ಬೆನ್ನುಹುರಿ ಶಸ್ತ್ರಚಿಕಿತ್ಸೆಗೆ ಒಳಗಾಗಲು ನಟ ದರ್ಶನ್‌ಗೆ ಮಧ್ಯಂತರ ಜಾಮೀನು; ಹೈಕೋರ್ಟ್ ಹೇಳಿದ್ದೇನು?

ಬೆಂಗಳೂರು: ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ನಟ ದರ್ಶನ್‌ಗೆ ವೈದ್ಯಕೀಯ ಕಾರಣಕ್ಕಾಗಿ ಆರು ವಾರಗಳ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿರುವ ಹೈಕೋರ್ಟ್, ಬೆಂಗಳೂರಿನಲ್ಲಿ ದರ್ಶನ್‌ ಇಚ್ಛಿಸಿದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ಆದೇಶಿಸಿದೆ.

ಆಮ್‌ ಆದ್ಮಿ ಪಕ್ಷದ ಮುಖಂಡ ಸತ್ಯೇಂದರ್‌ ಕುಮಾರ್‌ ಜೈನ್‌ ಪ್ರಕರಣದಲ್ಲಿ, ಸಾರ್ವಜನಿಕರು ತಮ್ಮ ಖರ್ಚಿನಲ್ಲಿ ತಮ್ಮ ಇಚ್ಛೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದ್ದರಿಂದ, ತನ್ನ ಇಚ್ಛೆಯ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲು ಅನುಮತಿ ಕೋರಿ ದರ್ಶನ್‌ ಸಲ್ಲಿಸಿರುವ ಅರ್ಜಿಯನ್ನು ಪುರಸ್ಕರಿಸಬಹುದು ಎಂದು ನ್ಯಾಯಮೂರ್ತಿ ಎಸ್‌. ವಿಶ್ವಜಿತ್‌ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ವೈದ್ಯರ ವರದಿ ನಂಬದಿರಲು ಕಾರಣಗಳಿಲ್ಲ:
ಸಂವಿಧಾನದ ಪರಿಚ್ಛೇದ 21ರಲ್ಲಿ ಉಲ್ಲೇಖಿಸಲಾದ ಜೀವಿಸುವ ಹಕ್ಕಿನಲ್ಲಿ ಆರೋಗ್ಯದ ಹಕ್ಕೂ ಸೇರಿದೆ. ವ್ಯಕ್ತಿಯೊಬ್ಬರ ಆರೋಗ್ಯ ಪರಿಸ್ಥಿತಿ ಆತನ ಜೀವನದ ಅವಿಭಾಜ್ಯ ಅಂಗವಾಗಿದೆ. ಆರೋಗ್ಯದ ಬಗ್ಗೆ ಕಾಳಜಿವಹಿಸುವುದರಲ್ಲಿ ವಿಳಂಬವಾಗುವುದು ಗಂಭೀರ ಪರಿಣಾಮಕ್ಕೆ ನಾಂದಿಯಾಗಬಹುದು. ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದ (ಬಿಎಂಸಿಆರ್‌ಸಿ) ನರರೋಗ ವಿಭಾಗದ ಮುಖ್ಯಸ್ಥರು ದರ್ಶನ್‌ಗೆ ಶಸ್ತ್ರಚಿಕಿತ್ಸೆ ಮಾಡದಿದ್ದರೆ ಆಗಬಹುದಾದ ಪರಿಣಾಮಗಳ ಬಗ್ಗೆ ತಿಳಿಸಿದ್ದಾರೆ. ಇದರಿಂದ, ಮೇಲ್ನೋಟಕ್ಕೆ ಶಸ್ತ್ರಚಿಕಿತ್ಸೆ ಅಗತ್ಯವಾಗಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.

ಶಸ್ತ್ರಚಿಕಿತ್ಸೆಗೆ ಒಳಗಾಗುವವರೆಗೆ ಫಿಸಿಯೋಥೆರಪಿ ಮಾಡಬೇಕು ಎಂದು ತಜ್ಞರ ವರದಿಯಲ್ಲಿ ಸಲಹೆ ನೀಡಲಾಗಿದೆ. ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗುವುದಕ್ಕೂ ಮೊದಲಿನಿಂದಲೂ ದರ್ಶನ್ ಅವರು ಈ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬಂಧನದ ಬಳಿಕ ಅವರಿಗೆ ಸೂಕ್ತ ಚಿಕಿತ್ಸೆ ದೊರಯದಿರುವುದು ನೋವು ಉಲ್ಬಣಕ್ಕೆ ಕಾರಣವಾಗಿರಬಹುದು. 2024ರ ಅಕ್ಟೋಬರ್ 24ರ ಮತ್ತು ಹಿಂದಿನ ವೈದ್ಯಕೀಯ ವರದಿಗಳನ್ನು ಗಮನಿಸಿದಾಗ ದರ್ಶನ್‌ಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ದರ್ಶನ್‌ ಅವರ ವೈದ್ಯಕೀಯ ವರದಿ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದ ಹಿನ್ನೆಲೆಯಲ್ಲಿ ಜೈಲು ಅಧಿಕಾರಿಗಳು ಅವರನ್ನು ಸೂಪರ್‌ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಿದ್ದು, ಬಿಎಂಸಿಆರ್‌ಸಿಯ ತಜ್ಞ ವೈದ್ಯರ ವರದಿಯನ್ನು ನಂಬದಿರಲು ಯಾವುದೇ ಸಕಾರಣಗಳು ಇಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಕೋರ್ಟ್ ವಿಧಿಸಿರುವ ಷರತ್ತುಗಳು:

