ವಿವಾಹವಾಗುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ ಆರೋಪ; ಮಾಜಿ ಸಚಿವರ ಪುತ್ರನಿಗೆ ಮಧ್ಯಂತರ ಜಾಮೀನು
- by Jagan Ramesh
- August 19, 2025
- 61 Views

ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಯುವತಿ ಮೇಲೆ ಮೇಲೆ ಪದೇಪದೆ ಅತ್ಯಾಚಾರವೆಸಗಿದ ಆರೋಪ ಪ್ರಕರಣದಲ್ಲಿ ಮಾಜಿ ಸಚಿವ ಪ್ರಭು ಚವ್ಹಾಣ್ ಅವರ ಪುತ್ರ ಪ್ರತೀಕ್ಗೆ ಹೈಕೋರ್ಟ್ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಪ್ರಕರಣದಲ್ಲಿ ಜಾಮೀನು ಕೋರಿ ಹೈಕೋರ್ಟ್ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದ ಪ್ರತೀಕ್, ಮುಖ್ಯ ಅರ್ಜಿ ಇತ್ಯರ್ಥವಾಗುವವರೆಗೆ ಮಧ್ಯಂತರ ಜಾಮೀನು ನೀಡುವಂತೆ ಮನವಿ ಮಾಡಿ ಮಧ್ಯಂತರ ಅರ್ಜಿ ಸಲ್ಲಿಸಿದ್ದರು.
ಈ ಮಧ್ಯಂತರ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರಕರಣದ ವಾಸ್ತವಾಂಶಗಳನ್ನು ಪರಿಗಣಿಸಿದರೆ ಜಾಮೀನು ಅರ್ಜಿ ಇತ್ಯರ್ಥವಾಗುವರೆಗೆ ಮಧ್ಯಂತರ ಜಾಮೀನು ನೀಡಬೇಕೆಂಬ ಅರ್ಜಿದಾರರ ಮನವಿ ಪರಿಗಣಿಸಹುದಾಗಿದೆ. ಮುಖ್ಯ ಅರ್ಜಿ ವಿಲೇವಾರಿಗೆ ಬಾಕಿಯಿರುವ ಸಮಯದಲ್ಲಿ ಅರ್ಜಿದಾರರನ್ನು ಬಂಧಿಸಿದರೆ, 2 ಲಕ್ಷ ರೂ. ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತಕ್ಕೆ ಒಬ್ಬರ ಶ್ಯೂರಿಟಿ ಪಡೆದು ಬಿಡುಗಡೆ ಮಾಡಬೇಕು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಉಪ್ಪಾರಪೇಟೆ ಠಾಣೆ ಪೊಲೀಸರಿಗೆ ನಿರ್ದೇಶಿಸಿದೆ.
ಜತೆಗೆ, ಆರೋಪಿ ಪ್ರತೀಕ್ ತನಿಖೆಗೆ ಸಹಕರಿಸಬೇಕು ಹಾಗೂ ಪ್ರಾಸಿಕ್ಯೂಷನ್ ಸಾಕ್ಷ್ಯಧಾರಗಳನ್ನು ತಿರುಚಬಾರದು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.
ಪ್ರತೀಕ್ ಪರ ವಕೀಲರು ಹಾಗೂ ದೂರುದಾರೆಯ ಪರ ವಕೀಲರ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಪ್ರಕರಣದ ದೂರನ್ನು ಪರಿಶೀಲಿಸಿದರೆ ಅರ್ಜಿದಾರ ಮತ್ತು ದೂರುದಾರೆ ಇನ್ಸ್ಟ್ರಾಗ್ರಾಮ್ನಲ್ಲಿ ಪರಿಚಯವಾಗಿದ್ದರು. ಬಳಿಕ ಇಬ್ಬರ ನಡುವೆ ಸಂದೇಶಗಳು ವಿನಿಯಮವಾಗಿದ್ದು, 2023ರ ಫೆಬ್ರವರಿ 25ರಂದು ವಿವಾಹ ನಿಶ್ಚಿತಾರ್ಥ ನಡೆದಿತ್ತು. ನಿಶ್ಚಿತಾರ್ಥ ಮುರಿದುಬಿದ್ದಿದ್ದು, ಬಳಿಕ ದೂರುದಾರೆ ಅರ್ಜಿದಾರನ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣದ ವಾಸ್ತವಾಂಶ ಪರಿಗಣಿಸಿದರೆ ಅರ್ಜಿದಾರರಿಗೆ ಮಧ್ಯಂತರ ಜಾಮೀನು ನೀಡಬಹುದಾಗಿದೆ ಎಂದು ಹೇಳಿದೆ.
ಪ್ರಕರಣವೇನು?
ಮದುವೆಯಾಗುವುದಾಗಿ ನಂಬಿಸಿ ನಿಶ್ಚಿತಾರ್ಥ ಮಾಡಿಕೊಂಡ ನಂತರ ಪ್ರತೀಕ್ ಪದೇಪದೆ ಅತ್ಯಾಚಾರ ನಡೆಸಿದ್ದಾರೆ. ಜೀವ ಬೆದರಿಕೆಯೊಡ್ಡಿ, ಮಾರಕಾಸ್ತ್ರಗಳಿಂದ ಹಲ್ಲೆ ಸಹ ನಡೆಸಿದ್ದಾರೆ ಎಂದು ಆರೋಪಿಸಿ ಬೀದರ್ ಮಹಿಳಾ ಪೊಲೀಸ್ ಠಾಣೆಗೆ ಸಂತ್ರಸ್ತೆ ದೂರು ನೀಡಿದ್ದರು. ನಂತರ ಪ್ರಕರಣದ ತನಿಖೆ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿತ್ತು. ಇದರಿಂದ, ಜಾಮೀನು ಕೋರಿ ಪ್ರತೀಕ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿ, ಪ್ರತೀಕ್ ಮತ್ತು ದೂರುದಾರೆಯ ವಿವಾಹ ನಿಶ್ಚಿತಾರ್ಥ ನಡೆದಿತ್ತು. ಆ ಸಮಾರಂಭದಲ್ಲಿ ಸಾವಿರಾರು ಜನ ಭಾಗವಹಿಸಿದ್ದರು. ಅವರಿಬ್ಬರೂ ಹಲವು ಸಂದರ್ಭಗಳಲ್ಲಿ ಒಟ್ಟಿಗೆ ಪ್ರಯಾಣಿಸಿದ್ದಾರೆ. ಆದರೆ, ಕಾರಣಾಂತರಗಳಿಂದ ಮದುವೆ ನಡೆಯಲಿಲ್ಲ. ಅರ್ಜಿದಾರ ವಿರುದ್ಧದ ಆರೋಪದಲ್ಲಿ ಹುರುಳಿಲ್ಲ. ಪ್ರತೀಕ್ ಅವರನ್ನು ಬಂಧಿಸಲು ಪೊಲೀಸರು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ. ಒಂದು ವೇಳೆ ಪೊಲೀಸರು ಬಂಧಿಸಿದರೆ, ಅರ್ಜಿದಾರಿಗೆ ಬಹಳ ತೊಂದರೆಯಾಗುತ್ತದೆ. ಆದ್ದರಿಂದ, ಮಧ್ಯಂತರ ಜಾಮೀನು ನೀಡಬೇಕು ಎಂದು ಮನವಿ ಮಾಡಿದ್ದರು.
Related Articles
Thank you for your comment. It is awaiting moderation.
Comments (0)