ವಕ್ಫ್ ಮಂಡಳಿ ಸದಸ್ಯರ ನೇಮಕಾತಿ ಪ್ರಶ್ನಿಸಿದ ಅರ್ಜಿ; ಆಕ್ಷೇಪಣೆ ಸಲ್ಲಿಸಲು 2 ವಾರ ಕಾಲಾವಕಾಶ ನೀಡಿದ ಹೈಕೋರ್ಟ್
- by Ramya B T
- February 14, 2025
- 216 Views

ಬೆಂಗಳೂರು: ರಾಜ್ಯ ವಕ್ಫ್ ಮಂಡಳಿಗೆ ಐವರು ಸದಸ್ಯರನ್ನು ನೇಮಕ ಮಾಡಿರುವುದನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರ ಹಾಗೂ ವಕ್ಫ್ ಮಂಡಳಿ ಸದಸ್ಯರಿಗೆ ಹೈಕೋರ್ಟ್ ಎರಡು ವಾರ ಕಾಲಾವಕಾಶ ನೀಡಿದೆ.
ರಾಜ್ಯಸಭಾ ಸದಸ್ಯ ಡಾ. ಸೈಯದ್ ನಾಸೀರ್ ಹುಸೇನ್, ಶಾಸಕಿ ಕನೀಜಾ ಫಾತಿಮಾ ಸೇರಿ ಐವರು ಸದಸ್ಯರನ್ನು ವಕ್ಫ್ ಮಂಡಳಿಗೆ ನೇಮಕ ಮಾಡಿರುವುದನ್ನು ರದ್ದುಪಡಿಸುವಂತೆ ಕೋರಿ ಯಾದಗಿರಿ ಜಿಲ್ಲೆಯ ನಿವಾಸಿ ಸೈಯದ್ ಖುಸ್ರೋ ಹುಸೇನಿ ಎಂಬುವರು ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಪೀಠ ಶುಕ್ರವಾರ ವಿಚಾರಣೆ ನಡೆಸಿತು.
ವಾದ-ಪ್ರತಿವಾದ ಆಲಿಸಿದ ಪೀಠ, ಅರ್ಜಿಗೆ ಎರಡು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರ, ವಕ್ಫ್ ಮಂಡಳಿ ಹಾಗೂ ನೂತನವಾಗಿ ನೇಮಕವಾಗಿರುವ ಐವರು ಸದಸ್ಯರಿಗೆ ಸೂಚಿನೆ ನೀಡಿ ವಿಚಾರಣೆ ಮುಂದೂಡಿತು.
ಇದಕ್ಕೂ ಮುನ್ನ ಸರ್ಕಾರ ಹಾಗೂ ವಕ್ಫ್ ಮಂಡಳಿ ಪರ ವಕೀಲರು ವಾದ ಮಂಡಿಸಿ, ಅರ್ಜಿದಾರರು ವಕ್ಫ್ ಮಂಡಳಿ ಸದಸ್ಯರಲ್ಲ. ಚುನಾವಣೆಗೂ ಅವರು ಸ್ಪರ್ಧಿಸಿರಲಿಲ್ಲ. ಅರ್ಜಿ ಸಲ್ಲಿಸುವ ಅರ್ಹತೆ ಅವರಿಗಿಲ್ಲ. ಈಗಾಗಲೇ ವಕ್ಫ್ ಮಂಡಳಿ ಸದಸ್ಯರ ಚುನಾವಣೆ ನಡೆದಿದೆ. ಫೆಬ್ರವರಿ 17ಕ್ಕೆ ಅಧ್ಯಕ್ಷರ ಚುನಾವಣೆ ನಿಗಧಿಯಾಗಿದೆ. ಅರ್ಜಿಯು ವಿಚಾರಣಾ ಮಾನ್ಯತೆ ಹೊಂದಿಲ್ಲ. ಆದ್ದರಿಂದ, ಅದನ್ನು ವಿಚಾರಣೆಗೆ ಪರಿಗಣಿಸಬಾರದು. ಅರ್ಜಿದಾರರ ಮನವಿ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಅರ್ಜಿದಾರರ ಆಕ್ಷೇಪವೇನು?
ವಕ್ಫ್ ಮಂಡಳಿಗೆ ಸೈಯದ್ ನಾಸೀರ್ ಹುಸೇನ್, ಕನೀಜ್ ಫಾತಿಮಾ, ಆರ್. ಅಬ್ದುಲ್ ರಿಯಾಜ್ ಖಾನ್, ಆಸೀಫ್ ಅಲಿ ಶೇಕ್ ಹುಸೇನ್, ಕೆ. ಅನ್ವರ್ ಬಾಷಾ ಅವರು ವಕ್ಫ್ ಮಂಡಳಿ ಸದಸ್ಯರಾಗಿ 2024 ಅಕ್ಟೋಬರ್ 31ರಂದು ಚುನಾಯಿತರಾಗಿದ್ದಾರೆ. ಈ ಹಿಂದೆ ಇವರು ವಕ್ಫ್ ಮಂಡಳಿ ಸದಸ್ಯರಾಗಿದ್ದಾಗ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿಲ್ಲ. ವಕ್ಫ್ ಆಸ್ತಿಗಳ ರಕ್ಷಣೆಯಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ, ಅವರ ನೇಮಕಾತಿಯನ್ನು ರದ್ದುಗೊಳಿಸಿ, ಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
Related Articles
Thank you for your comment. It is awaiting moderation.
Comments (0)