ಅನಾರೋಗ್ಯಪೀಡಿತ ತಾಯಿಯ ಆರೈಕೆಗಾಗಿ ಮಗನಿಗೆ ಪರೋಲ್; 60 ದಿನಗಳ ಅವಧಿಗೆ ಬಿಡುಗಡೆ ಮಾಡಲು ಹೈಕೋರ್ಟ್ ಆದೇಶ
- by Jagan Ramesh
- November 20, 2024
- 70 Views
ಬೆಂಗಳೂರು: ಎದೆನೋವು ಇನ್ನಿತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ತಾಯಿಯ ಆರೈಕೆ ಮಾಡಲು ಮತ್ತು ವೈದ್ಯಕೀಯ ಚಿಕಿತ್ಸೆ ವೆಚ್ಚ ಭರಿಸಲು ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಆಕೆಯ ಪುತ್ರನಿಗೆ 60 ದಿನಗಳ ಕಾಲ ಪರೋಲ್ ಮಂಜೂರು ಮಾಡಿ ಹೈಕೋರ್ಟ್ ಆದೇಶಿಸಿದೆ.
ಮಗನಿಗೆ ಪರೋಲ್ ನೀಡಲು ಜೈಲು ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿ ಅನಾರೋಗ್ಯದಿಂದ ಬಳಲುತ್ತಿರುವ ಮಂಡ್ಯ ಜಿಲ್ಲೆಯ ಪಾಂಡವಪುರ ನಿವಾಸಿ ತಶಿನಾ ಬೇಗಂ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಪುತ್ರ ಮೊಹಮ್ಮದ್ ಸುಹೈಲ್ ಕೊಲೆ ಪ್ರಕರಣದಲ್ಲಿ ಜೀವಾವಧಿಶಿಕ್ಷೆ ಗುರಿಯಾಗಿದ್ದಾನೆ. ರೆಟ್ರೋಸ್ಟರ್ನಲ್ ಡಿಸ್ಕಂಫರ್ಟ್ (ಎದೆಭಾಗದ ಒಳಗೆ ನೋವು), ಬೆನ್ನು ನೋವು, ಅಧಿಕ ರಕ್ತದೊತ್ತಡ, ಆಯಾಸ, ಥೈರಾಡ್ ಸಮಸ್ಯೆಯಿಂದ ಬಳಲುತ್ತಿರುವ ತಮಗೆ ಚಿಕಿತ್ಸೆ ಕಲ್ಪಿಸಲು ಮತ್ತು ಆರೈಕೆ ಮಾಡಲು ಕುಟುಂಬದಲ್ಲಿ ಯಾರೂ ಇಲ್ಲ. ಇಂಥ ಸಂದರ್ಭದಲ್ಲಿ ಮಗನ ಉಪಸ್ಥಿತಿ ಅನಿವಾರ್ಯವಾಗಿದೆ. ಮಗ ಕಳೆದ ಎರಡು ವರ್ಷ, ನಾಲ್ಕು ತಿಂಗಳಿಂದ ಜೈಲಿದ್ದಾನೆ. ಈ ಹಿಂದೆ ಪರೋಲ್ ಮೇಲೆ ಬಿಡುಗಡೆಯಾಗಿಲ್ಲ. ಆದ್ದರಿಂದ, ಆತನನ್ನು ಪರೋಲ್ ಮೇಲೆ ಬಿಡುಗಡೆ ಮಾಡಲು ಸರ್ಕಾರ ಮತ್ತು ಮಂಡ್ಯ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರ ಮಹಿಳೆ ಕೋರಿದ್ದರು.
ಈ ಮನವಿ ಪರಿಗಣಿಸಿರುವ ನ್ಯಾಯಪೀಠ, ತಾಯಿಯ ಆರೈಕೆ ಮಾಡಲು ಪುತ್ರನನ್ನು ಪರೋಲ್ ಮೇಲೆ ಬಿಡುಗಡೆ ಮಾಡುವುದು ಅಗತ್ಯವಾಗಿದೆ ಅಭಿಪ್ರಾಯಪಟ್ಟಿತಲ್ಲದೆ, ಮಂಡ್ಯ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರು, ಅರ್ಜಿದಾರೆಯ ಪುತ್ರ ಮೊಹಮ್ಮದ್ ಸುಹೈಲ್ ಅನ್ನು 60 ದಿನಗಳ ಕಾಲ ಪರೋಲ್ ಮೇಲೆ ಬಿಡುಗಡೆ ಮಾಡಬೇಕು. ಜೈಲಿಗೆ ಮರಳುವುದನ್ನು ಖಚಿತಪಡಿಸಿಕೊಳ್ಳಲು ಸುಹೈಲ್‌ಗೆ ಅಧೀಕ್ಷಕರು ಅಗತ್ಯ ಷರತ್ತುಗಳನ್ನು ವಿಧಿಸಬಹುದು. ಅಧೀಕ್ಷಕರು ವಿಧಿಸುವ ಯಾವುದೇ ಷರತ್ತು ಉಲ್ಲಂಘಿಸಿದ ಪಕ್ಷದಲ್ಲಿ ಸುಹೈಲ್‌ಗೆ ಮಂಜೂರು ಮಾಡಲಾಗಿರುವ ಪರೋಲ್ ತನ್ನಿಂದ ತಾನೇ ರದ್ದಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
Related Articles
Thank you for your comment. It is awaiting moderation.
Comments (0)