  • ದರ್ಶನ್‌ 2 ಲಕ್ಷ ರೂ. ಮೌಲ್ಯದ ವೈಯಕ್ತಿಕ ಬಾಂಡ್‌ ಮತ್ತು ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತೆ ಒದಗಿಸಬೇಕು.
  • ಬೆಂಗಳೂರಿನಲ್ಲಿ ತಮ್ಮ ಇಚ್ಛೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ದರ್ಶನ್‌ಗೆ ಸ್ವಾತಂತ್ರ್ಯ ಕಲ್ಪಿಸಲಾಗಿದೆ. ಜೈಲಿನಿಂದ ಬಿಡುಗಡೆಯಾದ ತಕ್ಷಣ ಅವರು ಆಸ್ಪತ್ರೆಗೆ ದಾಖಲಾಗಿ, ವೈದ್ಯಕೀಯ ತಪಾಸಣೆಗೆ ಒಳಗಾಗಿ, ಯಾವಾಗ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಎಷ್ಟು ದಿನ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ. ಆನಂತರದ ಚಿಕಿತ್ಸೆ ಏನಾದರೂ ಇರಲಿದೆಯೇ ಎಂಬ ಮಾಹಿತಿಯನ್ನು ಬಿಡುಗಡೆಯಾದ 1 ವಾರದೊಳಗೆ ಕೋರ್ಟ್‌ಗೆ ಸಲ್ಲಿಸಬೇಕು.
  • ಪ್ರಾಸಿಕ್ಯೂಷನ್‌ ಸಾಕ್ಷಿಗಳಿಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬೆದರಿಕೆ ಹಾಕುವುದು ಅಥವಾ ತಿರುಚುವುದು ಮಾಡಬಾರದು.
  • ಚಿಕಿತ್ಸೆಗೆ ಸಂಬಂಧಿಸಿದ ಎಲ್ಲ ದಾಖಲೆಗಳು ಮತ್ತು ಆ ಚಿಕಿತ್ಸೆಯ ಮುನ್ನೋಟವನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು.
  • ಮಧ್ಯಂತರ ಜಾಮೀನು ಅವಧಿಯಲ್ಲಿ ತಮ್ಮ ಆರೋಗ್ಯದ ಸ್ಥಿತಿ ಸೇರಿ ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ಮುದ್ರಣ, ವಿದ್ಯುನ್ಮಾನ ಅಥವಾ ಸಾಮಾಜಿಕ ಮಾಧ್ಯಮಕ್ಕೆ ಹೇಳಿಕೆ ನೀಡಬಾರದು.
  • ಮಧ್ಯಂತರ ಜಾಮೀನು ಅವಧಿ ಮುಗಿದ ತಕ್ಷಣ ವಿಚಾರಣಾ ನ್ಯಾಯಾಲಯಕ್ಕೆ ಶರಣಾಗಬೇಕು. ಇದು ಹೈಕೋರ್ಟ್‌ನ ಮುಂದಿನ ಆದೇಶಕ್ಕೆ ಒಳಪಟ್ಟಿರುತ್ತದೆ.
  • ದರ್ಶನ್‌ ತಮ್ಮ ಪಾಸ್‌ಪೋರ್ಟ್‌ ಅನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಇದು ಈ ನ್ಯಾಯಾಲಯದ ಮುಂದಿನ ಆದೇಶಕ್ಕೆ ಒಳಪಟ್ಟಿರುತ್ತದೆ.
  • ಜಾಮೀನು ಅವಧಿಯಲ್ಲಿ ದರ್ಶನ್‌ ಅವರು ವಿಚಾರಣಾ ನ್ಯಾಯಾಲಯದ ವ್ಯಾಪ್ತಿ ಬಿಟ್ಟು ಹೊರಹೋಗುವಂತಿಲ್ಲ.

Related Articles

Comments (0)

Leave a Comment