ರಾಸಾಯನಿಕ ಗೊಬ್ಬರ ಗೋದಾಮಿನಿಂದ ಅಂತರ್ಜಲ ಮಾಲಿನ್ಯ ಆರೋಪ; ಅಧ್ಯಯನಕ್ಕೆ ತಂಡ ರಚಿಸಲು ಕೆಎಸ್‌ಪಿಸಿಬಿ ಅಧ್ಯಕ್ಷರಿಗೆ ಹೈಕೋರ್ಟ್ ಆದೇಶ
- by Jagan Ramesh
- January 6, 2025
- 33 Views
ಬೆಂಗಳೂರು: ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹುಬ್ಬರವಾಡಿ ಗ್ರಾಮದಲ್ಲಿ ರಾಸಾಯನಿಕ ಗೊಬ್ಬರ ಗೋದಾಮಿನ ಚಟವಟಿಕೆಯಿಂದ ಅಂತರ್ಜಲ ಮಲಿನಗೊಳ್ಳುತ್ತಿದೆ ಎಂದು ಆರೋಪಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಕೆಎಸ್‌ಪಿಸಿಬಿ) ನೋಟಿಸ್ ಜಾರಿಗೊಳಿಸಿರುವ ಹೈಕೋರ್ಟ್, ಅಂತರ್ಜಲ ಮಾಲಿನ್ಯದ ಕುರಿತು ಅಧ್ಯಯನ ನಡೆಸಲು ನಾಲ್ವರು ಸದಸ್ಯರ ತಂಡ ರಚನೆ ಮಾಡುವಂತೆ ಕೆಎಸ್‌ಪಿಸಿಬಿ ಅಧ್ಯಕ್ಷರಿಗೆ ನಿರ್ದೇಶಿಸಿದೆ.
ಹುಬ್ಬರವಾಡಿ ಗ್ರಾಮದ ನಿವಾಸಿ ಪಾಂಡುರಂಗ ಮಹಾದೇವ ಕಾಂಬ್ಳೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲ ಎಸ್. ತ್ರಿವಿಕ್ರಮ್ ವಾದ ಮಂಡಿಸಿ, ಹುಬ್ಬರವಾಡಿ ಗ್ರಾಮದಲ್ಲಿ ರಾಸಾಯನಿಕ ಗೊಬ್ಬರದ ಗೋದಾಮುಗಳು ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿನ ರಾಸಾಯನಿಕ ಭೂಮಿಯ ಮುಖಾಂತರ ಅಂತರ್ಜಲ ಸೇರುತ್ತಿದೆ. ಇದರಿಂದ, ಸ್ಥಳೀಯ ಗ್ರಾಮಸ್ಥರಿಗೆ ಏಕೈಕ ಕುಡಿಯುವ ನೀರಿನ ಮೂಲವಾಗಿರುವ ಕೊಳವೆಬಾವಿಯ ನೀರು ಸಹ ಮಲಿನಗೊಳ್ಳುತ್ತಿದೆ. ಗೋದಾಮಿನ ಪಕ್ಕದಲ್ಲಿಯೇ ಅಂಗನವಾಡಿ ಕೇಂದ್ರ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆಯಿದ್ದು, ಅಲ್ಲಿ 500ಕ್ಕೂ ಅಧಿಕ ಮಕ್ಕಳಿದ್ದಾರೆ. ಕಲುಷಿತ ನೀರಿನಿಂದಾಗಿ ಮಕ್ಕಳು ಹಾಗೂ ಗ್ರಾಮಸ್ಥರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಪೀಠ, ಅಂಗನವಾಡಿ ಕೇಂದ್ರವಿದೆ ಎಂದರೆ ಅಲ್ಲಿ ಮಧ್ಯಾಹ್ನದ ಬಿಸಿಯೂಟವನ್ನೂ ತಯಾರಿಸಲಾಗುತ್ತದೆ ಅಲ್ಲವೇ? ಆಹಾರ ತಯಾರಿಕೆಗೂ ಇದೇ ನೀರನ್ನು ಬಳಸಲಾಗುತ್ತದೆಯೇ ಎಂದು ಪ್ರಶ್ನಿಸಿತಲ್ಲದೆ, ಇದೂ ನಿಜಕ್ಕೂ ಗಂಭೀರ ವಿಚಾರವಾಗಿದೆ ಎಂದು ಆತಂಕ ವ್ಯಕ್ತಪಡಿಸಿತು.
ಸರ್ಕಾರದ ಪರ ವಕೀಲೆ ನಿಲೋಫರ್ ಅಕ್ಬರ್, ಈ ಪ್ರಕರಣದಲ್ಲಿ ಕೆಎಸ್‌ಪಿಸಿಬಿಯನ್ನು ಪ್ರತಿವಾದಿನ್ನಾಗಿಸುವುದು ಸೂಕ್ತವಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಅದನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯನ್ನೂ ಪ್ರತಿವಾದಿಯನ್ನಾಗಿಸಲು ಅರ್ಜಿದಾರರ ಪರ ವಕೀಲರಿಗೆ ಅನುಮತಿ ನೀಡಿತು. ಜತೆಗೆ, ಕೆಎಸ್‌ಪಿಬಿಸಿ ಪರ ವಕೀಲರಿಗೆ ನೋಟಿಸ್ ಜಾರಿಗೊಳಿಸಿ, ಜನವರಿ 30ರ ಒಳಗೆ ಪ್ರತಿಕ್ರಿಯಿಸುವಂತೆ ಸೂಚಿಸಿತು.
