ಮುಜರಾಯಿ ಇಲಾಖೆ ವಶಕ್ಕೆ ಗಾಳಿ ಆಂಜನೇಯ ದೇಗುಲ; 4 ತಿಂಗಳಲ್ಲಿ ಅರ್ಜಿ ಇತ್ಯರ್ಥಕ್ಕೆ ವಿಭಾಗೀಯ ಪೀಠ ನಿರ್ದೇಶನ
- by Ramya B T
- July 29, 2025
- 85 Views

ಬೆಂಗಳೂರು: ನಗರದ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಮುಜರಾಯಿ ಇಲಾಖೆ ಸುಪರ್ದಿಗೆ ಪಡೆದಿರುವ ಸರ್ಕಾರದ ಕ್ರಮಕ್ಕೆ ಮಧ್ಯಂತರ ತಡೆ ನೀಡಲು ನಿರಾಕರಿಸಿದ್ದ ಏಕಸದಸ್ಯ ನ್ಯಾಯಪೀಠದ ಆದೇಶ ರದ್ದುಪಡಿಸಲು ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ನಿರಾಕರಿಸಿದೆ.
ದೇವಾಲಯವನ್ನು ಮುಜರಾಯಿ ಇಲಾಖೆಯ ಸುಪರ್ದಿಗೆ ಪಡೆದಿದ್ದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿ ಏಕಸದಸ್ಯಪೀಠ ಜುಲೈ 17ರಂದು ನೀಡಿದ್ದ ಮಧ್ಯಂತರ ಆದೇಶ ಪ್ರಶ್ನಿಸಿ ದೇವಾಲಯದ ಟ್ರಸ್ಟ್ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಮೇಲ್ಮನವಿ ಕುರಿತು ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಏಕಸದಸ್ಯ ಪೀಠದ ಮಧ್ಯಂತರ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಅಥವಾ ತಡೆ ನೀಡಲು ನಿರಾಕರಿಸಿತಲ್ಲದೆ, ಸದ್ಯ ಮಧ್ಯಂತರ ಆದೇಶವಷ್ಟೇ ಹೊರಬಿದ್ದಿದೆ. ಇನ್ನೂ ಮೂಲ ಅರ್ಜಿ ಬಾಕಿ ಇರುವ ಹಿನ್ನೆಲೆಯಲ್ಲಿ ಏಕಸದಸ್ಯ ನ್ಯಾಯಪೀಠವು ಹೊಸದಾಗಿ ವಿಚಾರಣೆ ನಡೆಸಿ 4 ತಿಂಗಳೊಳಗೆ ಮೂಲ ಅರ್ಜಿ ವಿಲೇವಾರಿ ಮಾಡಬೇಕು ಎಂದು ನಿರ್ದೇಶಿಸಿ ಮೇಲ್ಮನವಿ ಇತ್ಯರ್ಥಪಡಿಸಿತು.
ಮಧ್ಯಂತರ ತಡೆ ನಿರಾಕರಿಸಿದ್ದ ಏಕಸದಸ್ಯ ಪೀಠ:
ಶ್ರೀ ಗಾಳಿ ಆಂಜನೇಯ ಸ್ವಾಮಿ ದೇವಾಲಯ ಟ್ರಸ್ಟ್ನ ಟ್ರಸ್ಟಿ ಮತ್ತು ಸಂಚಾಲಕರೂ ಆದ ಬಿ.ಪಿ. ನಾಗರಾಜು ಮತ್ತಿತರರು ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ದೇವಾಲಯವನ್ನು ಮುಜರಾಯಿ ಇಲಾಖೆ ಸುಪರ್ದಿಗೆ ಒಪ್ಪಿಸಿರುವ ರಾಜ್ಯ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಲು ನಿರಾಕರಿಸಿತ್ತು.
