಬಿಣದ ಅದಿರಿಗೆ ಸರಾಸರಿ ಮಾರಾಟದ ದರ ನಿಗದಿಪಡಿಸಬೇಕು. ಜತೆಗೆ, ಕೇಂದ್ರ ಉಕ್ಕು ಸಚಿವಾಲಯದ ಅಧೀನದಲ್ಲಿರುವ ಮೆಟಲ್ ಸ್ಕ್ರ್ಯಾಪ್ ಟ್ರೇಡ್ ಕಾರ್ಪೊರೇಷನ್ (ಎಂಎಸ್‌ಟಿಸಿ) ಲಿಮಿಟೆಡ್ ನಿಗದಿಪಡಿಸಿದ ವಾಸ್ತವಿಕ ಮಾರಾಟ ದರಗಳ ಆಧಾರದಲ್ಲಿ ರಾಯಧನ ಪಾವತಿಸಲು ಅನುಮತಿ ನೀಡುವಂತೆ ಸರ್ಕಾರ ಮತ್ತು ಸಂಬಂಧಪಟ್ಟ ಪ್ರಾಧಿಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
Related Articles
Thank you for your comment. It is awaiting moderation.
Comments (0)