ರಾಜ್ಯದ ಗ್ರಾಹಕ ಆಯೋಗಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ನಿರ್ದೇಶನ‌ ಕೋರಿದ್ದ ಪಿಐಎಲ್ ಇತ್ಯರ್ಥ

ಬೆಂಗಳೂರು: ಕರ್ನಾಟಕ ರಾಜ್ಯ ಗ್ರಾಹಕರ ವಾಜ್ಯಗಳ ಪರಿಹಾರ ಆಯೋಗದ ಸದಸ್ಯರು, ಜಿಲ್ಲಾ ಆಯೋಗಗಳಲ್ಲಿನ ಅಧ್ಯಕ್ಷರು ಮತ್ತು ಸದಸ್ಯರು ಸೇರಿ ಖಾಲಿ ಇರುವ 61 ಹುದ್ದೆಗಳನ್ನು ಭರ್ತಿ ಮಾಡುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ.

ಬೆಂಗಳೂರಿನ‌ ವಕೀಲೆ ಸುಧಾ ಕಾಟ್ವ ಸಲ್ಲಿಸಿದ್ದ ಅರ್ಜಿ ಕುರಿತು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಗಳ ಅಧ್ಯಕ್ಷರು ಹಾಗೂ ಸದಸ್ಯರ ನೇಮಕಾತಿಗೆ ಸಂಬಂಧಿಸಿದಂತೆ 4 ತಿಂಗಳಲ್ಲಿ ಕೇಂದ್ರ ಸರ್ಕಾರ ನಿಯಮಗಳನ್ನು ರೂಪಿಸಬೇಕು. ಅದಾದ ನಾಲ್ಕು ತಿಂಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಆಯಾ ರಾಜ್ಯಗಳು ಕ್ರಮಗಳು ಕೈಗೊಳ್ಳಬೇಕು ಎಂದು 2025ರ ಮೇ 21ರಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಸುಪ್ರೀಂಕೋರ್ಟ್‌ನ ಈ ಆದೇಶಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬದ್ಧರಾಗಿರಬೇಕಾಗುತ್ತದೆ. ಆದ್ದರಿಂದ, ಈ ಅರ್ಜಿಯಲ್ಲಿ ಪ್ರತ್ಯೇಕ ಆದೇಶ ಹೊರಡಿಸುವ ಅವಶ್ಯಕತೆ ಇಲ್ಲ ಎಂದು ತಿಳಿಸಿ ಅರ್ಜಿ ವಿಲೇವಾರಿ ಮಾಡಿತು.

ಮನವಿ ಏನು?
ರಾಜ್ಯ ಗ್ರಾಹಕರ ಆಯೋಗದಲ್ಲಿ 8 ಸದಸ್ಯರ ಹುದ್ದೆಗಳು, ವಿವಿಧ ಜಿಲ್ಲಾ ಆಯೋಗಗಳ 18 ಅಧ್ಯಕ್ಷರು, 35 ಸದಸ್ಯರ ಹುದ್ದೆಗಳು ಖಾಲಿ ಇವೆ. ಅರ್ಜಿದಾರರ ಮನವಿ ಬಳಿಕ 9 ತಿಂಗಳ ಹಿಂದೆ ಆಯೋಗದ ಅಧ್ಯಕ್ಷರ ನೇಮಕವಾಗಿದೆ. ಉಳಿದಂತೆ 61 ಹುದ್ದೆಗಳು ಖಾಲಿ ಇವೆ. ಇದರಿಂದ, ಆಯೋಗದಲ್ಲಿ ಸರಿಯಾಗಿ ವಾಜ್ಯಗಳ ವಿಚಾರಣೆ ನಡೆಯುತ್ತಿಲ್ಲ. 10 ಸಾವಿರಕ್ಕೂ ಅಧಿಕ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ. ಕೇಂದ್ರ ಸರ್ಕಾರ ನಿಯಮಗಳನ್ನು ರೂಪಿಸುವವರೆಗೆ ಈಗಿರುವ ನಿಯಮಗಳಡಿ ಅಧ್ಯಕ್ಷ ಹಾಗೂ ಸದಸ್ಯರ ಹುದ್ದೆಗಳನ್ನು ಭರ್ತಿ ಮಾಡಲು ಅವಕಾಶವಿದ್ದು, ಅದರಂತೆ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

Related Articles

Comments (0)

Leave a Comment