ದೇಗುಲದ ಹುಂಡಿ ಹಣ ಎಣಿಕೆ ಮಾಡುವಾಗ ಹಣ ಕದ್ದಿರುವ ಬಗ್ಗೆ ವಿಡಿಯೋ ದಾಖಲೆಗಳಿವೆ. ಈ ದಾಖಲೆಗಳನ್ನು ಪರಿಶೀಲಿಸಿದಾಗ ಆಡಳಿತ ಮಂಡಳಿ ಹಣದ ವ್ಯವಹಾರಗಳಲ್ಲಿ ಭಾರಿ ಅಕ್ರಮವೆಸಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ದೇಗುಲದ ಅವ್ಯವಹಾರಗಳ ಬಗ್ಗೆ ಜಿಲ್ಲಾಧಿಕಾರಿ ವಿಚಾರಣೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಈ ವರದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ತಿಳಿಸಲಾಗಿದೆ. ಜತೆಗೆ, ಟ್ರಸ್ಟ್ ಸದಸ್ಯರ ಮಧ್ಯೆ ಸಿವಿಲ್ ವ್ಯಾಜ್ಯ ಇದೆ ಎಂಬುದನ್ನೂ ಜಿಲ್ಲಾಧಿಕಾರಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಎಲ್ಲ ಅಂಶಗಳ ಆಧಾರದಲ್ಲಿ ಸರ್ಕಾರದ ಆದೇಶಕ್ಕೆ ತಡೆ ನೀಡಲು ಸಾಧ್ಯವಿಲ್ಲ ಎಂದು ಏಕಸದಸ್ಯ ನ್ಯಾಯಪೀಠ ಮಧ್ಯಂತರ ಆದೇಶದಲ್ಲಿ ಹೇಳಿತ್ತು.
ಪ್ರಕರಣವೇನು?
ಗಾಳಿ ಆಂಜನೇಯಸ್ವಾಮಿ ದೇವಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳಲ್ಲಿ ಹೊಂದಾಣಿಕೆ ಇಲ್ಲ. ದೇವಾಲಯಕ್ಕೆ ಲಕ್ಷಾಂತರ ರೂ. ಆದಾಯ ಬರುತ್ತಿದ್ದರೂ ಪ್ರತಿ ವರ್ಷ ಉಳಿತಾಯವಿಲ್ಲದೇ ವೆಚ್ಚ ಮಾಡಲಾಗುತ್ತಿದೆ. ದೇವಸ್ಥಾನದ ಹಣ ದುರುಪಯೋಗವಾಗುತ್ತಿದೆ. ಆದಾಯ ಹಾಗೂ ವೆಚ್ಚಕ್ಕೆ ಸಂಬಂಧಿಸಿದಂತೆ ಕಳೆದ 25 ವರ್ಷಗಳಿಂದ ಯಾವುದೇ ದಾಖಲೆ ಇಡದೆ, ಸಹಾಯಕ ಆಯುಕ್ತರು ಮತ್ತು ಮುಜರಾಯಿ ಇಲಾಖೆ ನೋಟಿಸ್ ನೀಡಿದ ಬಳಿಕ ದಾಖಲೆ ಸೃಷ್ಟಿಸಿರುವುದು ಕಂಡು ಬಂದಿದೆ ಎಂದು ತಿಳಿಸಿದ್ದ ಮುಜರಾಯಿ ಇಲಾಖೆ, ದೇವಾಲಯವನ್ನು ಸುಪರ್ದಿಗೆ ಪಡೆದು ಇತ್ತೀಚೆಗೆ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ದೇವಾಲಯ ಆಡಳಿತ ಮಂಡಳಿ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಸರ್ಕಾರದ ಆದೇಶಕ್ಕೆ ತಡೆ ನೀಡಲು ಏಕಸದಸ್ಯ ನ್ಯಾಯಪೀಠ ನಿರಾಕರಿಸಿತ್ತು. ಮೂಲ ಅರ್ಜಿ ವಿಚಾರಣೆ ಇನ್ನೂ ಬಾಕಿ ಇದೆ.
Related Articles
Thank you for your comment. It is awaiting moderation.
Comments (0)