ಕೆಆರ್‌ಎಸ್ ಸುತ್ತ ಸ್ಫೋಟಕ ಚಟವಟಿಕೆ ನಡೆಸುವ ಘಟಕಗಳ ಪರಿಶೀಲಿಸಿ ವರದಿ ಸಲ್ಲಿಸಲು 6 ತಿಂಗಳ ಗಡುವು ನೀಡಿದ ಹೈಕೋರ್ಟ್
- by Jagan Ramesh
- November 22, 2024
- 304 Views
ಬೆಂಗಳೂರು: ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯದ ಸುತ್ತಲಿನ 20 ಕಿ.ಮೀ ವ್ಯಾಪ್ತಿಯಲ್ಲಿ ಕಲ್ಲು ಕ್ವಾರಿ ಜತೆಗೆ ಸ್ಫೋಟಕ ಚಟುವಟಿಕೆ ನಡೆಸುತ್ತಿರುವ ಘಟಕಗಳನ್ನು ಪರಿಶೀಲಿಸಿ ಸಮಗ್ರ ವರದಿ ಸಲ್ಲಿಸಲು ಜಲಾಶಯ ಸುರಕ್ಷತಾ ಸಮಿತಿಗೆ ಹೈಕೋರ್ಟ್ 6 ತಿಂಗಳ ಕಾಲಾವಕಾಶ ನೀಡಿದೆ.
ಕಲ್ಲು ಗಣಿಗಾರಿಕೆ ಕುರಿತಂತೆ ಸಿ.ಜಿ.ಕುಮಾರ್ ಸಲ್ಲಿಸಿರುವ ಮೂಲ ಅರ್ಜಿಯಲ್ಲಿ ಸಲ್ಲಿಕೆಯಾಗಿರುವ ಹಲವು ಮಧ್ಯಂತರ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎನ್. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ಅರ್ಜಿ ಕುರಿತು ವಾದ-ಪ್ರತಿವಾದ ಆಲಿಸಿದ ಪೀಠ, ಜಲಾಶಯದ ಸುತ್ತ 20 ಕಿ.ಮೀ ವ್ಯಾಪ್ತಿಯಲ್ಲಿ ಕಲ್ಲುಕ್ವಾರಿ ಜತೆಗೆ ಸ್ಫೋಟಕ ಚಟುವಟಿಕೆ ನಡೆಸುತ್ತಿರುವ ಘಟಕಗಳನ್ನು ಪರಿಶೀಲಿಸಿ ನಾಲ್ಕು ತಿಂಗಳಲ್ಲಿ ಸಮಗ್ರ ವರದಿ ಸಲ್ಲಿಸಬೇಕೆಂದು ನ್ಯಾಯಾಲಯ 2024ರ ಮಾ.5ರಂದು ಸರ್ಕಾರಕ್ಕೆ ಆದೇಶಿಸಿತ್ತು. ಆದರೆ, ಆ ಸಮಯಾವಕಾಶ ಸಾಲುತ್ತಿಲ್ಲ, ಮತ್ತಷ್ಟು ಸಮಯ ನೀಡಬೇಕೆಂದು ಅಡ್ವೊಕೇಟ್ ಜನರಲ್ ಮನವಿ ಮಾಡಿದ್ದಾರೆ. ಅವರ ಮನವಿಯನ್ನು ಪುರಸ್ಕರಿಸಿ ಜಲಾಶಯ ಸುರಕ್ಷತಾ ಸಮಿತಿಗೆ ಮತ್ತೆ ಆರು ತಿಂಗಳ ಕಾಲಾವಕಾಶ ನೀಡಲಾಗುತ್ತಿದೆ. ಅಷ್ಟರಲ್ಲಿ ಪರಿಶೀಲನೆ ಕಾರ್ಯ ಪೂರ್ಣಗೊಳಿಸಿ ವರದಿಯನ್ನು ಸಲ್ಲಿಸಬೇಕು ಎಂದು ಆದೇಶಿಸಿತು.
ಡ್ಯಾಂ ಸೇಫ್ಟಿ ಕುರಿತಂತೆ ಮೂರನೇ ಶೆಡ್ಯೂಲ್‌ನ ಸೆಕ್ಷನ್ 12ರಲ್ಲಿ ಉಲ್ಲೇಖಿಸಿರುವಂತೆ ಯಾವುದೇ ರೀತಿಯ ವಿಪತ್ತುಗಳನ್ನು ತಡೆಯಲು ಮತ್ತು ಅಣೆಕಟ್ಟೆಯ ಸುರಕ್ಷತೆ ದೃಷ್ಟಿಯಿಂದ ರಾಜ್ಯ ಮಟ್ಟದ ಸಮಿತಿ ನಿರ್ಧಾರಗಳನ್ನು ಕೈಗೊಳ್ಳಬಹುದಾಗಿದೆ. ಆದ್ದರಿಂದ, ನ್ಯಾಯಾಲಯ ನಿರ್ದೇಶನ ನೀಡಿದ್ದರೂ ಸಹ ಸಮಿತಿ ಗಣಿಗಾರಿಕೆ ಮರು ಆರಂಭ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ಪರಿಗಣಿಸಲು ನಿರಾಕರಿಸಿದೆ ಎಂದು ನ್ಯಾಯಾಲಯ ಹೇಳಿದೆ.