ಅಧ್ಯಯನಕ್ಕಾಗಿ ತಂಡ ರಚನೆಗೆ ಆದೇಶ:
ಪ್ರಕರಣದ ಗಂಭೀರತೆ ಪರಿಗಣಿಸಿದ ನ್ಯಾಯಪೀಠ, ಮಾಲಿನ್ಯ ನಿಯಂತ್ರಣ ಮಂಡಳಿಯ ಇಬ್ಬರು ಅಧಿಕಾರಿಗಳು, ಗ್ರಾಮೀಣ ನೀರು ಸರಬರಾಜು ಇಲಾಖೆಯ ಮುಖ್ಯ ಇಂಜಿನಿಯರ್ ಹಾಗೂ ರಾಯಬಾಗ ತಹಸೀಲ್ದಾರ್ ಅವರನ್ನೊಳಗೊಂಡ ನಾಲ್ವರು ಸದಸ್ಯರ ತಂಡವನ್ನು ಕೆಎಸ್‌ಪಿಸಿಬಿ ಅಧ್ಯಕ್ಷರು ರಚನೆ ಮಾಡಬೇಕು. ಮಂಡಳಿಯ ಹಿರಿಯ ಪರಿಸರ ಅಧಿಕಾರಿ (ಎಸ್‌ಇಒ) ತಂಡದ ನೇತೃತ್ವ ವಹಿಸಬೇಕು. ಆ ತಂಡವು, ಅರ್ಜಿಯಲ್ಲಿ ಆರೋಪಿಸಲಾದ ಸ್ಥಳಕ್ಕೆ ಭೇಟಿ ನೀಡಿ, ಸ್ಥಳದಲ್ಲಿ ಯಾವ ರೀತಿಯ ಮಾಲಿನ್ಯವಾಗುತ್ತಿದೆ. ಅದರಿಂದ, ಶಾಲೆಯ ಮಕ್ಕಳು ಹಾಗೂ ಗ್ರಾಮಸ್ಥರ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತಿದೆ. ರಾಸಾಯನಿಕ ಗೊಬ್ಬರ ಗೋದಾಮುಗಳ ಕಾರ್ಯಚಟವಟಿಕೆಯಿಂದ ಅಂತರ್ಜಲ ಮಲಿನಗೊಳ್ಳುತ್ತಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಿ, ಮುಂದಿನ ವಿಚಾರಣೆ ವೇಳೆಗೆ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿತು.
ಅರ್ಜಿದಾರರ ಆಕ್ಷೇಪವೇನು?
ಹುಬ್ಬರವಾಡಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರವೂ ಆಗಿರುವ ಸರ್ಕಾರಿ ಪ್ರಾಥಮಿಕ ಶಾಲೆ ಕಳೆದ 45 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. 7 ವರ್ಷಗಳ ಹಿಂದೆ ಶಾಲೆಯ ಪಕ್ಕದಲ್ಲೇ ರಾಸಾಯನಿಕ ಗೊಬ್ಬರದ ಗೋದಾಮಿಗೆ ಅನುಮತಿ ನೀಡಲಾಗಿದೆ. ಅಲ್ಲಿ ರಾಸಾಯನಿಕ ಗೊಬ್ಬರಗಳ ಚೀಲಗಳನ್ನು ಲೋಡಿಂಗ್ ಹಾಗೂ ಅನ್‌ಲೋಡಿಂಗ್ ನಡೆಸಲಾಗುತ್ತಿದೆ. ಈ ವೇಳೆ ಚೀಲಗಳಿಂದ ಏಳುವ ರಾಸಾಯನಿಕ ಧೂಳು ಸುತ್ತಲಿನ ಪ್ರದೇಶಗಳಿಗೆ ಹಬ್ಬುತ್ತಿದ್ದು, ಪಕ್ಕದಲ್ಲೇ ಇರುವ ಶಾಲೆಗೂ ತಲುಪುತ್ತಿದೆ. ರಾಸಾಯನಿಕ ಭೂಮಿಯ ಮುಖಾಂತರ ಅಂತರ್ಜಲ ಸೇರುತ್ತಿದೆ. ಇದಲ್ಲದೆ, ಗೋದಾಮಿನ ಕಾರ್ಮಿಕರು ತೆರೆದ ಪ್ರದೇಶದಲ್ಲೇ ಟ್ರಕ್ ಮತ್ತು ಲಾರಿಗಳನ್ನು ತೊಳೆಯುವ ಜತೆಗೆ, ಅವರೂ ಸಹ ಅಲ್ಲಿಯೇ ಸ್ನಾನ ಮಾಡುತ್ತಾರೆ. ಆ ನೀರಿನಲ್ಲಿರುವ ರಾಸಾಯನಿಕ ಸಹ ಅಂತರ್ಜಲ ಸೇರುತ್ತಿದೆ. ಇದರಿಂದ, ಇಡೀ ಗ್ರಾಮ ಹಾಗೂ ಶಾಲೆ ಮತ್ತು ಅಂಗನವಾಡಿ ಕೇಂದ್ರದ ಮಕ್ಕಳಿಗೆ ಲಭ್ಯವಿರುವ ಏಕೈಕ ಕುಡಿಯುವ ನೀರಿನ ಮೂಲವಾಗಿರುವ ಕೊಳವೆ ಬಾವಿಯ ನೀರೂ ಮಲಿನಗೊಳತ್ತಿದೆ. ಕಲುಷಿತ ನೀರಿನ ದೀರ್ಘ ಕಾಲದ ಬಳಕೆಯಿಂದ ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
Related Articles
Thank you for your comment. It is awaiting moderation.
Comments (0)