ಸಾಮಾಜಿಕ ಜಾಲತಾಣದಲ್ಲಿ ನಟಿ ರಮ್ಯಾಗೆ ಬೆದರಿಕೆ; ಐವರಿಗೆ ಜಾಮೀನು, ಒಬ್ಬನಿಗೆ ನಿರೀಕ್ಷಣಾ ಜಾಮೀನು ನೀಡಿದ ಹೈಕೋರ್ಟ್

ಬೆಂಗಳೂರು: ಮಾಜಿ ಸಂಸದೆ ನಟಿ ದಿವ್ಯ ಸ್ಪಂದನಾ ಅಲಿಯಾಸ್‌ ರಮ್ಯಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಒಡ್ಡಿರುವ ಪ್ರಕರಣದಲ್ಲಿ ಬಂಧಿತರಾಗಿರುವ ಐವರು ಆರೋಪಿಗಳಿಗೆ ಜಾಮೀನು ಹಾಗೂ ಒಬ್ಬ ಆರೋಪಿಗೆ ಹೈಕೋರ್ಟದ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ನಟ ದರ್ಶನ್ ಅಭಿಮಾನಿಗಳು ಎನ್ನಲಾದ ಬೆಂಗಳೂರಿನ ಕೆ. ಪ್ರಮೋದ್‌, ರಾಜೇಶ್‌, ವಿಜಯನಗರ ಜಿಲ್ಲೆ ಕೂಡ್ಲಗಿಯ ಟಿ. ಓಬಣ್ಣ, ಮೈಸೂರು ಜಿಲ್ಲೆಯ ನಂಜನಗೂಡಿನ ಹುಲ್ಲಹಳ್ಳಿಯ ಚಿನ್ಮಯ್‌ ಶೆಟ್ಟಿ, ಕೊಪ್ಪಳದ ಗಂಗಾವತಿಯ ಮಂಜುನಾಥ್‌ ಸಲ್ಲಿಸಿದ್ದ ಜಾಮೀನು ಅರ್ಜಿ‌ ಹಾಗೂ ಚಿಕ್ಕಮಗಳೂರಿನ ಬಿ.ಎ. ವಿಕಾಸ್‌ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ನ್ಯಾಯಮೂರ್ತಿ ಶಿವಶಂಕರ್‌ ಅಮರಣ್ಣವರ್‌ ಅವರ ಏಕಸದಸ್ಯ ನ್ಯಾಯಪೀಠ ಇತ್ತೀಚೆಗೆ ಪುರಸ್ಕರಿಸಿದೆ.

ಆರೋಪಿಗಳು ತಲಾ 1 ಲಕ್ಷ ರೂ. ವೈಯಕ್ತಿಕ ಬಾಂಡ್‌ ಹಾಗೂ ಅಷ್ಟೇ ಮೊತ್ತಕ್ಕೆ ಒಬ್ಬರ ಶ್ಯೂರಿಟಿ ಒದಗಿಸಬೇಕು. ರಮ್ಯಾ ಅಥವಾ ಇತರ ಸಾಕ್ಷಿಗಳನ್ನು ಬೆದರಿಸುವಂತಿಲ್ಲ, ತನಿಖೆಗೆ ಸಹಕರಿಸಬೇಕು, ವಿಚಾರಣೆಯ ದಿನದಂದು ವಿನಾಯಿತಿ ದೊರೆಯದ ಹೊರತು ಎಲ್ಲರೂ ಹಾಜರಾಗಬೇಕು ಎಂಬ ಷರತ್ತುಗಳನ್ನು ವಿಧಿಸಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಹೈಕೋರ್ಟ್ ಆದೇಶದಲ್ಲೇನಿದೆ?
ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ರಮ್ಯಾ ಅವರಿಗೆ ಅಶ್ಲೀಲ ಭಾಷೆ ಬಳಕೆ ಮಾಡಿ ಬೆದರಿಕೆ ಹಾಕಿದ ಆರೋಪ ಅರ್ಜಿದಾರರ ಮೇಲಿದೆ. ಅರ್ಜಿದಾರರ ವಿರುದ್ಧ ಅನ್ವಯಿಸಿರುವ ಸೆಕ್ಷನ್‌ಗಳು ಏಳು ವರ್ಷ ಶಿಕ್ಷೆ ವಿಧಿಸುವಂಥವಲ್ಲ. ಫೋನ್‌ ಬಳಕೆ ಮಾಡಿ ಇನ್‌ಸ್ಟಾಗ್ರಾಂ ಮೂಲಕ ರಮ್ಯಾ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಲಾಗಿದೆ. ಅರ್ಜಿದಾರರ ಮೊಬೈಲ್‌ಗಳನ್ನು ತನಿಖಾಧಿಕಾರಿ ಜಪ್ತಿ ಮಾಡಿದ್ದು, ಅವುಗಳನ್ನು ಎಫ್‌ಎಸ್‌ಎಲ್‌ ಪರಿಶೀಲನೆಗೆ ಕಳುಹಿಸಲಾಗಿದೆ. ಆದ್ದರಿಂದ, ಅರ್ಜಿದಾರರನ್ನು ವಶದಲ್ಲಿಟ್ಟುಕೊಂಡು ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಪ್ರಕರಣವೇನು?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್‌ ಅವರ ಜಾಮೀನು ರದ್ದತಿ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ನಟಿ ರಮ್ಯಾ ಹಂಚಿಕೊಂಡಿದ್ದರು. ಇದಕ್ಕೆ ಅನಾಮಧೇಯವಾದ 43 ಸಾಮಾಜಿಕ ಜಾಲತಾಣ ಖಾತೆಗಳಿಂದ ಅವಹೇಳನಕಾರಿ ಪ್ರತಿಕ್ರಿಯೆ ಜತೆಗೆ ಕೊಲೆ ಬೆದರಿಕೆ ಹಾಕಲಾಗಿತ್ತು.

ಈ ಸಂಬಂಧ ರಮ್ಯಾ ನೀಡಿದ ದೂರು ಆಧರಿಸಿ ಬೆಂಗಳೂರಿನ ಸೈಬರ್‌ ಠಾಣೆಯ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಸೆಕ್ಷನ್‌ಗಳಾದ 351(2) (ಕ್ರಿಮಿನಲ್‌ ಬೆದರಿಕೆಯ ಉದ್ದೇಶದ ಅಪರಾಧ), 351(3) (ಸಾವು, ತೀವ್ರ ನೋವುಂಟು ಮಾಡುವ ಉದ್ದೇಶದ ಕ್ರಿಮಿನಲ್‌ ಬೆದರಿಕೆ), 352 (ಉದ್ದೇಶಪೂರ್ವಕ ಅವಮಾನದ ಮೂಲಕ ಶಾಂತಿಭಂಗದ ಯತ್ನ), 75(1)(iv) (ಲೈಂಗಿಕ ಟೀಕೆ), 79 (ಮಹಿಳೆಯ ಗೌರವಕ್ಕೆ ಧಕ್ಕೆ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್‌ 67, 66(ಸಿ) ಅಡಿ ಪ್ರಕರಣ ದಾಖಲಿಸಿದ್ದಾರೆ.

Related Articles

Comments (0)

Leave a Comment