ಆದ್ದರಿಂದ, ಗಣಿಗಾರಿಕೆ ಪುನರಾರಂಭಿಸಲು ಅನುಮತಿ ಕೋರಿರುವ ಎಲ್ಲ ಅರ್ಜಿಗಳನ್ನು ಪರಿಶೀಲಿಸಲಾಗುವುದು. ಅರ್ಜಿದಾರರು ಯಾವುದೇ ಸ್ಪೋಟಕ ಚಟುವಟಕೆ ನಡೆಸುವುದಿಲ್ಲವೆಂದು ಮುಚ್ಚಳಿಕೆ ನೀಡಬೇಕು. ಸಮಿತಿಯು ಗಣಿಗಾರಿಕೆ ಇಲಾಖೆಯ ತಜ್ಞರನ್ನೂ ಸೇರಿಸಿಕೊಂಡು ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಿದೆ ಎಂದು ಅಡ್ವೊಕೇಟ್ ಜನರಲ್ ತಿಳಿಸಿದ್ದಾರೆ. ಅದು ನ್ಯಾಯಯುತ ಹೇಳಿಕೆಯಾಗಿದೆ. ಆದ್ದರಿಂದ, ಗಣಿಗಾರಿಕೆ ಪುನರಾರಂಭಿಸಲು ಅನುಮತಿ ಕೋರಿರುವ ಅರ್ಜಿದಾರರು ಸಮಿತಿ ಮುಂದೆ ಹಾಜರಾಗಿ ವಿವರಣೆ ನೀಡಬೇಕು. ಸಮಿತಿ ಎಲ್ಲ ಅಂಶಗಳನ್ನು ಪರಿಶೀಲಿಸಿದ ಬಳಿಕ ಕಾನೂನು ರೀತಿಯಲ್ಲಿ ನಿರ್ಧಾರ ಕೈಗೊಳ್ಳಬೇಕು. ಕೈಗೊಂಡ ನಿರ್ಧಾರವನ್ನು ಅರ್ಜಿದಾರರಿಗೆ ತಿಳಿಸಬೇಕು ಎಂದು ನ್ಯಾಯಪೀಠ ಸೂಚಿಸಿದೆ.
ಈ ಮಧ್ಯೆ, ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸೂಕ್ತ ಸಲಹೆ/ಸಹಕಾರ ನೀಡಲು ನೇಮಕಗೊಂಡಿರುವ ಅಮಿಕಸ್ ಕ್ಯೂರಿ, ಒಟ್ಟು ಜಲಾಶಯದ ಸುತ್ತ 20 ಕಿ.ಮೀ ವ್ಯಾಪ್ತಿಯಲ್ಲಿ ಕಲ್ಲು ಗಣಿಕಾರಿಕೆ ಲೈಸೆನ್ಸ್‌ಗಳು ಕಾರ್ಯ ನಿರ್ವಹಿಸುತ್ತಿದ್ದವು. ಆದರೆ, ಅವುಗಳಲ್ಲಿ 38 ಕ್ವಾರಿಗಳ ಗುತ್ತಿಗೆ ಅವಧಿ ಮುಗಿದಿದೆ. ಸದ್ಯ ಕೇವಲ 12 ಘಟಕಗಳು ಮಾತ್ರ ಕಾರ್ಯಾಚರಣೆ ನಡೆಸುತ್ತಿದ್ದು, ಅದರಲ್ಲಿ 4 ಕ್ವಾರಿಗಳು ಸ್ಪೋಟಕ ಚಟವಟಿಕೆ ನಡೆಸುತ್ತಿವೆ. ಉಳಿದ 8 ಘಟಕಗಳು ಯಾವುದೇ ರೀತಿಯ ಸ್ಪೋಟಕ ಚಟವಟಿಕೆ ನಡೆಸುತ್ತಿಲ್ಲ ಎಂದು ನ್ಯಾಯಾಲಯಕ್ಕೆ ವಿವರಿಸಿದ್ದಾರೆ.
Related Articles
Thank you for your comment. It is awaiting moderation.
Comments (0)