ಉದ್ಯಮಿಗೆ 50 ಕೋಟಿ ರೂ. ನೀಡುವಂತೆ ಬೆದರಿಕೆಯೊಡ್ಡಿದ ಪ್ರಕರಣ; ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಬಲವಂತದ ಕ್ರಮ ಬೇಡವೆಂದ ಹೈಕೋರ್ಟ್

ಬೆಂಗಳೂರು: ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆಯ ಖರ್ಚಿಗೆ 50 ಕೋಟಿ ರೂ. ನೀಡುವಂತೆ ಉದ್ಯಮಿ ವಿಜಯ್‌ ತಾತಾಗೆ ಬೆದರಿಕೆ ಒಡ್ಡಿದ ಆರೋಪ ಸಂಬಂಧ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಬೆಂಗಳೂರಿನ ಅಮೃತಹಳ್ಳಿ ಠಾಣೆ ಪೊಲೀಸರಿಗೆ ಹೈಕೋರ್ಟ್ ನಿರ್ದೇಶಿಸಿದೆ.

ವಿಜಯ್‌ ತಾತಾ ನೀಡಿದ್ದ ದೂರು ಆಧರಿಸಿ ಅಮೃತಹಳ್ಳಿ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದುಗೊಳಿಸುವಂತೆ ಕೋರಿ ಎಚ್‌.ಡಿ. ಕುಮಾರಸ್ವಾಮಿ ಸಲ್ಲಿಸಿರುವ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿದೆ.

ಎಚ್.ಡಿ. ಕುಮಾರಸ್ವಾಮಿ ಪರ ವಕೀಲ ಎ.ವಿ. ನಿಶಾಂತ್‌ ವಾದ ಮಂಡಿಸಿ, ಇದೇ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ರಮೇಶ್‌ ಗೌಡ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್‌ ಅಕ್ಟೋಬರ್ 23ರಂದು ಆದೇಶಿಸಿದೆ ಎಂದು ಪೀಠದ ಗಮನಕ್ಕೆ ತಂದರು. ಅದನ್ನು ಪರಿಗಣಿಸಿದ ನ್ಯಾಯಪೀಠ, ಈ ಅರ್ಜಿದಾರರ (ಎಚ್‌.ಡಿ.ಕುಮಾರಸ್ವಾಮಿ) ವಿರುದ್ಧವೂ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಅಮೃತಹಳ್ಳಿ ಠಾಣೆ ಪೊಲೀಸರಿಗೆ ಸೂಚಿಸಿ ವಿಚಾರಣೆಯನ್ನು ನವೆಂಬರ್ 29ಕ್ಕೆ ಮುಂದೂಡಿತು.

ಪ್ರಕರಣವೇನು?
ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗಾಗಿ 50 ಕೋಟಿ ರೂ. ನೀಡಬೇಕು. ಇಲ್ಲವಾದರೆ, ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರಮೇಶ್‌ ಗೌಡ ಮತ್ತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ವಿಜಯ್ ತಾತಾ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮೊದಲಿಗೆ ಈ ದೂರಿನಲ್ಲಿ ಪರಿಗಣಿಸಬಹುದಾದ ಅಪರಾಧಗಳಿಲ್ಲ ಎಂದು ತಿಳಿಸಿ ಹಿಂಬರಹ (ಎನ್‌ಸಿಆರ್‌) ನೀಡಿದ್ದ ಪೊಲೀಸರು ನಂತರ ರಮೇಶ್‌ ಗೌಡ ಮತ್ತು ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು. ಈ ಎಫ್‌ಐಆರ್‌ ರದ್ದು ಕೋರಿ ಕುಮಾರಸ್ವಾಮಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

Related Articles

Comments (0)

Leave a Comment